Karnataka Budget: ಇವಿ ಉದ್ಯಮಕ್ಕೆ ಬೆಂಬಲ.. 1 ಲಕ್ಷ ಉದ್ಯೋಗ ಸೃಷ್ಟಿ, ರಸ್ತೆ ಅಭಿವೃದ್ಧಿಗೂ ಒತ್ತು!
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು, 16ನೇ ಬಾರಿಗೆ ಬಜೆಟ್‌ನ್ನು ಮಾಡಿದ್ದಾರೆ. ಈ ಮೂಲಕ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಬಾರಿಯ ಬಜೆಟ್ (Budget) ಗಾತ್ರ ಬರೋಬ್ಬರಿ ರೂ.4.09 ಲಕ್ಷ ಕೋಟಿ ಇದ್ದು, ಶಿಕ್ಷಣ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಪಶುಸಂಗೋಪನೆ, ಕೃಷಿ, ತೋಟಗಾರಿಕೆ, ರೇಷ್ಮೆ, ನಗರಾಭಿವೃದ್ಧಿ ಹಾಗೂ ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೂ ಭರ್ಜರಿ ಕೊಡುಗೆಗಳನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ರಾಜ್ಯ ಸರ್ಕಾರವು 'ಕರ್ನಾಟಕ ಸ್ವಚ್ಛ ಚಲನಶೀಲತೆ ನೀತಿ 2025-30'ನ್ನು ಘೋಷಿಸಲಾಗಿದೆ. ಇದರಿಂದ ಸ್ವಚ್ಛ ಚಲನಶೀಲತಾ ವಾಹನ ಸರಪಳಿಯಲ್ಲಿ ರೂ.50,000 ಹೊಡಿಕೆಯನ್ನು ಆಕರ್ಷಿಸಲಾಗುವುದು. ಜೊತೆಗೆ 1 ಲಕ್ಷ ಹೊಸ ಉದ್ಯೋಗವನ್ನು ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ. ಎಲೆಕ್ಟ್ರಿಕ್ ವಾಹನ (ಇವಿ) ವಾಹನಗಳ ತಯಾರಿಕೆ ಹಾಗೂ ಬಳಕೆಗೆ ಉತ್ತೇಜಿಸಲು ಬೆಂಗಳೂರು ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ 'ಇವಿ ಕ್ಲಸ್ಟರ್' ನಿರ್ಮಿಸಲಾಗುತ್ತದೆ. ಇದಕ್ಕಾಗಿ ರೂ.25 ಕೋಟಿ ಅನುದಾನ ಒದಗಿಸಲಿದೆ' ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ಮತ್ತು ಗುಣಾತ್ಮಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕಳೆದ ಸಾಲಿನ ಬಜೆಟ್‌ನಲ್ಲಿ ರೂ.5,200 ಕೋಟಿ ವೆಚ್ಚದಲ್ಲಿ 'ಪ್ರಗತಿ ಪಥ' ರಸ್ತೆ ಅಭಿವೃದ್ಧಿ ಯೋಜನೆಯನ್ನು ಬಾಹ್ಯ ನೆರವಿನೊಂದಿಗೆ ಪ್ರಾರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು. ಈ ಯೋಜನೆಯನ್ನು 2025-26ನೇ ಸಾಲಿನಿಂದ ಅನುಷ್ಠಾನಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 38 ವಿಧಾನಸಭಾ ಕ್ಷೇತ್ರಗಳಿಗೆ ಘೋಷಿಸಲಾದ 'ಕಲ್ಯಾಣ ಪಥ' ಯೋಜನೆಯಡಿ ರೂ.1,000 ಕೋಟಿ ಮೊತ್ತದ 286 ರಸ್ತೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೋ, ಕೋಸ್ಟಲ್ ಬರ್ತ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಕಿ ಬಂದರು, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕೇಂದ್ರ ಸೇರಿದಂತೆ ವಿವಿಧ ಯೋಜನೆಗಳಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ರೂ.348 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು 2025-26ನೇ ಸಾಲಿನಲ್ಲಿ ಪ್ರಾರಂಭಿಸಲಾಗುವುದು. 219 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿಗೆ ಇಲ್ಲಿಯವರೆಗೆ ರೂ.53 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಾರವಾರ ನೌಕಾನೆಲೆಯ ವಿಮಾನ ನಿಲ್ದಾಣ ಭೂಸ್ವಾಧೀನ ಪ್ರಕ್ರಿಯೆಯೂ ಚಾಲ್ತಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಅಗತ್ಯವಾದ ಅನುದಾನ ಒದಗಿಸಿ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು. ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಯ ಭೂಸ್ವಾಧೀನಕ್ಕಾಗಿ ರೂ.319 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರ ರೈಲ್ವೆ ಇಲಾಖೆಯೊಂದಿಗೆ 50:50ರ ಅನುಪಾತದಲ್ಲಿ 9 ಯೋಜನೆಗಳನ್ನು ಕೈಗೊಳ್ಳಲಾಗಿದೆ. 7 ಯೋಜನೆಗಳ ಭೂಸ್ವಾಧೀನದ ಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಒಟ್ಟಾರೆ ರೂ.16,235 ಕೋಟಿ ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರದಿಂದ ವತಿಯಿಂದ ರೂ.9,847 ಕೋಟಿಯನ್ನು ವ್ಯಯಿಸಲಾಗುವುದು. 2025-26ನೇ ಆಯವ್ಯಯದಲ್ಲಿ ರೂ.600 ಕೋಟಿಯನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications