Karnataka: ಸಿಎಂ ಸಿದ್ದು ಸರ್ಕಾರದಿಂದ ದೊಡ್ಡ ಸಿಹಿಸುದ್ದಿ.. ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ರಿಯಾಯಿತಿ ಘೋಷಣೆ
ಕರ್ನಾಟಕದಲ್ಲಿ ಹಳೆಯ ವಾಹನಗಳನ್ನು ಗುಜರಿಗೆ (ಸ್ಕ್ರ್ಯಾಪ್) ಹಾಕಿ, ಹೊಸ ಎಲೆಕ್ಟ್ರಿಕ್ ವಾಹನ (Electric vehicles) ಖರೀದಿಸುವವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ರೂ.1,000 ದಿಂದ ರೂ.40,000 ತೆರಿಗೆ ರಿಯಾಯಿತಿ ನೀಡುವುದಾಗಿ ಘೋಷಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಸಚಿವ ಸಂಪುಟ ಸಭೆಯಲ್ಲಿ ನೂತನ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ರಿಯಾಯಿತಿ ನೀಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ (H.K.Patil), ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ (Electric Two-Wheelers) ರೂ.1,000 ದಿಂದ ರೂ.5,000 ವರೆಗೆ ತೆರಿಗೆ ರಿಯಾಯಿತಿ ಲಭ್ಯವಿದೆ ಎಂದು ಅವರು ಹೇಳಿದ್ದಾರೆ.

ರೂ.1 ಲಕ್ಷದವರೆಗಿನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ರೂ.1,000, ರೂ.2 ಲಕ್ಷ ಮೌಲ್ಯದ ವಾಹನಗಳಿಗೆ ರೂ.2,000 ರಿಯಾಯಿತಿ ಹಾಗೂ ರೂ.4 - 5 ಲಕ್ಷ ಬೆಲೆ ವಾಹನಗಳಿಗೆ ರೂ.5,000 ತೆರಿಗೆ ರಿಯಾಯಿತಿ ದೊರೆಯುತ್ತದೆ. ಅದೇ ರೀತಿಯಲ್ಲಿ ಹಳೆಯ ನಾಲ್ಕು-ಚಕ್ರದ ವಾಹನಗಳನ್ನು ಗುಜರಿಗೆ ಹಾಕಿ, ನೂತನ ನಾಲ್ಕು-ಚಕ್ರದ ಎಲೆಕ್ಟ್ರಿಕ್ ವಾಹನಗಳನ್ನು (New Electric Four-Wheelers) ಕೊಂಡುಕೊಳ್ಳುವವರಿಗೂ ತೆರಿಗೆ ರಿಯಾಯಿತಿ ಸಿಗುತ್ತದೆ.
ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ನಾಲ್ಕು ಚಕ್ರದ ವಾಹನಗಳಿಗೆ 10,000, ರೂ.5 - 10 ಲಕ್ಷ ಮೌಲ್ಯದ ವಾಹನಗಳಿಗೆ ರೂ.20,000, ರೂ.10 - 15 ಲಕ್ಷ ಬೆಲೆಯ ವಾಹನಗಳಿಗೆ ರೂ.30,000, ರೂ.15 - 20 ಲಕ್ಷ ಬೆಲೆಬಾಳುವ ಎಲೆಕ್ಟ್ರಿಕ್ ವಾಹನಗಳಿಗೆ ರೂ.40,000 ಹಾಗೂ ರೂ.20 ಲಕ್ಷಕ್ಕಿಂತ ಹೆಚ್ಚಿನ ದರದ ವಾಹನಗಳಿಗೆ ರೂ.50,000 ತೆರಿಗೆ ರಿಯಾಯಿತಿ ಲಭ್ಯವಿದೆ.

ಮೋಟಾರು ಸಾರಿಗೆ (Motor Transport) ಮತ್ತು ಸಂಬಂಧಿತ ವಲಯಗಳ ಕಾರ್ಮಿಕರ ಕಲ್ಯಾಣಕ್ಕಾಗಿ ಸೆಸ್ ಸಂಗ್ರಹಿಸಲು ಸರ್ಕಾರಕ್ಕೆ ಅನುಮತಿ ನೀಡುವ ಸುಗ್ರೀವಾಜ್ಞೆಗೂ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಮೂಲಕ ಕಲ್ಯಾಣ ನಿಧಿಗೆ ವಾರ್ಷಿಕ ಸುಮಾರು ರೂ.300 ಕೋಟಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಸೆಕ್ಷನ್ 3(ಎ) ಪ್ರಕಾರ, ಈ ಸೆಸ್ ವಿಧಿಸಲಾಗುತ್ತದೆ.
ಡಿಸೆಂಬರ್ 13, 2023 ರಂದು ವಿವಿಧ ಮಾಧ್ಯಮಗಳು ಮಾಡಿದ್ದ ವರದಿ ಪ್ರಕಾರ, ಕರ್ನಾಟಕದಲ್ಲಿ (Karnataka) ನೂತನ ಎಲೆಕ್ಟ್ರಿಕ್ ವಾಹನಗಳ ನೋಂದಣಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪ್ರತಿದಿನ ಸರಾಸರಿ 422 ನೂತನ ವಾಹನಗಳು ರಸ್ತೆಗಿಳಿಯುತ್ತಿವೆ. ಕಳೆದ ವರ್ಷದ ಏಪ್ರಿಲ್ ನಿಂದ ನವೆಂಬರ್ ವರೆಗೆ ರಾಜ್ಯದಲ್ಲಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ.

ಇನ್ನು, ರಾಜ್ಯ ಸರ್ಕಾರ ಘೋಷಿಸಿರುವ ತೆರಿಗೆ ರಿಯಾಯಿತಿಗಳು, ಎಲೆಕ್ಟ್ರಿಕ್ ಸಾರಿಗೆ ವಾಹನಗಳಿಗೂ (Electric Transport Vehicles) ಅನ್ವಯಿಸುತ್ತದೆ. ನೋಂದಾಯಿತ ವಾಹನಗಳ ಗುಜರಿ ನೀತಿ (Registered Vehicles Scrapping Policy) 2022ರ ನಿಬಂಧನೆಗಳ ಪ್ರಕಾರ, ರಿಯಾಯಿತಿಯನ್ನು ನೀಡಲಾಗಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಸಣ್ಣ ಪ್ರಯಾಣದಲ್ಲಿ ವಾಹನ ಸವಾರರಿಗೆ ಅನುಕೂಲವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications