karnataka budget: ದುಡಿಯುವ ವರ್ಗಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಹಿಡಿದ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಮೊದಲ ಬಜೆಟ್ (budget) ಮಂಡನೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿದರೂ ದುಡಿಯುವ ವರ್ಗದ ಜನರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಆ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿಕಪ್ ವ್ಯಾನ್ ಖರೀದಿಸಿ ಸ್ವ ಉದ್ಯೋಗ ಮಾಡಬೇಕು ಎಂದು ನಿರ್ಧರಿಸಿದವರಿಗೆ 7 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಸ್ವಿಗ್ಗಿ, ಜೊಮೆಟೋ, ಅಮೆಜಾನ್ ಸೇರಿದಂತೆ ಇ-ಕಾಮರ್ಸ್ ಸಂಸ್ಥೆಗಳ ಡೆಲಿವರಿ ಬಾಯ್ ಗಳಿಗೆ ಒಟ್ಟು 4 ಲಕ್ಷ ರೂಪಾಯಿ ವಿಮೆ ನೀಡಲಾಗುತ್ತದೆ. ಅದರಲ್ಲಿ 2 ಲಕ್ಷ ಜೀವ ವಿಮೆ, 2 ಲಕ್ಷ ಅಪಘಾತ ವಿಮೆ ಸೇರಿದೆ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ 4,000 ವಿಶೇಷಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಒದಗಿಸಲು 30 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಲಾಗಿದೆ. ಮೀನುಗಾರಿಕೆ ದೋಣಿಗಳಲ್ಲಿ ಸೀಮೆ ಎಣ್ಣೆ ಎಂಜಿನ್ ಅನ್ನು ಡೀಸೆಲ್ ಚಾಲಿತ ಎಂಜಿನ್ ಗಳಾಗಿ ಪರಿವರ್ತಿಸಲು ತಲಾ 50 ಸಾವಿರ ಸಹಾಯಧನ ನೀಡಲಾಗುತ್ತದೆ ಎಂದು ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವ ಸಲುವಾಗಿ ಪ್ರಮುಖ ರಸ್ತೆಗಳಲ್ಲಿ ಕ್ಯಾಮರಾ ಅಳವಡಿಸಲು ಅನುದಾನ ನೀಡಲಾಗುವುದು. ಜೊತೆಗೆ ರಾಜ್ಯಾದ್ಯಂತ ಮಹಿಳೆಯರಿಗೆ ಪ್ರತ್ಯೇಕ ಡ್ರೈವಿಂಗ್ ಸ್ಕೂಲ್ ಶುರು ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದಿಷ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಜೆಟ್‌ನಲ್ಲಿ ದುಡಿಯುವ ವರ್ಷಕ್ಕೆ ನೀಡುರುವ ಭರ್ಜರಿ ಕೊಡುಗೆಯಾಗಿದೆ.
ರಾಜ್ಯ ಪೊಲೀಸ್ ಇಲಾಖೆಗೆ ಮೊಬಿಲಿಟಿ ಯೋಜನೆಯಡಿ ಹಳೆಯ ವಾಹನಗಳನ್ನು ಹಂತ - ಹಂತವಾಗಿ ಬದಲಾಯಿಸಲು 100 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ ಎಂದು ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆ. ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ, ವಿಜಯಪುರ, ಬೀದರ್, ಯಾದಗಿರಿ ಹಾಗೂ ದಾವಣಗೆರೆಯಲ್ಲಿ 80 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯನ್ನು ತಿದ್ದುಪಡಿಗೊಳಿಸಿ, ಸರಳೀಕರಿಸಲು ಉದ್ದೇಶಿಸಲಾಗಿದ್ದು, ಮೋಟಾರ್ ವಾಹನ ಪರಿಶೀಲನೆಗಾಗಿ ಸುಲಭ ತಂತ್ರಾಂಶ ತರಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಆಯ್ದ ವಾಹನಗಳಿಗೆ ವಿಧಿಸುವ ತೆರಿಗೆಯನ್ನು ಪರಿಷ್ಕರಿಸಲಾಗಿದ್ದು, ಸಾರಿಗೆ ಇಲಾಖೆಗೆ 11,500 ಕೋಟಿ ರೂಪಾಯಿ ಟ್ಯಾಕ್ಸ್ ಸಂಗ್ರಹಿಸುವ ಗುರಿಯನ್ನು ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ರೈಲ್ವೆ ಹಾಗೂ ರಾಜ್ಯಾದ್ಯಂತ ರಸ್ತೆ ನಿರ್ಮಾಣಕ್ಕೆ ಭರ್ಜರಿ ಅನುದಾನ ಸಿಕ್ಕಿದೆ. ಹಳೆಯ ರಸ್ತೆಗಳ ಮರು ಡಾಂಬರೀಕರಣ ಮಾಡಲು 440 ಕೋಟಿ ರೂಪಾಯಿ ನೀಡಲಾಗಿದೆ. ಇದಿಷ್ಟೇ ಅಲ್ಲದೆ, ರಾಯಚೂರಿನಲ್ಲಿ 186 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರೀನ್-ಫೀಲ್ಡ್ ವಿಮಾನ ನಿರ್ಮಾಣ, ಮೈಸೂರಿನಲ್ಲಿ ರನ್ ವೇ ವಿಸ್ತರಣೆ, ದಾವಣಗೆರೆ ಹಾಗೂ ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ವರದಿ ತಯಾರಿಸುವಂತೆ ಸೂಚಿಸಲಾಗಿದೆ.
ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿದ್ದು, ಸಂಚಾರ ದಟ್ಟಣೆ ಸಮಸ್ಯೆಯನ್ನು ಹೋಗಲಾಡಿಸಲು 30,000 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಮ್ಮ ಮೆಟ್ರೋ ಹಾಗೂ ಉಪನಗರ ರೈಲು ಯೋಜನೆ ಜಾರಿಗೊಳಿಸಿ, 5 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಮುಂದಿನ 3 ವರ್ಷಗಳಲ್ಲಿ ಈಗಿರುವ 70 ಕಿಲೋಮೀಟರ್ ಮೆಟ್ರೋ ಸಂಪರ್ಕಜಾಲವನ್ನು 176 ಕಿಲೋಮೀಟರ್ ಗೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ.


Click it and Unblock the Notifications