ಅಮ್ಮನಿಗಾಗಿ ಹೊಸ ಹ್ಯುಂಡೈ ಕಾರು ಖರೀದಿಸಿದ ಕಾಮಿಡಿ ಕಿಲಾಡಿ ಸ್ಟಾರ್.. ಬೆಲೆ ಎಷ್ಟು, ವಿಶೇಷತೆಗಳೇನು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಕಿಲಾಡಿಗಳು' ಪ್ರವೀಣ್ ಜೈನ್ (Praveen Jain) ಅವರಿಗೆ ದೊಡ್ಡ ಮಟ್ಟದ ಹೆಸರನ್ನು ತಂದುಕೊಟ್ಟಿತು. ಈ ಮೂಲಕ ಅವರು ಜನಪ್ರಿಯ ಹಾಸ್ಯ ನಟನಾಗಿ ಮನೆ ಮಾತಾದರು. 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಪುಟ್ಟಕ್ಕನ ಮಕ್ಕಳು ಹಾಗೂ ಮನಸೆಲ್ಲ ನೀನೆ ಧಾರವಾಹಿಗಳಲ್ಲೂ ಅಭಿನಯಿಸುತ್ತಿದ್ದು, ತಮ್ಮ ವಿಭಿನ್ನವಾದ ನಟನೆಯೊಂದಿಗೆ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ.
ಇದೀಗ ಪ್ರವೀಣ್ ಜೈನ್ ಹೊಚ್ಚ ಹೊಸ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ (Hyundai Grand i10 Nios) ಕಾರನ್ನು ಖರೀದಿ ಮಾಡಿದ್ದಾರೆ. ನೂತನ ಕಾರನ್ನು ತಮ್ಮ ತಾಯಿ ಹಾಗೂ ಸ್ನೇಹಿತರೊಂದಿಗೆ ವಿತರಣೆ ಪಡೆಡಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಪೋಸ್ಟ್ ಮಾಡಿದ್ದಾರೆ.

'ಚಿಕ್ಕ ವಯಸ್ಸಲ್ಲಿದ್ದಾಗ ಕಂಡ ಪುಟ್ಟ ಕನಸು.. ಹೌದು ನಾನು ಒಂದು ಕಾರು ತೆಗೆದುಕೊಳ್ಳುತ್ತೇನೆ. ಅಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡು ಹೋಗುತ್ತೇನೆ.. ಇಂದು ಚಿಕ್ಕ ಹೆಜ್ಜೆಯೊಂದಿಗೆ ಅದು ನನಸಾಯಿತು' ಎಂದು ಪ್ರವೀಣ್ ಜೈನ್ ತಮ್ಮ ಪೋಸ್ಟ್‌ಗೆ ಶೀರ್ಷಿಕೆಯನ್ನು ಬರೆದಿದ್ದಾರೆ. ಇದೇ ವೇಳೆ ದಿವಂಗತ 'ರಾಕೇಶ್ ಪೂಜಾರಿ' ಅವರನ್ನು ನೆನೆದಿದ್ದಾರೆ.
ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ವಿಶೇಷತೆಗಳೇನು:
ಇದೊಂದು ಹ್ಯಾಚ್‌ಬ್ಯಾಕ್ ಆಗಿದೆ. ರೂ.5.98 ಲಕ್ಷದಿಂದ ರೂ.8.65 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಮಧ್ಯಮ ಹಾಗೂ ಶ್ರೀಮಂತ ವರ್ಗದ ಗ್ರಾಹಕರು ಸುಲಭವಾಗಿ ಖರೀದಿ ಮಾಡಲು ಸಾಧ್ಯವಾಗಲಿದೆ. ಎರಾ, ಮ್ಯಾಗ್ನಾ, ಕಾರ್ಪೊರೇಟ್, ಸ್ಪೋರ್ಟ್ಜ್ ಹಾಗೂ ಅಸ್ತ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಹಾಗು ಡೈಮಂಡ್ ಕಟ್ ಅಲಾಯ್ ವೀಲ್‌ಗಳನ್ನು ಪಡೆದಿದೆ. ಸ್ಪಾರ್ಕ್ ಗ್ರೀನ್, ಅಟ್ಲಾಸ್ ವೈಟ್, ಟೀಲ್ ಬ್ಲೂ, ಟೈಫೂನ್ ಸಿಲ್ವರ್, ಟೈಟಾನ್ ಗ್ರೇ ಹಾಗೂ ಅಮೆಜಾನ್ ಗ್ರೇ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ನೂತನ ಗ್ರ್ಯಾಂಡ್ ಐ 10 ನಿಯೋಸ್ 3,815 ಎಂಎಂ ಉದ್ದ, 1,680 ಎಂಎಂ ಅಗಲ ಮತ್ತು 1,520 ಎಂಎಂ ಎತ್ತರವು ಇದೆ. ಜೊತೆಗೆ 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,450 ವೀಲ್‌ಬೇಸ್‌ನ್ನು ಪಡೆದಿದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 260 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.
ಇದು ಬಲಿಷ್ಠವಾದ 2 ಪವರ್‌ಟ್ರೇನ್‌ನ್ನು ಒಳಗೊಂಡಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್, 83 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 114 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ.
ಮತ್ತೊಂದು 1.2-ಲೀಟರ್ ಪೆಟ್ರೋಲ್/ ಸಿಎನ್‌ಜಿ ಎಂಜಿನ್ 69 PS ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 95 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ. ಈ ಕಾರು 16 ರಿಂದ 27 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು.
ಹೊಸ ಗ್ರ್ಯಾಂಡ್ ಐ 10 ನಿಯೋಸ್ 160 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 8.92 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಇದರ ಕ್ಯಾಬಿನ್ ವಿನ್ಯಾಸವು ತುಂಬಾ ಚೆನ್ನಾಗಿದೆ. 8-ಇಂಚಿರುವ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಆಟೋ ಎಸಿ, ಕ್ರೂಸ್ ಕಂಟ್ರೋಲ್, ಹೈಟ್- ಅಡ್ಜಸ್ಟೇಬಲ್ ಡ್ರೈವರ್ ಸೀಟ್ ಹಾಗೂ ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗೆ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯುಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ಹಿಲ್ ಅಸಿಸ್ಟ್ ಒಳಗೊಂಡಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ.


Click it and Unblock the Notifications








