Karnataka Budget: ಶೀಘ್ರ ವಿಜಯಪುರದಲ್ಲಿ ಏರ್‌ಪೋರ್ಟ್ ಶುಭಾರಂಭ.. 1,000 ಹೊಸ ಬಸ್.. ಮತ್ತೇನಿದೆ?
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah), ತಮ್ಮ 17ನೇ ಬಜೆಟ್‌ನ್ನು ಯಶಸ್ವಿಯಾಗಿ ಮಂಡಿಸಿದ್ದಾರೆ. ಈ ಮೂಲಕ ರಾಜ್ಯದ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಸಿಎಂ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 2026-27ನೇ ಸಾಲಿನ ರಾಜ್ಯ ಬಜೆಟ್ (Budget) ಗಾತ್ರವು 4.48 ಲಕ್ಷ ಕೋಟಿ ಇದ್ದು, ಸಾರಿಗೆ, ಲೋಕೋಪಯೋಗಿ, ಮೂಲ ಸೌಕರ್ಯ, ಬಂದರು, ಜಲ ಸಾರಿಗೆ ಹಾಗೂ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ.
ಸಾರಿಗೆಗೆ ಆದ್ಯತೆ:
ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು 'ಪ್ರಾಜೆಕ್ಟ್ ಮೆಜೆಸ್ಟಿಕ್' ಯೋಜನೆಯಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಪುನರಾಭಿವೃದ್ದಿ ಮಾಡಲಾಗುತ್ತದೆ. ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ನಿರ್ಮಿಸಲು ರಾಜ್ಯ ಸರ್ಕಾರವು ಉದ್ದೇಶಿಸಿದೆ. 2025-2026ನೇ ಸಾಲಿನಲ್ಲಿ ಹೊನ್ನಾವರ, ಚಾಮರಾಜನಗರ ಹಾಗೂ ಚಿತ್ರದುರ್ಗದಲ್ಲಿ ರೂ.20 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥಗಳನ್ನು ನಿರ್ಮಿಸಲು ಕ್ರಮವಹಿಸಲಾಗುತ್ತದೆ. ಅದಕ್ಕಾಗಿ ರೂ.12 ಕೋಟಿ ಅನುದಾನ ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

ರಾಜ್ಯದಲ್ಲಿ ವಾಹನ ಸಂಚಾರದ ಮೇಲ್ವಿಚಾರಣೆ ಹಾಗೂ ಸಂಚಾರಿ ನಿಯಮ ಉಲ್ಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ, ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು. ದಾವಣಗೆರೆ, ಕಲಬುರಗಿ, ಬೆಳಗಾವಿ, ಚಿತ್ರದುರ್ಗ, ಹಾವೇರಿ, ಹೊಸಪೇಟೆ, ಬಳ್ಳಾರಿ, ವಿಜಯಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ 60 ಸ್ಥಳಗಳಲ್ಲಿ ರೂ.50 ಕೋಟಿ ವೆಚ್ಚದಲ್ಲಿ ಎಐ ಆಧಾರಿತ ವಿದ್ಯುನ್ಮಾನ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದಿದ್ದಾರೆ.
2025-2026ನೇ ಸಾಲಿನಲ್ಲಿ ಸ್ವಚ್ಛ ಪರಿಸರದ ಹಿತದೃಷ್ಟಿಯಿಂದ ವಿದ್ಯುತ್ ಚಾಲಿತ ಬಸ್‌ಗಳ ಸೇರ್ಪಡೆಗೆ ಆದ್ಯತೆ ನೀಡಲಾಗುವುದು. ಪಿಎಂ ಇ-ಡ್ರೈವ್, ಪಿಎಂ-ಇಬಸ್ ಸೇವಾ ಹಾಗೂ ಬಾಹ್ಯ ನೆರವಿನಡಿ ಒಟ್ಟು 14,750 ಹೊಸ ವಿದ್ಯುತ್ ಚಾಲಿತ ಬಸ್‌ಗಳ ಸೇರ್ಪಡೆ ಮಾಡುವ ಗುರಿಯನ್ನು ಹೊಂದಲಾಗಿದೆ. ಇದರಲ್ಲಿ 9,000 ಬಸ್‌ಗಳನ್ನು ಬಿಎಂಟಿಸಿಗೆ ಸೇರಿಸಲು ಯೋಜಿಸಲಾಗಿದೆ. ರಾಜ್ಯದ ವಿವಿಧ ಸಾರಿಗೆ ನಿಗಮಗಳಲ್ಲಿ 1,000 ಹೊಸ ಡೀಸೆಲ್ ಬಸ್‌ಗಳನ್ನು ಜಿಸಿಸಿ ಆಧಾರ ಮೇಲೆ ಸೇರ್ಪಡೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಇವಿ ಬಳಕೆಗೂ ಉತ್ತೇಜನ:
ರಾಜ್ಯ ಸರ್ಕಾರವು 'ಕರ್ನಾಟಕ ಕ್ಲೀನ್ ಮೊಬಿಲಿಟಿ ಪಾಲಿಸಿ' 2025-30 ಯೋಜನೆಯನ್ನು ಘೋಷಿಸಲಾಗಿದೆ. ಇದರಿಂದ ಕ್ಲೀನ್ ಮೊಬಿಲಿಟಿ ವಾಹನ ಮೌಲ್ಯ ಸರಪಳಿಯಲ್ಲಿ ರೂ.50,000 ಕೋಟಿ ಹೂಡಿಕೆಯನ್ನು ಆಕರ್ಷಿಸಲಾಗುವುದು. ಜೊತೆಗೆ ಸರಿ ಸುಮಾರು 1 ಲಕ್ಷ ಹೊಸ ಉದ್ಯೋಗವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಇವಿ ವಾಹನಗಳ ತಯಾರಿಕೆ ಮತ್ತು ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರು ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಇವಿ ಕ್ಲಸ್ಟರ್ ನಿರ್ಮಿಸಲಾಗುವುದು. ಅದಕ್ಕಾಗಿ ರೂ.25 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ರಸ್ತೆ ಅಭಿವೃದ್ಧಿಗೆ ಅನುದಾನ:
2024-25ನೇ ಸಾಲಿನ ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆಗಳಡಿ 1,330 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ ಹಾಗೂ 1,259 ಕಿ.ಮೀ ಉದ್ದದ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಸಕ್ತ ಸಾಲಿನ 1,850 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ ಹಾಗೂ 2,570 ಕಿ.ಮೀ ಉದ್ದದ ಜಿಲ್ಲಾ ರಸ್ತೆಯನ್ನು ರೂ.4,848 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಮೂಲ ಸೌಕರ್ಯ ಅಭಿವೃದ್ಧಿ, ಬಂದರು & ಜಲ ಸಾರಿಗೆಗೂ ಒತ್ತು:
ವಿಜಯಪುರದಲ್ಲಿ ರೂ.348 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು 2025-26ನೇ ಸಾಲಿನಲ್ಲಿ ಪ್ರಾರಂಭಿಸಲಾಗುವುದು. ರೂ.219 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಯಚೂರು ವಿಮಾನ ನಿಲ್ದಾಣಕ್ಕೆ ಈವರೆಗೆ ರೂ.53 ಕೋಟಿ ಅನುದಾನವನ್ನು ಒದಗಿಸಲಾಗಿದೆ. ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಯ ಭೂಸ್ವಾದೀನಕ್ಕಾಗಿ ರೂ.319 ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದಿದ್ದಾರೆ.
ಕರ್ನಾಟಕ ಸರ್ಕಾರವು ರೈಲ್ವೆ ಇಲಾಖೆಯೊಂದಿಗೆ 50:50 ಅನುಪಾತದಲ್ಲಿ 9 ಯೋಜನೆಗಳಲ್ಲಿ ಕೈಗೊಂಡಿದೆ. 7 ಯೋಜನೆಗಳ ಭೂಸ್ವಾಧೀನದ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಒಟ್ಟು 16,235 ಕೋಟಿ ವೆಚ್ಚದ ಈ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ರೂ.9,847 ಕೋಟಿಗಳನ್ನು ವ್ಯಯಿಸಲಾಗುವುದು. 2025-26ನೇ ಬಜೆಟ್‌ನಲ್ಲಿ ರೂ.600 ಕೋಟಿ ಒದಗಿಸಲಾಗಿದೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಜಲಸಾರಿಗೆ ಕ್ಷೇತ್ರದ ಬೆಳವಣಿಗೆಗೆ ವಿಪುಲವಾದ ಅವಕಾಶಗಳಿವೆ. ಈಗಾಗಲೇ ಕರ್ನಾಟಕ ಜಲಸಾರಿಗೆ ನೀತಿಗೆ ಮಂಜೂರಾತಿ ನೀಡಲಾಗಿದೆ. ಕರಾವಳಿಯ ನೌಕಾ ಚಟುವಟಿಕೆಗಳ ನಿರ್ವಹಣೆಯಲ್ಲಿ ದಕ್ಷತೆಯನ್ನು ತರಲಾಗುವುದು. ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೋ, ಕೋಸ್ಟಲ್ ಬರ್ತ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಕಿ ಬಂದರು, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕ್ಷೇತ್ರ & ನದಿ ಕ್ರೂಸ್ ಪ್ರವಾಸೋದ್ಯಮ ಯೋಜನೆಗಳಿಗಾಗಿ ವಿಸ್ತೃತ ಯೋಜನೆಯನ್ನು ಸಿದ್ಧಪಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಗ್ರಾಮೀಣ ರಸ್ತೆಗೂ ಉತ್ತೇಜನ:
ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೂ ರಾಜ್ಯ ಸರ್ಕಾರವು ಮುಂದಾಗಿದೆ. ಕಳೆದ ಸಾಲಿನ ಬಜೆಟ್‌ನಲ್ಲಿ ರೂ.5,200 ಕೋಟಿ ವೆಚ್ಚದಲ್ಲಿ 'ಪ್ರಗತಿ ಪಥ' ರಸ್ತೆ ಅಭಿವುದ್ಧಿ ಯೋಜನೆಯನ್ನು ಬಾಹ್ಯ ನೆರವಿನೊಂದಿಗೆ ಪ್ರಾರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು. ಈ ಯೋಜನೆಯನ್ನು 2025-26ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಕಲ್ಯಾಣ ಕರ್ನಾಟಕದ 38 ವಿಧಾನಸಭಾ ಕ್ಷೇತ್ರಗಳಿಗಾಗಿ ಘೋಷಿಸಲಾದ 'ಕಲ್ಯಾಣ ಪಥ' ಯೋಜನೆಯಡಿ ರೂ.1,000 ಕೋಟಿ ವೆಚ್ಚದ 286 ಕಾಮಗಾರಿಗಳಲ್ಲಿ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗೂ ಆದ್ಯತೆ:
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ರೂ.40,000 ಕೋಟಿ ಅಂದಾಜು ವೆಚ್ಚದಲ್ಲಿ ಉತ್ತರ-ದಕ್ಷಿಣ ಹಾಗೂ ಪೂರ್ವ-ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್‌ನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ರೂ.19,000 ಕೋಟಿ ಗ್ಯಾರಂಟಿಯನ್ನು ಸರ್ಕಾರದಿಂದ ಒದಗಿಸಲಾಗುತ್ತದೆ. ನಮ್ಮ ಮೆಟ್ರೋ ಹಂತ-3 ಯೋಜನೆಯೊಂದಿಗೆ ರೂ.8916 ಕೋಟಿ ವೆಚ್ಚದಲ್ಲಿ 40.50 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಬಜೆಟ್ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.


Click it and Unblock the Notifications








