ISRO ವೇಗಕ್ಕೆ ದೈತ್ಯ ದೇಶಗಳೇ ಕಂಗಾಲು... ಸೆ.2 ರಂದು ಸೂರ್ಯನೆಡೆಗೆ ಮುನ್ನುಗ್ಗಲಿದೆ Aditya-L1
ನಮ್ಮ ಇಸ್ರೋ ವಿಜ್ಞಾನಿಗಳ ತಾಕತ್ತು ಏನೆಂಬುದು ಚಂದ್ರಯಾನ-3 ಯಶಸ್ಸಿನ ಬಳಿಕ ವಿಶ್ವ ದೇಶಗಳಿಗೆ ಅರಿವಾಗಿದೆ. ಅತಿ ಕಡಿಮೆ ಬಜೆಟ್‌ನಲ್ಲಿ ಇದೇ ತಿಂಗಳ 23ರಂದು ಸಂಜೆ 6 ಗಂಟೆಗೆ ಇಸ್ರೋ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧೃವದಲ್ಲಿ ಇಳಿಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ.
ಚಂದ್ರಯಾನ-3 ಭವ್ಯ ಯಶಸ್ಸಿನ ನಂತರ, ಈಗ ನಮ್ಮ ಮುಂದಿನ ಟಾರ್ಗೆಟ್ ಸೂರ್ಯ ಎಂದು ಇಸ್ರೋ ತಿಳಿಸಿದೆ. ಇಸ್ರೋ ಸೆಪ್ಟೆಂಬರ್ 2 ರಂದು ಆದಿತ್ಯ L1 ಅನ್ನು ಉಡಾವಣೆ ಮಾಡಲು ಸಜ್ಜಾಗಿಬಿಟ್ಟಿದೆ. ಇದನ್ನು ಕಂಡು ವಿಶ್ವ ದೇಶಗಳಿಗೆ ಈಗ ನಡುಕ ಶುರುವಾಗಿದೆ. ಏಕೆಂದರೆ ಭಾರೀ ಬಜೆಟ್‌ನೊಂದಿಗೆ ಮಾಡುವ ಯೋಜನೆಗಳನ್ನು ನಮ್ಮ ಇಸ್ರೋ ಅತಿ ಕಡಿಮೆ ಬಜೆಟ್‌ನಲ್ಲಿ ಮುಗಿಸುತ್ತಿದೆ.

ಇದರಿಂದಾಗಿ ಇಸ್ರೋ ವಿಜ್ಞಾನಿಗಳನ್ನು ಕಂಡು ಜಗತ್ತಿನಾದ್ಯಂತದ ವಿಜ್ಞಾನಿಗಳು ಬೆರಗಾಗಿದ್ದಾರೆ. ಇಸ್ರೋ ಕೂಡ ತಮ್ಮ ಬಾಹ್ಯಾಕಾಶ ಸಾಧನೆಗಳನ್ನು ಇಲ್ಲಿಗೆ ನಿಲ್ಲಿಸದೇ ವಿರಾಮವಿಲ್ಲದೇ ಮುನ್ನುಗ್ಗುತ್ತಿದೆ. ಚಂದ್ರಯಾನದ ಯಶಸ್ಸಿನೊಂದಿಗೆ ಇಸ್ರೋ ಮುಂದಿನ ಹಂತಕ್ಕೆ ಈಗ ಸಿದ್ಧವಾಗಿಬಿಟ್ಟಿದೆ. ಪ್ರಸ್ತುತ, ಇಸ್ರೋ ಪೂರ್ಣ ಸ್ವಿಂಗ್‌ನಲ್ಲಿ ಚಂದ್ರನ ನಂತರ ಸೂರ್ಯನನ್ನು ಅನ್ವೇಷಿಸಲು ಆದಿತ್ಯ ಯೋಜನೆಯನ್ನು ಸಿದ್ಧಪಡಿಸಿದೆ.
ಇಸ್ರೋ ತನ್ನ ಉಪಗ್ರಹವನ್ನು ಸೂರ್ಯನ ಪ್ರಭಾವಲಯ ಕಕ್ಷೆಯಲ್ಲಿ L1 (ಲಾಗ್ರೇಂಜ್ ಪಾಯಿಂಟ್ 1) ಎಂದು ಕರೆಯಲಾಗುವ ಪ್ರದೇಶದಲ್ಲಿ ನಿಲ್ಲಿಸಲು ಮತ್ತು ಆ ಮೂಲಕ ಸೂರ್ಯನನ್ನು ಅಧ್ಯಯನ ಮಾಡಲು ಯೋಜಿಸಿದೆ. ಇಸ್ರೋ ಈ ಯೋಜನೆಗೆ ಆದಿತ್ಯ ಎಲ್1 ಎಂದು ಹೆಸರಿಟ್ಟಿದ್ದು, ಇದಕ್ಕಾಗಿ ಉಪಗ್ರಹ ಸಂಪೂರ್ಣ ಸಿದ್ಧವಾಗಿದೆ. ವಿವಿಧ ಪರೀಕ್ಷೆಗಳ ನಂತರ ಯೋಜನೆಯನ್ನು ಸಂಪೂರ್ಣವಾಗಿ ಸಿದ್ಧಪಡಿಸಲಾಗಿದೆ.

