ದೇಶದ ಅತಿ ಉದ್ದದ ಸಮುದ್ರ ಸೇತುವೆಗೆ ಮನಸೋತ ವಾಹನ ಸವಾರರು: ಹೊಸ ದಾಖಲೆ.. 30 ನಿಮಿಷ ಪ್ರಯಾಣ!
ಭಾರತದ ಅತಿ ಉದ್ದದ ಸಮುದ್ರ ಸೇತುವೆ 'ಅಟಲ್ ಸೇತು' (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ - Mumbai Trans Harbour Link) ಲೋಕಾರ್ಪಣೆಗೊಂಡ 1 ತಿಂಗಳಲ್ಲಿಯೇ 8 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸಿವೆ. ಈ ಬಗ್ಗೆ ಮುಂಬೈ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ - MMRDA) ಮಾಹಿತಿ ನೀಡಿದೆ.
ಅಟಲ್ ಸೇತುವನ್ನು ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಜನವರಿ 13ರಿಂದ ಇಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಅಟಲ್ ಸೇತು), ಸೆವ್ರಿ ಹಾಗೂ ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಇದರಿಂದ 2 ಗಂಟೆಯಿದ್ದ ಪ್ರಯಾಣದ ಅವಧಿಯು 30 ನಿಮಿಷಗಳಿಗೆ ಕಡಿಮೆಯಾಗಿದೆ.

ಈ ಸೇತುವೆಯು ಮಹಾರಾಷ್ಟ್ರದ 2 ಪ್ರಮುಖ ನಗರಗಳನ್ನು ಬೆಸೆಯುವ ಮುಂಬೈ - ಪುಣೆ ಎಕ್ಸ್‌ಪ್ರೆಸ್‌ವೇಗೂ ಕೊಂಡಿಯಾಗಿದೆ. ಇದು 21.8 ಕಿಲೋಮೀಟರ್ ಉದ್ದವಿದ್ದು, 6 ಪಥದ ರಸ್ತೆಯನ್ನು ಹೊಂದಿದೆ. ಸಮುದ್ರದ ಮೇಲೆ 16.50 ಕಿಲೋಮೀಟರ್ ನೆಲದ ಮೇಲೆ 5.50 ಕಿಲೋಮೀಟರ್ ರಸ್ತೆಯಿದೆ. ಅಟಲ್ ಸೇತು ಪ್ರತಿದಿನ ಸುಮಾರು 70,000 ವಾಹನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ನಿರ್ಮಾಣಕ್ಕೆ 177,903 ಮೆಟ್ರಿಕ್ ಟನ್ ಉಕ್ಕನ್ನು ಉಪಯೋಗಿಸಲಾಗಿದೆ. ಇದು 500 ಬೋಯಿಂಗ್ ವಿಮಾನಗಳ ತೂಕಕ್ಕೆ ಸಮವಾಗಿದೆ. ಅಟಲ್ ಸೇತು ಮೇಲೆ ಹೆಚ್ಚಿನ ವಾಹನ ಸಂಚಾರವಾಗಿರುವ ಬಗ್ಗೆ ಮಾತನಾಡಿರುವ ಎಂಎಂಆರ್‌ಡಿಎ ಆಯುಕ್ತ ಸಂಜಯ್ ಮುಖರ್ಜಿ, 'ಈ ಸೇತುವೆ ಮೇಲೆ ಇದುವರೆಗೆ 8 ಲಕ್ಷಕ್ಕೂ ಅಧಿಕ ವಾಹನಗಳು ಓಡಾಡಿವೆ. ಮುಂಬೈನಿಂದ ನವಿ ಮುಂಬೈ ತಲುಪಲು ಕೇವಲ 20 ನಿಮಿಷವಾಗುತ್ತದೆ' ಎಂದು ಹೇಳಿದ್ದಾರೆ.

ಈ ಅಟಲ್ ಸೇತು ಮೇಲೆ ಟೋಲ್ ಪಾವತಿಸದೆ ವಾಹನಗಳು ಸಂಚಾರಿಸುವುದು ಆತಂಕಕಾರಿ ವಿಷಯವಾಗಿದೆ ಎಂದು ಸಂಜಯ್ ಮುಖರ್ಜಿ ತಿಳಿಸಿದ್ದು, ಜನವರಿ 12ರಂದು ಸೇತುವೆ ಉದ್ಘಾಟನೆಯಾದ ನಂತರ ಶೇಕಡ 4% ವಾಹನಗಳು ಟೋಲ್ ಶುಲ್ಕ ಕಟ್ಟದೆ ಓಡಾಡಿದ್ದು, ಪ್ರತಿದಿನ ರೂ.30,000 ನಷ್ಟವಾಗಿರುವುದು ಬೆಳಕಿಗೆ ಬಂದಿದೆ. ಕಳೆದ 1 ತಿಂಗಳಲ್ಲಿ ಸೇತುವೆಯಲ್ಲಿ 4 ಅಪಘಾತ ಪ್ರಕರಣಗಳು ದಾಖಲಾಗಿದ್ದು, 5 ಮಂದಿ ಗಾಯಗೊಂಡಿದ್ದಾರೆ.
ಸೇತುವೆಯಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. 400 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅವುಗಳಲ್ಲಿ 36 ಸೇತುವೆ ಕೆಳಗಿವೆ. ಸೆನ್ಸಾರ್ & ಹೈ ರೆಸಲ್ಯೂಶನ್ ಕ್ಯಾಮೆರಾ ವ್ಯವಸ್ಥೆಯಿಂದ ಚಲಿಸುತ್ತಿದ್ದರೂ ವಾಹನಗಳ ನಂಬರ್ ಪ್ಲೇಟ್ ಅನ್ನು ಸುಲಭವಾಗಿ ಸೆರೆಹಿಡಿಯಬಹುದು. ಕತ್ತಲು ಮತ್ತು ಮಂಜು ಬಿದ್ದ ಸನ್ನಿವೇಶದಲ್ಲಿಯೂ ಕಾರ್ಯನಿರ್ವಹಿಸಬಲ್ಲ ಸೂಕ್ಷ್ಮ ಕ್ಯಾಮೆರಾಗಳಿವೆ.

ಅತಿವೇಗದಲ್ಲಿರುವ ವಾಹನಗಳನ್ನು ಪತ್ತೆಹಚ್ಚಲು ಸ್ಪೀಡ್ ಗನ್ ಬಳಕೆ ಮಾಡಲಾಗಿದ್ದು, ಕಾಲ್ ಸೆಂಟರ್ ಮತ್ತು 24X7 ಕಂಟ್ರೋಲ್ ರೂಮ್ ವ್ಯವಸ್ಥೆಯು ಇದೆ. ಈ ಸೇತುವೆ ನಿರ್ಮಾಣಕ್ಕೆ ರೂ.17,840 ಕೋಟಿ ವ್ಯಯಿಸಲಾಗಿದ್ದು, ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೀಡಿರುವ ಕೊಡುಗೆ ಗೌರವಾರ್ಥ ಈ ಸೇತುವೆಗೆ ಅಟಲ್ ಸೇತು (Atal Setu) ಎಂಬ ಹೆಸರನ್ನು ಇಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications