ಮೋದಿ - ಮಸ್ಕ್ ಭೇಟಿ: ಕರ್ನಾಟಕಕ್ಕೆ ಬರಲು ಟೆಸ್ಲಾಗೆ ಎಂ.ಬಿ.ಪಾಟೀಲ್ ಆಹ್ವಾನ, ಇವಿ ಉದ್ಯಮದಲ್ಲಿ ನಾವೇ ಮುಂದು!
ಭಾರತದಲ್ಲಿ ಶೂನ್ಯ ಹೊರಸೂಸುವಿಕೆಯ ವಾಹನಗಳ ಮೂಲಕ ಶುದ್ಧ ಪರಿಸರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಪಣ ತೊಟ್ಟಿದ್ದು, ಅದಕ್ಕಾಗಿ ಎಲೆಕ್ಟ್ರಿಕ್ ವಾಹನ (ಇವಿ) ಖರೀದಿಯನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದಕ್ಕೆ ಸಹಕಾರವೆಂಬಂತೆ ಹಲವು ಸ್ವದೇಶಿ ಹಾಗೂ ವಿದೇಶಿ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ, ಮಾರಾಟ ಮಾಡುತ್ತಿವೆ.
ಈ ವಾರದ ಆರಂಭದಲ್ಲಿ ಅಮೆರಿಕಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿ, ಭಾರತದಲ್ಲಿ ಹೊಡಿಕೆ ಮಾಡುವ ಸಂಬಂಧ ಮಾತುಕತೆ ನಡೆಸಿದ್ದರು. ಈ ಬಗ್ಗೆ ಪ್ರತಿಕಿಯೆ ನೀಡಿದ್ದ ಮಸ್ಕ್, 'ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲಿದ್ದೇನೆ. ಶೀಘ್ರದಲ್ಲೇ ಟೆಸ್ಲಾ ಕಂಪನಿ ಭಾರತದಲ್ಲಿ ಕಾರ್ಯಾರಂಭ ಮಾಡುತ್ತದೆ. ಆದಷ್ಟು ಬೇಗ ದೊಡ್ಡ ಘೋಷಣೆ ಮಾಡುತ್ತೇನೆ' ಎಂದು ಹೇಳಿದ್ದರು.

ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಶುಕ್ರವಾರ ಎಲಾನ್ ಮಸ್ಕ್ ಅವರನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಭಾರತದಲ್ಲಿ ಟೆಸ್ಲಾ ಕಂಪನಿ ಹೊಡಿಕೆ ಮಾಡಲು ರಾಜ್ಯವು ಅತ್ಯುತ್ತಮ ತಾಣವಾಗಿದೆ. ಪ್ರಗತಿಪರ ಹಾಗೂ ತಂತ್ರಜ್ಞಾನದ ಕೇಂದ್ರವಾಗಿರುವ ಕರ್ನಾಟಕವು ಟೆಸ್ಲಾ ಮತ್ತು ಸ್ಟಾರ್‌ಲಿಂಕ್ ಸೇರಿದಂತೆ ಮಸ್ಕ್ ಅವರ ಇತರೆ ಉದ್ಯಮಗಳ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರ ನೀಡುತ್ತದೆ' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕದಲ್ಲಿ ಹೊಡಿಕೆ ಮಾಡಲು ಎಲಾನ್ ಮಾಸ್ಕ್ ಅವರನ್ನು ಆಹ್ವಾನಿಸಲು ಆಸಕ್ತಿ ತೋರಿಸಿದ್ದಾರೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ಒಂದೆಡು ವರ್ಷಗಳ ಹಿಂದಿನಿಂದಲೇ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಮಾಸ್ಕ್ ಅವರನ್ನು ಆಹ್ವಾನಿಸಲಾಗುತ್ತಿದೆ. 2021ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಟೆಸ್ಲಾ ಬೆಂಗಳೂರಿನಲ್ಲಿ ಉತ್ಪಾದನಾ ಹಾಗೂ ಸಂಶೋಧನಾ ಘಟಕ ತೆರೆಯಲಿದೆ ಎಂದು ಟ್ವೀಟ್ ಮಾಡಿದ್ದರು. ಆದರೆ, ಕೆಲವೇ ಗಂಟೆಗಳ ಅಂತರದಲ್ಲಿ ಡಿಲೀಟ್ ಮಾಡಿದ್ದರು.

2021ರ ಜನವರಿ ತಿಂಗಳಲ್ಲಿ ಟೆಸ್ಲಾದ ಅಂಗಸಂಸ್ಥೆಯಾದ 'ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್' ಬೆಂಗಳೂರಿನಲ್ಲಿ ನೋಂದಾಯಿಸಿತ್ತು. ಇದನ್ನು ಗಮನಿಸಿದಾಗ ಬಹುತೇಕ ರಾಜ್ಯದಲ್ಲಿ ಹೂಡಿಕೆ ಮಾಡಲು ಆಗಲೇ 'ಟೆಸ್ಲಾ' ಆಸಕ್ತಿ ತೋರಿಸಿತ್ತು ಎಂದು ಹೇಳಬಹುದು. ಕಳೆದ ವರ್ಷ, ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ಸವಾಲುಗಳಿವೆ ಎಂದು ಮಸ್ಕ್ ಟ್ವೀಟ್ ಮಾಡಿದಾಗ ಕರ್ನಾಟಕ ತೆಲಂಗಾಣ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಎಲಾನ್ ಮಸ್ಕ್ ಅವರನ್ನು ಆಹ್ವಾನಿಸಿದ್ದರು.
ಕರ್ನಾಟಕಲ್ಲಿ ಟೆಸ್ಲಾ ಏಕೆ ಹೂಡಿಕೆ ಮಾಡಬೇಕು?: ದೇಶದ ಎಲೆಕ್ಟ್ರಿಕ್ ವಾಹನ ಉದ್ಯಮ ದೊಡ್ಡಮಟ್ಟದ ಉದ್ಯೋಗ ಸೃಷ್ಟಿಗೆ ಸಾಕ್ಷಿಯಾಗಲಿದ್ದು, 'ಬೆಂಗಳೂರು' ಪ್ರಮುಖ ಕೇಂದ್ರ ಸ್ಥಾನವಾಗಿ ಹೊರಹೊಮ್ಮಲಿದೆ. ಅಧ್ಯಯನವೊಂದರ ಪ್ರಕಾರ, ಈ ಕ್ಷೇತ್ರದಲ್ಲಿ ದೇಶಾದ್ಯಂತ 2030ರ ವೇಳೆಗೆ 50 ಲಕ್ಷ ಮಂದಿಗೆ ಉದ್ಯೋಗ ದೊರೆಯಲಿದೆ. ಕಳೆದ ವರ್ಷ ಇವಿ ಉದ್ಯಮದಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಮಂದಿಗೆ ಕೆಲಸ ಸಿಕ್ಕಿತ್ತು.

ಅದಕ್ಕೆ ಕಾರಣ, ಎಲೆಕ್ಟ್ರಿಕ್ ವಾಹನಗಳ ಹೆಚ್ಚು ಸಂಶೋಧನೆಗಳು ಬೆಂಗಳೂರು ಕೇಂದ್ರೀಕೃತವಾಗಿ ನಡೆಯುತ್ತಿವೆ. ಪ್ರಮುಖವಾಗಿ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಬೆಂಗಳೂರು ಮೂಲದ ಕಂಪನಿಗಳಾದ ಓಲಾ, ಎಥರ್, ಸಿಂಪಲ್ ಎನರ್ಜಿ, ಅಲ್ಟ್ರಾವೈಲೆಟ್ ಹಾಗೂ ಪ್ರವೇಗ್ ತಮ್ಮದೇ ಆದ ಛಾಪು ಮೂಡಿಸುತ್ತಿವೆ. ಈಗಾಗಲೇ 'ಇವಿ ಹಬ್' ಆಗಿ ಕರ್ನಾಟಕ ಗುರುತಿಸಿಕೊಳ್ಳುತ್ತಿದ್ದು, ತನ್ನ ಕಂಪನಿಗೆ ಬೇಕಾದ ಸಿಬ್ಬಂದಿಯ ನೇಮಕಕ್ಕೆ ಅಗತ್ಯ ಮಾನವ ಸಂಪನ್ಮೂಲ ಇಲ್ಲಿರುವುದರಿಂದ 'ಟೆಸ್ಲಾ' ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗಬಹುದು.
ಒಟ್ಟಾರೆ, ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ನೈಪುಣ್ಯತೆ ಹೊಂದಿರುವ ಯುವ ಸಮೂಹವೇ ಇದ್ದು, ಬೆಂಗಳೂರು ಈಗಾಗಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿದೆ. ಇವಿ ಉದ್ಯಮದಲ್ಲಿಯು ಮುನ್ನೆಲೆಗೆ ಬರುತ್ತಿತ್ತು, ಟೆಸ್ಲಾ ಕಂಪನಿಗೆ ರಾಜ್ಯದಲ್ಲಿ ಉದ್ಯಮ ಸ್ಥಾಪನೆ ಮಾಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬೆಂಬಲವಾಗಿ ನಿಲ್ಲುತ್ತೇವೆ ಎಂದಿರುವುದು ಉತ್ತಮ ಬೆಳವಣಿಗೆಯಾಗಿದೆ.


Click it and Unblock the Notifications