ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಕೂತು ರೀಲ್ ಮಾಡಿದ ಭೂಪ: ಬಿತ್ತು ರೂ.70 ಸಾವಿರ ದಂಡ
ಇಂದಿನ ದಿನಗಳಲ್ಲಿ ಯುವ ಜನತೆ ನಾನಾ ರೀತಿಯಲ್ಲಿ ಹಣ ಗಳಿಸುತ್ತಿದ್ದಾರೆ, ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಂತೂ ವಿಡಿಯೋಗಳನ್ನು ಪೋಸ್ಟ್ ಮಾಡುವುದರ ಮೂಲಕ ತಿಂಗಳಿಗೆ ಲಕ್ಷಾಂತರ ರುಪಾಯಿಗಳನ್ನು ಗಳಿಸುತ್ತಿದ್ದಾರೆ. ಆದರೆ ಹಲವಾರು ಬಾರಿ ಯುವಜನತೆ ತಮ್ಮ ಮೂರ್ಖತನಗಳ ವರ್ತನೆಗಳನ್ನು ತೋರುವುದರ ಮೂಲಕ ಸಾಮಾಜಿಕ ಜಾಲತಾಣಗಳ ದುರುಪಯೋಗ ಮಾಡುತ್ತಿದ್ದಾರೆ.
ಅದೇ ರೀತಿ ಇಲ್ಲೊಬ್ಬ ಭೂಪ ಚಲಿಸುತ್ತಿರುವ ಮಾರುತಿ ಸ್ವಿಫ್ಟ್ ಮೇಲೆ ಕೂತು ವಿಡಿಯೋ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಇದೀಗ ಬರೋಬ್ಬರಿ ಸುಮಾರು 70000 ರೂಪಾಯಿಗಳನ್ನು ದಂಡವಾಗಿ ಕಟ್ಟಿರುವ ಅಪರೂಪದ ಘಟನೆಯ ವಿಡಿಯೋವೊಂದನ್ನು ಉತ್ಕಾರ್ಷ್ ಸೋಲಂಕಿ ಎಂಬ ವ್ಯಕ್ತಿಯೊಬ್ಬ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಶೇರ್ ಮಾಡಿದ್ದಾನೆ. ಸುಮಾರು 32000 ಸಾವಿರ ಫೋಲೋವರ್ಸ್ ಹೊಂದಿರುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಉತ್ಕಾರ್ಷ್ ಸೋಲಂಕಿ ಪೋಸ್ಟ್ ಮಾಡಿದ್ದಾನೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರಿನ ಬೋನೆಟ್ ಮೇಲೆ ಕುಳಿತು ಸೆಲ್ಫೀ ವಿಡಿಯೋ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ಆತ ಬೋನೆಟ್ ಮೇಲೆ ಕೂತು ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾನೋ ಅಥವಾ ಸೋಷಿಯಲ್ ಮೀಡಿಯಾಗಳಲ್ಲಿ ಲೈಬ್ ಸ್ಟ್ರೀಮಿಂಗ್ ಮಾಡುತ್ತಿದ್ದಾನೋ ಎಂದು ಸರಿಯಾಗಿ ತಿಳಿದು ಬಂದಿಲ್ಲ. ಆದರೆ ಕಾರು ಮಾತ್ರ ನಿರಂತರವಾಗಿ ಹೆದ್ದಾರಿಯಲ್ಲಿ ಸಾಗುತ್ತಿದ್ದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ದವಾದಂತೆ ಕಾಣುತ್ತಿದೆ. ಚಲಿಸುತ್ತಿರುವ ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್‌ಗಳು ಕಾರಣಾಂತರಗಳಿಂದ ಮರೆ ಮಾಡಲಾಗಿದೆ.
ಇನ್ನು ಪೊಲೀಸರು ವಿಡಿಯೋವನ್ನು ನೋಡಿದ ಕೂಡಲೇ ಈತನ ವಿರುದ್ದ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಈತನ ವಿರುದ್ದ ಸುಮಾರು 70000 ರೂಪಾಯಿಗಳ ದಂಡ ವಿಧಿಸಿದ್ದು, ಯಾವ ಯಾವ ಸೆಕ್ಷನ್‌ಗಳಲ್ಲಿ ದಂಡವನ್ನು ವಿಧಿಸಿದ್ದಾರೆ ಎಂದು ತಿಳಿದು ಬಂದಿಲ್ಲ. ಉತ್ರಾಕ್ಷ್ ತನ್ನ ಇನ್ಸ್ಟಾಗ್ರಾಂನ ವಿಡಿಯೋದಲ್ಲೂ ಸಹ ಇದನ್ನೇ ಹಾಕಿದ್ದು, ವಿಡಿಯೋದಲ್ಲಿ 70000 ರೂಪಾಯಿ ರೀಲ್ ಎಂದು ಹಾಕಿದ್ದಾರೆ. ಇನ್ನು ಕಾರನ್ನು ಸಹ ಮಾಡಿಫೈ ಮಾಡಲಾಗಿದ್ದು ಅದಕ್ಕೂ ಸಹ ದಂಡ ವಿಧಿಸಿರಬಹುದು ಎಂಬ ಅನುಮಾನ ಮೂಡುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಯುವ ಜನತೆ ವಿಧ ವಿಧವಾದ ವಿಡಿಯೋಗಳನ್ನು ಮಾಡುವಂತಹ ಪ್ರಯೋಗಕ್ಕೆ ಕೈ ಹಾಕುತ್ತಿದ್ದಾರೆ. ಒಬ್ಬರಿಗಿಂತ ಇನ್ನೊಬ್ಬರು ವಿಭಿನ್ನವಾಗಿರಬೇಕು ಎಂಬ ಪ್ರಯತ್ನದಲ್ಲಿ ಈ ರೀತಿಯ ಅವಿವೇಕತನವನ್ನು ತೋರಿಸುವ ವಿಡಿಯೋಗಳನ್ನು ಹಾಕುತ್ತಿದ್ದಾರೆ. ಈ ರೀತಿ ವರ್ತಿಸುವ ಪ್ರತಿಯೊಬ್ಬ ವ್ಯಕ್ತಿಗಳು ಸಹ ಗಮನಿಸಬೇಕಾದ ಆಂಶವೆಂದರೆ ಇಂತಹ ವ್ಯಕ್ತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮಂದಿ ಹಿಂಬಾಲಿಸುತ್ತಾ ಇರುತ್ತಾರೆ. ಇವರ ಈ ವಿಡಿಯೋಗಳನ್ನು ನೋಡಿ ಅವರು ಸಹ ಅದೇ ರೀತಿ ಪ್ರಯತ್ನಿಸಲು ಆರಂಭಿಸಿ ಏನಾದರೂ ಅಪಾಯವಾದರೆ ಹೊಣೆ ಯಾರು.
ಇನ್ನು ಘಟನೆಗೆ ಸಂಭಂಧಿಸಿದಂತೆ ಯಾವುದೇ ಪ್ರಾಣಾಪಾಯಗಳಾಗಿಲ್ಲ ಎಂದು ತಿಳಿದು ಬಂದಿದ್ದು, ಆತನಿಗೆ ಪೊಲೀಸರು ದಂಡ ವಿಧಿಸಿದ ಮೇಲೆ ಬುದ್ದಿ ಮಾತು ಹೇಳಿ ಕಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಟಂಟ್ ಮಾಡುವುದನ್ನು ಭಾರತದಲ್ಲಿ ಸಂಪೂರ್ಣವಾಗಿ ನಿರೋಧಿಸಲಾಗಿದ್ದು, ಈ ರೀತಿಯ ಕೃತ್ಯಗಳೇನಾದರೂ ಪೊಲೀಸರ ಗಮನಕ್ಕೆ ಬಂದರೆ ಅಂತಹವರ ಮೇಲೆ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸ್ ದಾಖಲಿಸಬಹುದಾಗಿದೆ. ಇನ್ನು ಸ್ಟಂಟ್ ಮಾಡಲೇ ಬೇಕು ಎಂದಿರುವವರು ತಮ್ಮ ಖಾಸಗಿ ಸ್ಥಳಗಳನ್ನು ಬಳಸಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ವರ್ತನೆಗಳು ಇದೇ ಮೊದಲೇನಲ್ಲ. ಇದಕ್ಕಿಂತ ಹಿಂದೆಯೂ ಈ ರೀತಿಯಾದ ಅವಿವೇಕತನದ ವಿಡಿಯೋಗಳನ್ನು ನೋಡಿದ್ದೇವೆ. ಇತ್ತೀಚೆಗೂ ಸಹ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕುಡಿಯುತ್ತಾ ಹೆದ್ದಾರಿಯಲ್ಲಿ ಬೈಕ್ ಚಲಾಯಿಸುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೂಡಲೇ ಆತನನ್ನು ಬಂಧಿಸಿದ ಪೊಲೀಸರು ಸುಮಾರು 31 ಸಾವಿರ ರುಪಾಯಿಗಳ ದಂಡ ವಿಧಿಸಿದ್ದರು. ಕುಡಿದು ವಾಹನ ಚಲಾಯಿಸುವುದರಿಂದ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಎಂಬುದನ್ನು ಮರೆಯಬಾರದು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ಸ್ಟಂಟ್‌ಗಳನ್ನು ಮಾಡುವುದಕ್ಕೋಗಿ ಸಾರ್ವಜನಿಕರನ್ನು ಅಪಾಯಕ್ಕೆ ದೂಡುವುದು ಅಪರಾಧ. ಯಾರಿಗೆ ನಿಜಕ್ಕೂ ಈ ರೀತಿಯ ಸ್ಟಂಟ್‌ಗಳನ್ನು ಪ್ರಯತ್ನಿಸಬೇಕಾದರೆ ಖಾಸಗಿ ಜಾಗದಲ್ಲಿ ಪ್ರಯತ್ನಿಸುವುದು ಉತ್ತಮ. ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆ ಸಂದೇಶ ಕೊಡುವ ವಿಡಿಯೋಗಳನ್ನು ಹಾಕಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಬದಲು, ಅವರನ್ನೇ ಈ ರೀತಿಯ ಕೃತ್ಯಗಳನ್ನು ಮಾಡುವಂತೆ ಪ್ರೋತ್ಸಾಹ ನೀಡುವುದು ಸರಿಯಲ್ಲ. ಇನ್ನು ಈ ರೀತಿಯ ಘಟನೆಗಳು ನಿಮ್ಮ ಮುಂದೆ ಕಂಡು ಬಂದರೆ ಕೂಡಲೇ ಪೊಲೀಸರ ಗಮನಕ್ಕೆ ತರುವುದನ್ನು ಮರೆಯದಿರಿ.


Click it and Unblock the Notifications