India - Sri Lanka Sea Bridge: ಭಾರತ - ಶ್ರೀಲಂಕಾ ಮಧ್ಯೆ ಶೀಘ್ರ 23 ಕಿ.ಮೀ ಉದ್ದದ ಸಮುದ್ರ ಸೇತುವೆ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಭಾರತ - ಶ್ರೀಲಂಕಾ ನಡುವೆ ಸಮುದ್ರ ಸೇತುವೆ (India - Sri Lanka Sea Bridge) ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎನ್ನಲಾಗಿದೆ. ಉದ್ದೇಶಿತ 23 ಕಿಲೋಮೀಟರ್ ಉದ್ದದ ಈ ಸೇತುವೆ, ತಮಿಳುನಾಡಿನ ಧನುಷ್ಕೋಡಿ (Dhanushkodi)ಯಿಂದ ಶ್ರೀಲಂಕಾದ ತಲೈಮನ್ನಾರ್ (Talaimannar)ವನ್ನು ಸಂಪರ್ಕಿಸಬಹುದು.
ಎರಡು ದೇಶಗಳ ನಡುವೆ ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗೆ ಉತ್ತೇಜಿಸುವ ಸಲುವಾಗಿ, ಸೇತುವೆ ನಿರ್ಮಾಣಕ್ಕಾಗಿ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರವು ಕಾರ್ಯಸಾಧ್ಯತಾ ಅಧ್ಯಯನ (Feasibility Study) ನಡೆಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪುರಾಣಗಳ ಪ್ರಕಾರ, ರಾವಣನ ಸಂಹಾರಕ್ಕೆ ಶ್ರೀರಾಮನು ಇದೇ ಧನುಷ್ಕೋಡಿಯಿಂದ ತಲೈಮನ್ನಾರ್ ಮಧ್ಯೆ ಸೇತುವೆ (ರಾಮ ಸೇತು - Ram Setu) ನಿರ್ಮಾಣಕ್ಕೆ ಹನುಮಂತನಿಗೆ ಆಜ್ಞೆ ಮಾಡಿದ್ದನು.

23 ಕಿಲೋಮೀಟರ್ ಉದ್ದದ ಹೊಸ 'ರಾಮ ಸೇತು' ರಸ್ತೆ/ರೈಲು ಸೇತುವೆ ಪಾಕ್ ಜಲಸಂಧಿ (Palk Strait) ಮೂಲಕ ಭಾರತ ಹಾಗೂ ಶ್ರೀಲಂಕಾವನ್ನು ಸಂಪರ್ಕಿಸಲಿದೆ. ಸೇತುವೆ ನಿರ್ಮಾಣಗೊಂಡ ಮೇಲೆ ಈಗಿರುವ ಸಾರಿಗೆ ವೆಚ್ಚ (Transport Cost) ಶೇಕಡ 50% ಕಡಿಮೆಯಾಗಲಿದೆ ಎನ್ನಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಈ ಸೇತುವೆಯನ್ನು ನಿರ್ಮಿಸಲಿದೆ ಎಂದು ಹೇಳಲಾಗಿದೆ.
ಕಳೆದ ವರ್ಷದ ಜುಲೈನಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ದೆಹಲಿಗೆ ಭೇಟಿ ನೀಡಿದ್ದರು. ಆ ವೇಳೆ ಟ್ರಿಂಕೋಮಲಿ ಮತ್ತು ಕೊಲಂಬೊ ಬಂದರುಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಎರಡು ದೇಶಗಳು ಒಪ್ಪಿಗೆ ಸೂಚಿಸಿದ್ದವು. ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (External Affairs Ministry), ಈ ಕುರಿತು ಸಂಬಂಧಪಟ್ಟ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿತ್ತು.
ವಿಸ್ತೃತ ವರದಿ ಸಿದ್ಧಪಡಿಸುವ ಮೊದಲೇ, ಭಾರತ ಹಾಗೂ ಶ್ರೀಲಂಕಾ ನಡುವೆ ಸಮುದ್ರ ಸೇತುವೆ ನಿರ್ಮಾಣ ಸಂಬಂಧ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಯೋಜನೆ ಹೊಂದಿರುವುದಿರುವುದಾಗಿ ವಿದೇಶಾಂಗ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಸೇತುವೆ ನಿರ್ಮಾಣದ ಬಗ್ಗೆ ದಶಕಗಳಿಂದ ಎರಡು ದೇಶಗಳ ನಡುವೆ ಚರ್ಚೆ ನಡೆಯುತ್ತಿದೆ.
2015ರ ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari), ವಿಕ್ರಮಸಿಂಘೆ ಅವರನ್ನು ಭೇಟಿಯಾದ ಬಳಿಕ, ರಸ್ತೆ/ ರೈಲು ಸೇತುವೆ ನಿರ್ಮಿಸುವ ಕುರಿತು ಮಾತನಾಡಿದ್ದರು. ಈ ಸೇತುವೆ ನಿರ್ಮಾಣಕ್ಕೆ ತಗಲುವ ಅಂದಾಜು ವೆಚ್ಚ ಒಳಗೊಂಡಂತೆ ಹೆಚ್ಚಿನ ಮಾಹಿತಿ ಮುಂಬರುವ ತಿಂಗಳಲ್ಲಿ ಸಿಗಲಿದೆ. ನೂತನ 'ರಾಮ ಸೇತು' ಎರಡು ದೇಶಗಳ ನಡುವೆ ಉತ್ತಮ ಭಾಂದವ್ಯ ಬೆಸೆಯಲು ಸಾಕಷ್ಟು ನೆರವಾಗಲಿದೆ.
ಇನ್ನು, ಭಾರತದ ಅತಿ ಉದ್ದದ ಸಮುದ್ರ ಸೇತುವೆ 'ಅಟಲ್ ಸೇತು' (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ - Mumbai Trans Harbour Link) ಜನವರಿ 12ರಂದು ಲೋಕಾರ್ಪಣೆಗೊಂಡಿದ್ದು, ಮುಂಬೈನಲ್ಲಿ ರೂ.17,840 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.
ಈ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಅಟಲ್ ಸೇತು), ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸದ್ಯವಿರುವ ಪ್ರಯಾಣದ ಅವಧಿ 2 ಗಂಟೆಯಿಂದ 15 - 20 ನಿಮಿಷಕ್ಕೆ ಕಡಿಮೆಯಾಗಲಿದೆ. ಜೊತೆಗೆ ಮಹಾರಾಷ್ಟ್ರದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ಮುಂಬೈ - ಪುಣೆ ಎಕ್ಸ್‌ಪ್ರೆಸ್‌ವೇ, ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕೊಂಡಿಯಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications