ಎರಡು ದಶಕದ ಕನಸು: ಇಂಡಿಯಾ to ಥೈಲ್ಯಾಂಡ್.. ಬಸ್ಸಿನಲ್ಲಿಯೇ ಹೋಗಬಹುದು!
ವಿದೇಶ ಪ್ರವಾಸ ಮಾಡಬೇಕೆಂಬ ಆಸೆ ಬಹುತೇಕ ಜನರಿಗೆ ಇರುತ್ತದೆ. ಆದರೆ, ಪ್ರಯಾಣ ದುಬಾರಿ ಎಂಬ ಕಾರಣಕ್ಕೆ ಅಂತಹ ಆಸೆಗಳನ್ನು ಕೈಬಿಡುತ್ತಾರೆ. ಶೀಘ್ರದಲ್ಲೇ ಭಾರತದಿಂದ ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್ ದೇಶಗಳಿಗೆ ರಸ್ತೆ ಮುಖಂತರವೇ ಹೋಗಬಹುದು. ಸದ್ಯ, ಈ ಬಗ್ಗೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಮಹತ್ವಾಕಾಂಕ್ಷೆಯ ಭಾರತ - ಮ್ಯಾನ್ಮಾರ್ - ಥಾಯ್ಲೆಂಡ್ (India - Myanmar - Thailand) ದೇಶಗಳ ಮಧ್ಯೆ ಹೆದ್ದಾರಿ ಕಾಮಗಾರಿ ಶೇಕಡ 70% ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ. ಮೂರು ದೇಶಗಳು ಸುಮಾರು 1,400 ಕಿಲೋಮೀಟರ್ ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿವೆ.

ಹೆದ್ದಾರಿ ನಿರ್ಮಾಣದಿಂದ ಭಾರತವು ಆಗ್ನೇಯ ಏಷ್ಯಾ ದೇಶಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲಿದೆ. ಜೊತೆಗೆ ಭಾರತ, ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ ದೇಶಗಳ ನಡುವೆ ವ್ಯಾಪಾರ ವಹಿವಾಟು, ಆರೋಗ್ಯ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಬೆಳೆವಣಿಗೆಯಾಗುತ್ತದೆ. ಇವೆಲ್ಲ ಕಾರಣಗಳಿಗೆ ಈ ಹೆದ್ದಾರಿ ನಿರ್ಮಾಣ ತೀರಾ ಅಗತ್ಯವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈ ಹೆದ್ದಾರಿಯು ಭಾರತದ ಮಣಿಪುರದ ಮೋರೆಯಿಂದ ಮ್ಯಾನ್ಮಾರ್ ಮೂಲಕ ಥೈಲ್ಯಾಂಡ್‌ನ ಮೇಸೋಟ್ ಪಟ್ಟಣವನ್ನು ಸಂಪರ್ಕಿಸುತ್ತದೆ. ಮೂರು ದೇಶಗಳ ನಡುವಿನ ಹೆದ್ದಾರಿ ನಿರ್ಮಾಣ ಕಾಮಗಾರಿ ಮುಕ್ತಾಯಗೊಳ್ಳುವ ಸಮಯ ಹಾಗೂ ಯಾವಾಗ ಲೋಕಾರ್ಪಣೆಗೊಳ್ಳಲಿದೆ ಎಂಬುದರ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಯಾವುದೇ ಮಾಹಿತಿ ನೀಡಿಲ್ಲ. ಕಾಮಗಾರಿಯ ಪ್ರಗತಿಯನ್ನು ನೋಡಿದರೆ, ಶೀಘ್ರವೇ ಉದ್ಘಾಟನೆಗೊಳ್ಳುವುದು ಖಚಿತ.

ಭಾರತ, ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್ ದೇಶಗಳ ನಡುವೆ ಹೆದ್ದಾರಿ ನಿರ್ಮಾಣಕ್ಕೆ ಎರಡು ದಶಕಗಳ ಕನಸಿದೆ. ಈ ಸಂಬಧ 2002ರಲ್ಲಿ ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು, ಇವರೆಡು ದೇಶದ ಸಚಿವರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದ್ದರು. ಆದರೆ, ನಾನಾ ಕಾರಣಗಳಿಗೆ ಕಾಮಗಾರಿ ವಿಳಂಬವಾಗಿತ್ತು. ಸದ್ಯ, ವೇಗ ಪಡೆದಿದ್ದು, ಶೇಕಡ 70% ಮುಕ್ತಾಯಗೊಂಡಿದೆ.
ಇದಿಷ್ಟೇ ಅಲ್ಲದೆ, ಕೇಂದ್ರ ಸರ್ಕಾರ ದೇಶದಲ್ಲೂ ರಸ್ತೆ ನಿರ್ಮಾಣದಲ್ಲಿ ಮಹತ್ವದ ಸಾಧನೆ ಮಾಡಿದೆ. ರಸ್ತೆ ಜಾಲ ವಿಸ್ತರಣೆಯಲ್ಲಿ ಚೀನಾವನ್ನು ಹಿಂದಿಕ್ಕಿ, ಎರಡನೇ ಸ್ಥಾನಕ್ಕೆ ಬಂದಿದೆ. ಶೀಘ್ರದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕವನ್ನು ಹಿಂದಿಟ್ಟರೂ ಅಚ್ಚರಿಯಿಲ್ಲ. ದೇಶದಲ್ಲಿ ಪ್ರಸ್ತುತ 1.45 ಲಕ್ಷ ಕಿಲೋಮೀಟರ್ ಉದ್ದದ ರೋಡ್‌ಯಿದೆ.
ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ಬಹುತೇಕ ಪೂರ್ಣಗೊಳಿಸಿದೆ. ಇದು, ದೇಶದ ಅತ್ಯಂತ ಉದ್ದದ ಹೆದ್ದಾರಿಯಾಗಿದೆ. ಇದರೊಂದಿಗೆ ಬೆಂಗಳೂರು - ಮೈಸೂರು, ಮೀರತ್ - ದೆಹಲಿ, ಘಾಜಿಪುರ - ಲಕ್ನೋ ಎಕ್ಸ್‌ಪ್ರೆಸ್‌ವೇಗಳು ಪ್ರಮುಖವಾಗಿವೆ. ಜೊತೆಗೆ ರಸ್ತೆ ನಿರ್ಮಾಣದಲ್ಲಿ ಹೆದ್ದಾರಿ ಪ್ರಾಧಿಕಾರವು ಏಳು ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಒಟ್ಟಾರೆ, ಭಾರತ, ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್ ದೇಶಗಳ ನಡುವೆ ಹೆದ್ದಾರಿ ನಿರ್ಮಾಣದಿಂದ ವ್ಯಾಪಾರ ವಹಿವಾಟು, ಆರೋಗ್ಯ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಪ್ರಗತಿಯಾಗಿ, ಒಂದಷ್ಟು ಉದ್ಯೋಗವು ಸೃಷ್ಟಿಯಾಗುತ್ತದೆ. ಇವೆಲ್ಲ ಕಾರಣಗಳಿಗೆ ಈ ಹೆದ್ದಾರಿ ನಿರ್ಮಾಣವು ಮಹತ್ವದ ಪಾತ್ರವನ್ನು ವಹಿಸಲಿದ್ದು, ಎಲ್ಲರ ಚಿತ್ತ ಇದರ ಮೇಲೆ ನೆಟ್ಟಿದೆ.


Click it and Unblock the Notifications