Karnataka Bandh: ನಾಳೆ ಕರ್ನಾಟಕ ಬಂದ್, ಏನಿರುತ್ತೆ, ಏನಿರಲ್ಲ?
ತಮಿಳುನಾಡಿಗೆ ಕಾವೇರಿ (Kaveri) ನದಿ ನೀರು ಹರಿಸುವುದನ್ನು ವಿರೋಧಿಸಿ, ವಿವಿಧ ಕನ್ನಡ ಸಂಘಟನೆಗಳು ನಾಳೆ (ಸೆ.29) ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿದ್ದು, ವಿವಿಧ ಸೇವೆಗಳಲ್ಲಿ ವ್ಯತ್ಯಯವಾಗುವ ನೀರಿಕ್ಷೆಯಿದೆ. ಏನಿರುತ್ತೆ, ಏನಿರಲ್ಲ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಈ ಬಂದ್‌ಗೆ ಓಲಾ ಉಬರ್ ಸಂಘ, ಡಾಕ್ಟರ್ ರಾಜಕುಮರ್ ಸೇನೆ, ಕನ್ನಡ ಜನ ಶಕ್ತಿ ಕೇಂದ್ರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ಅಖಿಲ ಕರ್ನಾಟಕ ರಾಜಕುಮಾರ್ ಅಭಿಮಾನಿಗಳ ಸಂಘ, ಕರವೇ ಶಿವರಾಮೇಗೌಡ ಬಣ, ಕರವೇ ಪ್ರವೀಣ್ ಶೆಟ್ಟಿ ಬಣ, ಕರ್ನಾಟಕ ವಿಷ್ಣು ಸೇನೆ, ಕನ್ನಡ ಸೇನೆ, ಕನ್ನಡ ಒಕ್ಕೂಟ ಸೇರಿದಂತೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ.

ಕರ್ನಾಟಕ ಬಂದ್ ಕಾರಣ, ಕೆಲವು ಖಾಸಗಿ ಶಾಲೆಗಳು, ಜಿಲ್ಲೆಗಳಲ್ಲಿರುವ ಮಾರುಕಟ್ಟೆಗಳು, ಶಾಲಾ ವಾಹನಗಳು, ಕ್ಯಾಬ್, ಖಾಸಗಿ ಬಸ್‌ಗಳು, ಸರಕು ಸಾಗಣೆ ವಾಹನಗಳು, ಕಾರ್ಖಾನೆಗಳು, ಎಂಎನ್‌ಸಿ ಕಂಪನಿಗಳು, ಹೋಟೆಲ್‌ಗಳು ಹಾಗೂ ಆಟೋ ಸೇವೆಯಲ್ಲಿ ವ್ಯತ್ಯಯವಾಗಬಹುದು. ಈಗಾಗಲೇ, ಮುನ್ನೆಚ್ಚರಿಕೆಯಾಗಿ ತುಮಕೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಕಾಲೇಜುಗಳ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಶಾಲಾ - ಕಾಲೇಜುಗಳಿಗೂ ರಜೆ ಘೋಷಿಸುವ ಸಾಧ್ಯತೆಯಿದೆ.
ನಾಳೆ ಬಂದ್ ಇದ್ದರೂ ವೈದ್ಯಕೀಯ ಸೇವೆಗಳಾದ ಆಸ್ಪತ್ರೆ, ಮೆಡಿಕಲ್, ಆಂಬ್ಯುಲೆನ್ಸ್ ಎಂದಿನಂತೆ ಲಭ್ಯವಿರಲಿದ್ದು, ಜೊತೆಯಲ್ಲಿ ಬ್ಯಾಂಕ್, ದಿನಪತ್ರಿಕೆ, ಮೆಟ್ರೊ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರವು ಇರಲಿದೆ. ಆದರೆ, ಪರಿಸ್ಥಿತಿ ಅನ್ವಯ, ಸಾರಿಗೆ ಬಸ್ ಸೇವೆಯೂ ಸ್ಥಗಿತವಾಗಬಹುದು. ನಿನ್ನೆಯಷ್ಟೇ ವಾಟಾಳ್ ನಾಗರಾಜ್ ಅವರು, ಬೆಂಗಳೂರು ನಗರದ ವಿವಿಧ ಭಾಗದಲ್ಲಿ ಸಂಚರಿಸಿ, ಮಾಲ್, ಅಂಗಡಿ ನೌಕರರು ಹಾಗೂ ಆಟೋ ಚಾಲಕರಿಗೆ ಬಂದ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದರು.

ಬಂದ್ ಹಿನ್ನೆಲೆ, ಅಂಗಡಿ, ಮಾಲ್ ಗಳು ಬಹುತೇಕ ಮುಚ್ಚಲಿವೆ. ರಾಜ್ಯ (state) ಮತ್ತು ರಾಷ್ಟ್ರೀಯ (national) ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ಸಂಘಟನೆಗಳು ನಿರ್ಧಾರ ಮಾಡಿವೆ. ಇದರಿಂದ ಬೆಂಗಳೂರು - ತುಮಕೂರು ರಸ್ತೆ, ಬೆಂಗಳೂರು ಹೊಸೂರು ರಸ್ತೆ ಹಾಗೂ ಹೈದರಾಬಾದಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ವಾಹನ ಸಂಚಾರದಲ್ಲಿ ಸಮಸ್ಯೆಯಾಗಬಹುದು.
ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ತುಮಕೂರು ಹಾಗೂ ಚಾಮರಾಮನಗರದಲ್ಲಿ ಪ್ರತಿಭಟನಾ ಕಾವು ಹೆಚ್ಚಿರುವ ಸಾಧ್ಯತೆಯಿರುವುದರಿಂದ ಪೊಲೀಸ್ ಇಲಾಖೆಯು ಭದ್ರತೆಯನ್ನು ಹೆಚ್ಚಿಸಿದೆ. ತಮಿಳುನಾಡಿನ ಗಡಿ ಪ್ರದೇಶದಲ್ಲಿ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೆಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಬಹುದು. ಈ ನಿಟ್ಟಿನಲ್ಲಿ ಪೊಲೀಸರು ಕೂಡ ಹೈ - ಅಲರ್ಟ್ ಆಗಿದ್ದಾರೆ.

ರಾಜ್ಯ ಬಂದ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಬೆಂಬಲ ನೀಡಿದ್ದು, ಸೆ.29 ರಂದು ಚಿತ್ರಮಂದಿರ ಮುಚ್ಚಲು ತೀರ್ಮಾನ ಮಾಡಿದೆ. ಹಾಗೆಯೇ ಚಿತ್ರರಂಗದ ಎಲ್ಲ ಚಟುವಟಿಕೆಗಳು ಸ್ಥಗಿತಗೊಳ್ಳಲಿದ್ದು, ಕನ್ನಡ ಪರ ಸಂಘಟನೆಗಳು ನಡೆಸುವ ಪ್ರತಿಭಟನಾ ಮೆರವಣಿಗೆಯಲ್ಲಿ ಕಲಾವಿದರು ಸೇರಿದಂತೆ ಚಿತ್ರರಂಗದ ಪ್ರಮುಖರು ಭಾಗವಹಿಸಲು ನಿರ್ಧಾರ ಮಾಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications