Expressway: ಭಾರತದ 2ನೇ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಈ ವರ್ಷಾಂತ್ಯದೊಳಗೆ ಸಿದ್ದ... ಎಲ್ಲಿಂದ, ಎಲ್ಲಿಗೆ?
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ (2025) ಜರುಗುವ ಮಹಾ ಕುಂಭಮೇಳಕ್ಕೂ ಮುನ್ನ ಅಲ್ಲಿನ ಸರ್ಕಾರ ಜನರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರು, ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಅಥಾರಿಟಿ (ಯುಪಿಇಐಡಿಎ) ಅಧಿಕಾರಿಗಳಿಗೆ ಈ ವರ್ಷಾಂತ್ಯದೊಳಗೆ ಗಂಗಾ ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ಮುಗಿಸುವಂತೆ ಸೂಚಿಸಿದ್ದಾರೆ.
ಸದ್ಯ, ಉತ್ತರ ಪ್ರದೇಶವು ದೇಶದಲ್ಲಿಯೇ ಅತಿಹೆಚ್ಚು ಎಕ್ಸ್‌ಪ್ರೆಸ್‌ವೇ ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 6 ಹೆದ್ದಾರಿಗಳು ಬಳಕೆಗೆ ಲಭ್ಯವಿದ್ದು, 7 ಎಕ್ಸ್‌ಪ್ರೆಸ್‌ವೇಗಳ ಕಾಮಗಾರಿ ಭರದಿಂದ ಸಾಗುತ್ತಿದೆ. ಅದರಲ್ಲಿ ಮಹತ್ವಾಕಾಂಕ್ಷೆಯ ಗಂಗಾ ಎಕ್ಸ್‌ಪ್ರೆಸ್‌ವೇ (Ganga Expressway) ಕೂಡ ಒಂದಾಗಿದ್ದು, 594 ಕಿಲೋಮೀಟರ್ ನ ಈ ಹೆದ್ದಾರಿ ನಿರ್ಮಾಣಗೊಂಡ ಮೇಲೆ ಭಾರತದ 2ನೇ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಎಂಬ ಹೆಗ್ಗಳಿಕೆಗೆ ಭಾಜನವಾಗಲಿದೆ.

ಮೊದಲ ಸ್ಥಾನದಲ್ಲಿ ಮುಂಬೈ - ನಾಗಪುರ ಎಕ್ಸ್‌ಪ್ರೆಸ್‌ವೇ (Mumbai-Nagpur Expressway) ಇದೆ. ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಯುಪಿಇಐಡಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, 2025ರಲ್ಲಿ ಮಹಾ ಕುಂಭಮೇಳ ಜರುಗಲಿದೆ. ಯಾತ್ರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 2024ರ ಅಂತ್ಯದೊಳಗೆ ಬಹುನಿರೀಕ್ಷಿತ ಗಂಗಾ ಎಕ್ಸ್‌ಪ್ರೆಸ್‌ವೇಯನ್ನು ಲೋಕಾರ್ಪಣೆಗೆ ಸಿದ್ದಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ (Uttar Pradesh) ರಾಜ್ಯದ 12 ಜಿಲ್ಲೆಯ 518 ಹಳ್ಳಿಗಳ ಮೂಲಕ ಈ ಎಕ್ಸ್‌ಪ್ರೆಸ್‌ವೇ ಹಾದುಹೋಗುತ್ತದೆ. ಉದ್ಘಾಟನೆಗೊಂಡ ಬಳಿಕ, ಮೀರತ್‌ನಿಂದ ಪ್ರಯಾಗ್‌ರಾಜ್‌ಗೆ ಹಾಪುರ್, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬದೌನ್, ಶಹಜಹಾನ್‌ಪುರ, ಹರ್ದೋಯ್, ಉನ್ನಾವ್, ರಾಯ್ ಬರೇಲಿ ಹಾಗೂ ಪ್ರತಾಪ್‌ಗಢ ಮಾರ್ಗವಾಗಿ ಕೆಲವೇ ಗಂಟೆಗಳಲ್ಲಿ ತಲುಪಬಹುದು. ಈಗ 11 ಗಂಟೆ ಪ್ರಯಾಣದ ಅವಧಿಯಿದೆ.

ಗಂಗಾ ಎಕ್ಸ್‌ಪ್ರೆಸ್‌ವೇ (Ganga Expressway) ಮೀರತ್-ಬುಲಂದ್‌ಶಹರ್ (NH 334) ಸಮೀಪದ ಬಿಜೌಲಿ ಗ್ರಾಮದಿಂದ ಪ್ರಾರಂಭಗೊಂಡು ಪ್ರಯಾಗರಾಜ್ (NH 19) ಹತ್ತಿರದ ಜುದಾಪುರ್ ದಾದು ಗ್ರಾಮದ ಬಳಿ ಮುಕ್ತಾಯಗೊಳ್ಳುತ್ತದೆ. ಈ ಹೆದ್ದಾರಿ ಕಾಮಗಾರಿಗೆ ಒಟ್ಟು ರೂ.36,230 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಸುಮಾರು 7467 ಹೆಕ್ಟೇರ್ ಪ್ರದೇಶದಲ್ಲಿ ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಿಸಲಾಗುತ್ತಿದೆ.
6 ಪಥಗಳನ್ನು ಒಳಗೊಂಡಂತೆ ಈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಮುಂಬರುವ ವರ್ಷಗಳಲ್ಲಿ ವಾಹನ ದಟ್ಟಣೆಗೆ ಅನುಗುಣವಾಗಿ 8 ಪಥಗಳವರೆಗೆ ವಿಸ್ತರಿಸಬಹುದು. ನೂತನ ಹೆದ್ದಾರಿಯಲ್ಲಿ ವಾಹನಗಳ ವೇಗಮಿತಿಯನ್ನು ಗಂಟೆಗೆ 120 ಕಿ.ಮೀ ಸೀಮಿತಗೊಳಿಸಬಹುದು ಎನ್ನಲಾಗಿದೆ. ಎಕ್ಸ್‌ಪ್ರೆಸ್‌ವೇಯ 9 ಕಡೆ ಪ್ರಯಾಣಿಕರ ಅನುಕೂಲಕ್ಕಾಗಿ ಶೌಚಾಲಯ ಸೇರಿದಂತೆ ಸಾರ್ವಜನಿಕ ಸೌಕರ್ಯ ಸಂಕೀರ್ಣವನ್ನು ಸ್ಥಾಪಿಸಲು ಸಹ ತೀರ್ಮಾನಿಸಲಾಗಿದೆ.
ಮೀರತ್ ಮತ್ತು ಪ್ರಯಾಗ್‌ರಾಜ್ ಸಮೀಪ ಎರಡು ಟೋಲ್ ಪ್ಲಾಜಾಗಳನ್ನು ಸ್ಥಾಪಿಸಲು ಯೋಜಿಸಲಾಗಿದ್ದು, ಇದೇ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಭಾಗವಾಗಿ ಗಂಗಾ ನದಿ (960 ಮೀಟರ್) ಮತ್ತು ರಾಮಗಂಗಾ ನದಿ (720 ಮೀಟರ್) ಮೇಲೆ 2 ದೊಡ್ಡ ಸೇತುವೆ ನಿರ್ಮಿಸಲು ನಿರ್ಧರಿಸಲಾಗಿದೆ. ಇನ್ನು, ಗಂಗಾ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಕೇವಲ ಉತ್ತರ ಪದೇಶ ಜನರಿಗೆ ಮಾತ್ರವಲ್ಲ, ಇಲ್ಲಿನ ಧಾರ್ಮಿಕ ಕ್ಷೇತ್ರಗಳಿಗೆ ದೇಶದ ನಾನಾ ಭಾಗಗಳಿಂದ ಬರುವ ಯಾತ್ರಿಕರಿಗೂ ಭಾರೀ ಅನುಕೂಲವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications