ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮನಸೋತ ಕನ್ನಡಿಗರು.. ಈ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರ ಓಡಾಟ!
ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸೆಮಿ-ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಕಲಬುರಗಿ (Kalaburagi) ಹಾಗೂ ಎಸ್‌ಎಂವಿಟಿ ಬೆಂಗಳೂರು (SMVT Bengaluru) ನಡುವೆಯೂ ಈ ವಂದೇ ಭಾರತ್ ರೈಲು ಓಡಾಟವನ್ನು ಮಾಡುತ್ತಿದ್ದು, ಹೆಚ್ಚಿನ ಟಿಕೆಟ್ ದರದ ಹೊರತಾಗಿಯೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಸ್‌ಎಂವಿಟಿ ಬೆಂಗಳೂರು ಮತ್ತು ಕಲಬುರಗಿ ಮಧ್ಯೆ ಸಂಚರಿಸುವ ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮಾರ್ಚ್.15 ರಿಂದ ಮೇ.7 ರವರೆಗೆ 21,016 ಮಂದಿ ಪ್ರಯಾಣಿಸಿದ್ದಾರೆ. ಇವೆರೆಡು ನಗರಗಳ ನಡುವೆ ನೂತನ ರೈಲು ಓಡಾಟವನ್ನು ಆರಂಭಿಸಿದ ಮೊದಲ 2 ವಾರಗಳಲ್ಲಿ (ಮಾರ್ಚ್.15 ರಿಂದ ಮಾರ್ಚ್.30) ಶೇಕಡ 67% ಸೀಟುಗಳು ಭರ್ತಿಯಾಗಿದ್ದವು. ಏಪ್ರಿಲ್‌ನಲ್ಲಿ ಅತ್ಯಧಿಕ ಪ್ರಯಾಣಿಕರು ಸಂಚಾರವನ್ನು ನಡೆಸಿದ್ದು, 92% ಸೀಟುಗಳು ತುಂಬಿದ್ದವು. ಸದ್ಯ ಅದು ಶೇಕಡ 93% ಇದೆ.

ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಚೇರ್ ಕಾರ್ (ಸಿಸಿ)ನಲ್ಲಿ 393 ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್ (ಇಸಿ)ನಲ್ಲಿ 38 ಜನರು ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಕಲಬುರಗಿ ಹಾಗೂ ಬೆಂಗಳೂರು ಮಾರ್ಗದಲ್ಲಿ ಶುಕ್ರವಾರ ಹೊರತುಪಡಿಸಿ, ವಾರದ 6 ದಿನಗಳು ಸಂಚರಿಸುತ್ತದೆ. ಬೆಂಗಳೂರು - ಕಲಬುರಗಿ ಮಾರ್ಗದಲ್ಲಿ ಗುರುವಾರ ಓಡಾಟವನ್ನು ನಡೆಸುವುದಿಲ್ಲ.
ಕಲಬುರಗಿಯಿಂದ ಬೆಳಗ್ಗೆ 5.15ಕ್ಕೆ ಸಂಚಾರವನ್ನು ಶುರು ಮಾಡುವ ಈ ರೈಲು, ಮಧ್ಯಾಹ್ನ 2 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ರೈಲು ನಿಲ್ದಾಣವನ್ನು ತಲುಪುತ್ತದೆ. ಇಲ್ಲಿಂದ ಮಧ್ಯಾಹ್ನ 2.40ಕ್ಕೆ ಹೊರಟು ರಾತ್ರಿ 11.30ಕ್ಕೆ ಕಲಬುರಗಿಗೆ ಹೋಗುತ್ತದೆ. ಮಾರ್ಗ ಮಧ್ಯೆ ಯಲಹಂಕ, ಅನಂತಪುರ, ಗುಂತಕಲ್, ಮಂತ್ರಾಲಯ ರೋಡ್ ಹಾಗೂ ರಾಯಚೂರಿನಲ್ಲಿ ನಿಲುಗಡೆಯಾಗುತ್ತದೆ.

ಕಲಬುರಗಿಯಿಂದ ಬೆಂಗಳೂರಿಗೆ ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಸಿ ಚೇರ್ ಕಾರ್ (ಸಿಸಿ)ನಲ್ಲಿ ಪ್ರಯಾಣಿಕರೊಬ್ಬರಿಗೆ ರೂ.1,540 ಹಾಗೂ ಎಕ್ಸಿಕ್ಯುಟಿವ್ ಚೇರ್ ಕಾರ್ (ಇಸಿ)ನಲ್ಲಿ ರೂ.2765 ಟಿಕೆಟ್ ದರವಿದೆ. ಅದೇ ರೀತಿಯಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ಎಸಿ ಚೇರ್ ಕಾರ್ (ಸಿಸಿ)ನಲ್ಲಿ ರೂ.1,465 ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ (ಇಸಿ)ನಲ್ಲಿ ರೂ.2,700 ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಗರಿಷ್ಠ ವೇಗದಲ್ಲಿ ಸಂಚರಿಸುವುದಕ್ಕೆ ಹೆಸರುವಾಸಿಯಾಗಿದೆ. ಅದಕ್ಕೆ ತಕ್ಕಂತೆ ಪ್ರಯಾಣಿಕರಿಗೆ ಅತ್ಯುತ್ತಮ ಸೌಲಭ್ಯವನ್ನು ಒದಗಿಸಲಾಗುತ್ತದೆ. ಸಂಪೂರ್ಣ ಎಸಿ (ಹವಾನಿಯಂತ್ರಿತ) ವ್ಯವಸ್ಥೆಯಿರುವ ಈ ರೈಲಿನ ಸೀಟುಗಳು ಸಾಕಷ್ಟು ಆರಾಮದಾಯವಾಗಿದ್ದು, ಜೈವಿಕ ಶೌಚಾಲಯ, ಸ್ವಯಂಚಾಲಿತ ಬಾಗಿಲು ಹಾಗೂ ಅಗ್ನಿ ನಿರೋಧಕ ಸಾಧನ ಸೇರಿದಂತೆ ಹಲವು ಅತ್ಯಾಧುನಿಕ ಸೌಕರ್ಯಗಳನ್ನು ಕೂಡ ಹೊಂದಿದೆ.
ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲನ್ನು ಅಭಿವೃದ್ಧಿಪಡಿಸುತ್ತಿದೆ. ಕೆಲವೇ ತಿಂಗಳಲ್ಲಿ ಈ ರೈಲು ಹಳಿಗೆ ಬರುವ ಸಾಧ್ಯತೆಯಿದೆ. ಒಟ್ಟು 16 ಕೋಚ್ ಗಳನ್ನು ಒಳಗೊಂಡಿರಲಿದ್ದು, ಬರೋಬ್ಬರಿ 823 ಬರ್ತ್‌ಗಳನ್ನು ಹೊಂದಿರಲಿದೆ. ಇದರಿಂದ ಸಾರ್ವಜನಿಕರು ರಾತ್ರಿ ವೇಳೆ ಸುಖಕರವಾಗಿ ನಿದ್ರಿಸುತ್ತಾ ಪ್ರಯಾಣಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








