Karnataka Airline: ಹೊಸ ಇತಿಹಾಸ ಬರೆಯುವತ್ತ ಕರ್ನಾಟಕ, ವಿಮಾನಯಾನ ಸಂಸ್ಥೆ ಆರಂಭ?
ಮುಖ್ಯಮಂತ್ರಿ ಸಿದ್ಧರಾಮಯ್ಯ (Cm Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ, ಶಕ್ತಿ ಯೋಜನೆಗಳನ್ನು ಪರಿಚಯಿಸುವ ಮೂಲಕ ಸಾಕಷ್ಟು ಜನಮನ್ನಣೆ ಗಳಿಸಿದೆ. ಇದೀಗ, ರಾಜ್ಯದ ಜನರಿಗೆ ಅನುಕೂಲವಾಗುವ ಸಲುವಾಗಿ ಪ್ರತ್ಯೇಕ ವಿಮಾನಯಾನ (Airline) ಸಂಸ್ಥೆ ಸ್ಥಾಪನೆಗೆ ಯೋಜಿಸುತ್ತಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ರಾಜ್ಯದಲ್ಲಿ ಪ್ರಾದೇಶಿಕ ಸಾರಿಗೆ ಸಂಪರ್ಕವನ್ನು (Regional Connectivity) ಉತ್ತೇಜಿಸಲು ಕರ್ನಾಟಕ ಸರ್ಕಾರವು ತನ್ನದೇ ಆದ ವಿಮಾನಯಾನ ಸಂಸ್ಥೆ ಆರಂಭಿಸುವ ಸಾಧಕ - ಭಾದಕಗಳ ಬಗ್ಗೆ ಅಧ್ಯಯನ ಮಾಡುತ್ತಿದೆ ಎಂದು ಮೂಲಸೌಕರ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಶುಕ್ರವಾರ ಹೇಳಿದ್ದಾರೆ. ಈ ಕುರಿತು, ನಾಗರಿಕ ವಿಮಾನಯಾನ ಪರಿಣಿತರೊಂದಿಗೆ (Civil Aviation Experts) ಚರ್ಚಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

'ಸ್ಟಾರ್ ಏರ್' ಸಂಸ್ಥಾಪಕ ಉದ್ಯಮಿ ಸಂಜಯ್ ಘೋಡಾವತ್ ಅವರನ್ನು ಸಂಪರ್ಕಿಸಿ, ವಿಮಾನಯಾನ ಸಂಸ್ಥೆ ಪ್ರಾರಂಭಿಸುವ ಆರ್ಥಿಕ ಕಾರ್ಯ ವಿಧಾನಗಳ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ. ಒಂದು ವಿಮಾನದ ಬೆಲೆ 200 ಕೋಟಿ ರೂಪಾಯಿ ಇದ್ದು, ಹೊಸದಾದ ಮೂರು ವಿಮಾನ ಖರೀದಿಸಬೇಕೆಂದರೆ 600 ಕೋಟಿ ರೂಪಾಯಿ ವ್ಯಯಿಸಬೇಕು ಎಂದು ಹೇಳಿದ್ದಾರೆ.
ಆದರೆ, ವಿಮಾನವನ್ನು ಬಾಡಿಗೆಗೆ ಪಡೆದರೆ, ವೆಚ್ಚವು ಕಡಿಮೆ ಇರುತ್ತದೆ. ಸರ್ಕಾರಕ್ಕೆ 600 ಕೋಟಿ ರೂಪಾಯಿ ದೊಡ್ಡ ಮೊತ್ತವಲ್ಲವೆಂದು ನನಗನಿಸುವುದಿಲ್ಲ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ. ಮುಂದುವರಿದ ಅವರು, ಪ್ರಾದೇಶಿಕ ವಾಯುಯಾನ ಸಂಪರ್ಕ (Regional Air Connectivity) ಅಭಿವೃದ್ಧಿಗೊಂಡರೆ, ರಾಜ್ಯದಲ್ಲಿ ಸ್ವಂತ ವಿಮಾನಯಾನ ಸಂಸ್ಥೆ ಶುರು ಮಾಡುವುದು ಅಸಾಧ್ಯದ ಮಾತಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರವೇ ಏರ್‌ಲೈನ್ಸ್ ಆರಂಭಿಸುವುದರಿಂದ ಮೈಸೂರು - ಬೆಂಗಳೂರು, ಬೆಂಗಳೂರು - ಕಲಬುರಗಿ, ಬೆಂಗಳೂರು - ಹುಬ್ಬಳ್ಳಿ, ಮೈಸೂರು - ಕಲಬುರಗಿ, ಬೆಂಗಳೂರು - ಶಿವಮೊಗ್ಗಕ್ಕೆ ವಿಮಾನ ಸೇವೆ ಒದಗಿಸಲು ಸುಲಭ ಸಾಧ್ಯವಾಗುತ್ತದೆ. ಏರ್ ಇಂಡಿಯಾ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಅವರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಕೈಗಾರಿಕಾ & ಮೂಲಸೌಕರ್ಯ ಅಭಿವೃದ್ಧಿ ನಿಗಮವು (KSIIDC) ಈಗಾಗಲೇ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಮುಂಬರುವ ವರ್ಷಗಳಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ವಿಜಯಪುರ, ರಾಯಚೂರು, ಬಳ್ಳಾರಿ, ಕಾರವಾರ ಹಾಗೂ ಹಾಸನ ಏರ್ಪೋರ್ಟ್ ಅನ್ನು ಇದೇ ನಿಗಮವು ನಿರ್ವಹಣೆ ಮಾಡಲಿದೆ. ಅದರಿಂದಾಗಿಯೇ ಪ್ರತ್ಯೇಕ ವಿಮಾನಯಾನ ಸಂಸ್ಥೆಯ ಕನಸು ಚಿಗುರೊಡೆದಿದೆ.
ಇನ್ನು, ಕರ್ನಾಟಕ ನಾಗರಿಕ ವಿಮಾನಯಾನ ನೀತಿ ರೂಪಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ನೀಡಿದ ಭರವಸೆಯಂತೆ ಈ ಯೋಜನೆ ಬಗ್ಗೆ ಚಿಂತನೆ ನಡೆದಿದೆ. ಒಂದೊಮ್ಮೆ ಇದು ಸಾಕಾರಗೊಂಡು ರಾಜ್ಯದಲ್ಲಿ ಪ್ರತ್ಯೇಕ ವಿಮಾನಯಾನ ಸಂಸ್ಥೆ ಸ್ಥಾಪನೆಗೊಂಡರೆ, ದೇಶದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಆಗುತ್ತದೆ. ಜೊತೆಗೆ ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ಬೆಳವಣಿಗೆಯಾಗುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಹಾಗೆಯೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.


Click it and Unblock the Notifications