ಮೂಲಗಳ ಪ್ರಕಾರ ರಾಕೆಟ್ ಈಗ ಲಾಂಚ್ ಪ್ಯಾಡ್‌ನಲ್ಲಿ ಉಡಾವಣೆಗೆ ಸಿದ್ಧವಾಗಿದೆ. ಸದ್ಯ ಯೋಜನೆಯ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಸೆಪ್ಟೆಂಬರ್ 2 ರಂದು ಸೂರ್ಯನನ್ನು ಅಧ್ಯಯನ ಮಾಡಲು ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವಾದ ಆದಿತ್ಯ-ಎಲ್ 1 ಸೋಲಾರ್ ಮಿಷನ್ ಅನ್ನು ಉಡಾವಣೆ ಮಾಡುವುದಾಗಿ ಅಧಿಕೃತವಾಗಿ ಇಸ್ರೋ ಘೋಷಿಸಿದೆ.
ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11:50 ಕ್ಕೆ ಶ್ರೀಹರಿಕೋಟಾದಿಂದ "ಸೂರ್ಯನನ್ನು ಅಧ್ಯಯನ ಮಾಡಲು ಮೊದಲ ಬಾಹ್ಯಾಕಾಶ-ಆಧಾರಿತ ಭಾರತೀಯ ವೀಕ್ಷಣಾಲಯವಾದ ಆದಿತ್ಯ-ಎಲ್ 1 ರ ಉಡಾವಣೆಯು ನಿಗದಿಯಾಗಿದೆ. ಆದಿತ್ಯ L1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ಮಿಷನ್ ಆಗಿದೆ ಎಂದು ಇಸ್ರೋ ತಿಳಿಸಿದೆ.
ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಸೂರ್ಯ ಹಾಗೂ ಭೂಮಿಯ ನಡುವಿನ ಲಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ. L1 ಬಿಂದುವಿನ ಸುತ್ತಲಿನ ಹಾಲೋ ಕಕ್ಷೆಯಲ್ಲಿ ಇರಿಸಲಾದ ಉಪಗ್ರಹವು ಸೂರ್ಯನನ್ನು ನಿರಂತರವಾಗಿ ವೀಕ್ಷಿಸುವ ಪ್ರಮುಖ ಗುರಿಯನ್ನು ಹೊಂದಿದೆ.
ಇದು ಸೌರ ಚಟುವಟಿಕೆಗಳನ್ನು ವೀಕ್ಷಿಸುವಲ್ಲಿ ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತದೆ. ನೈಜ ಸಮಯದಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪರಿಣಾಮವನ್ನು ನೀಡುತ್ತದೆ. ವಿದ್ಯುತ್ಕಾಂತೀಯ ಕಣ ಮತ್ತು ಕಾಂತೀಯ ಕ್ಷೇತ್ರ ಶೋಧಕಗಳನ್ನು ಬಳಸಿಕೊಂಡು ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರಗಿನ ಪದರಗಳನ್ನು (ಕರೋನಾ) ವೀಕ್ಷಿಸಲು ಬಾಹ್ಯಾಕಾಶ ನೌಕೆಯು ಏಳು ಪೇಲೋಡ್‌ಗಳನ್ನು ಒಯ್ಯಲಿದೆ.

ಸೂರ್ಯನ ಮೇಲಿನ ವಾತಾವರಣದ (ಕ್ರೋಮೋಸ್ಫಿಯರ್ ಮತ್ತು ಕರೋನಾ) ಡೈನಾಮಿಕ್ಸ್ ಅಧ್ಯಯನ, ಕ್ರೋಮೋಸ್ಫಿರಿಕ್ ಮತ್ತು ಕರೋನಲ್ ಹೀಟಿಂಗ್, ಭಾಗಶಃ ಅಯಾನೀಕರಿಸಿದ ಪ್ಲಾಸ್ಮಾದ ಭೌತಶಾಸ್ತ್ರ, ಕರೋನಲ್ ಮಾಸ್ ಎಜೆಕ್ಷನ್‌ಗಳು ಮತ್ತು ಜ್ವಾಲೆಗಳ ಅಧ್ಯಯನ ಸೂರ್ಯನಿಂದ ಕಣದ ಡೈನಾಮಿಕ್ಸ್‌ನ ಅಧ್ಯಯನ ಮಾಡುವುದಾಗಿ ಇಸ್ರೋ ಹೊರಡಿಸಿದ ಅಧಿಕೃತ ಹೇಳಿಕೆ ತಿಳಿಸಿದೆ.
ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲು ಇಸ್ರೋ ತನ್ನ LVM3 ರಾಕೆಟ್ ಅನ್ನು ಬಳಸುತ್ತಿದೆ. ಆದಿತ್ಯ L1 ಬಾಹ್ಯಾಕಾಶ ನೌಕೆಯನ್ನು ಪೇಲೋಡ್ ಆಗಿ ಹೊಂದಿಸಲಾಗಿದೆ. ಈ ರಾಕೆಟ್ ಅನ್ನು ಭೂಮಿಯಿಂದ ನಿರ್ದಿಷ್ಟ ಕಿಲೋಮೀಟರ್ ದೂರಕ್ಕೆ ಸಾಗಿಸುತ್ತದೆ. ಬಳಿಕ ಅಲ್ಲಿಂದ ಆದಿತ್ಯ ಎಲ್1 ಉಪಗ್ರಹ ತನ್ನ ಪಯಣ ಆರಂಭಿಸಿ ಭೂಮಿಯಿಂದ ನಿಖರವಾಗಿ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಸೂರ್ಯನ ಕಕ್ಷೆಯ ಹಾಲೊ ಎಲ್1 ಪ್ರದೇಶವನ್ನು ಪ್ರವೇಶಿಸಲಿದೆ.


Click it and Unblock the Notifications