ಕನ್ನಡ ಮಣ್ಣಿನ ತಾಕತ್: ಟ್ರಕ್, ಬಸ್‌ನ್ನು ಸುಲಭವಾಗಿ ಎಳೆದ ಬೆಂಗಳೂರಿನ ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಬೈಕ್!
ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬೆಂಗಳೂರಿನ ಇ-ಸ್ಕೂಟರ್ ಹಾಗೂ ಬೈಕ್‌ಗಳು ಅಬ್ಬರಿಸುತ್ತಿವೆ. ಪ್ರಮುಖವಾಗಿ ಅಲ್ಟ್ರಾವೈಲೆಟ್ (Ultraviolette) ಕಂಪನಿಯ 'ಎಫ್77' ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿದೆ. ಇತ್ತೀಚೆಗೆ ಯೂಟ್ಯೂಬರ್ ಒಬ್ಬರು ಈ ಬೈಕ್ ಸಾಮರ್ಥ್ಯವನ್ನು ಪರೀಕ್ಷಿಸಿದ್ದಾರೆ.
ಈ ವಿಡಿಯೋವನ್ನು ಬೈಕ್ ವಿತ್ ಗರ್ಲ್ (Bike With Girl) ಎಂಬ ಯೂಟ್ಯೂಬ್ ವಾಹಿನಿಯಲ್ಲಿ ಹಂಚಿಕೊಳ್ಳಲಾಗಿದ್ದು, ಅಲ್ಟ್ರಾವೈಲೆಟ್ ಎಫ್77 (Ultraviolette F77) ಎಲೆಕ್ಟ್ರಿಕ್ ಬೈಕ್ ಮೂಲಕ ಕಾರು, ಟ್ರಕ್ ಹಾಗೂ ಬಸ್ ಎಳೆದು, ಅದರ ಶಕ್ತಿಯನ್ನು ಟೆಸ್ಟ್ ಮಾಡಲಾಗಿದೆ. ಮೊದಲಿಗೆ 1700 ಕೆಜಿ ತೂಕದ ಟೊಯೋಟಾ ಇನ್ನೋವಾ (Toyota Innova) ಎಂಪಿವಿಗೆ ಅಗ್ಗವನ್ನು ಕಟ್ಟಿ, ಅದನ್ನು ಎಳೆಯಲು ಪ್ರಯತ್ನಿಸಲಾಗಿದ್ದು, ಅದು ಸುಲಭವಾಗಿ ಮುಂದೆ ಚಲಿಸಿದೆ.

ಈಗ, ಟ್ರಕ್ ಎಳೆಯುವ ಸರದಿ. ಅಲ್ಟ್ರಾವೈಲೆಟ್ ಎಫ್77ವೊಂದು ಎಲೆಕ್ಟ್ರಿಕ್ ಮೋಟಾರ್‌ಸೈಕಲ್, ಅದಕ್ಕೆ ಟ್ರಕ್‌ನಂತಹ ಬೃಹತ್ ವಾಹನ ಎಳೆಯಲು ಸಾಧ್ಯವೇ ಎಂಬ ಪ್ರಶ್ನೆ ಬಹುತೇಕರಲ್ಲಿ ಏಳಬಹುದು. ಆದರಿಲ್ಲಿ ನಾವು ಊಹಿಸಿದ ರೀತಿಯಲ್ಲಿ ನಡೆಯಲಿಲ್ಲ. 20 ಅಡಿ ಉದ್ದದ 6,500 ಕೆಜಿ ತೂಕದ ಟ್ರಕ್‌ನ್ನು ಅಲ್ಟ್ರಾವೈಲೆಟ್ ಎಫ್77 ಇ-ಬೈಕ್ ಎಳೆದಿದೆ. ಆದರೆ, ಟೊಯೋಟಾ ಇನ್ನೋವಾವನ್ನು ಎಳೆಯುವಾಗಿದ್ದ ವೇಗ ಇಲ್ಲಿ ಇರಲಿಲ್ಲ. ಅದು ನಿಧಾನವಾಗಿತ್ತು.
ಯಾವುದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಬಸ್ ನಂತಹ ದೊಡ್ಡ ವಾಹನ ಎಳೆಯುವುದು ಸಾಧ್ಯವಿಲ್ಲದ ಮಾತು. ಆದರೆ, ನಮ್ಮ ಬೆಂಗಳೂರಿನ ಅಲ್ಟ್ರಾವೈಲೆಟ್ ಎಫ್77 ಬೈಕ್ ಅದನ್ನು ಹುಸಿಗೊಳಿಸಿದೆ. ಬೃಹತ್ ಗ್ರಾತ್ರದ 7,500 ಕೆಜಿ ತೂಗುವ ಬಸ್ ಅನ್ನು ಈ ಬೈಕ್ (ಕಡಿಮೆ ವೇಗ) ಎಳೆದಿದೆ. ಇಲ್ಲಿ ಗಮನಿಬೇಕಾದ ಪ್ರಮುಖ ಅಂಶವೆಂದರೆ, ಇದನ್ನು ಖಾಸಗಿ ಟ್ರ್ಯಾಕ್ ವೊಂದರಲ್ಲಿ ಮಾಡಲಾಗಿದ್ದು, ನೀವು ಎಂದಿಗೂ ಈ ರೀತಿಯ ಪ್ರಯತ್ನವನ್ನು ಮಾಡಬೇಡಿ.

ಕಡೆಗೆ ಈ ಯುಟ್ಯೂಬರ್ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದು, ಟ್ರಕ್ ಹಾಗೂ ಬಸ್‌ನ್ನು (14,000 ಕೆಜಿ ತೂಕ) ಒಟ್ಟಿಗೆ ಎಳೆಯಲು ನಿರ್ಧರಿಸಿದ್ದಾರೆ. ಆರಂಭದಲ್ಲಿ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಬೈಕ್, ಇವುಗಳನ್ನು ಎಳೆಯಲು ಹರಸಾಹಸ ಪಟ್ಟಿದ್ದು, ಆ ಮೇಲೆ ಲೀಲಾಜಾಲವಾಗಿ ಚಲಿಸುತ್ತದೆ. ನಿಮಗೆ ಗೊತ್ತಿರಲಿ.. ಇಂಧನ ಚಾಲಿತ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಟಾರ್ಕ್ ಉತ್ಪಾದಿಸುತ್ತವೆ. ಆ ಕಾರಣಕ್ಕೆ ಇದು ಸಾಧ್ಯವಾಗಿದೆ.
ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಅಲ್ಟ್ರಾವೈಲೆಟ್, ತನ್ನ ಎಫ್77 ಎಲೆಕ್ಟ್ರಿಕ್ ಬೈಕ್ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದೆ. ಈ ಎಫ್77 ಬೈಕ್, ರೂ.3.8 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಇದರ ಪ್ರೀಮಿಯಂ ಮಾದರಿ ಎಫ್77 ರೆಕಾನ್ ರೂ.4.55 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ಸಿಗುತ್ತದೆ.

ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಬೈಕ್ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಇದರಲ್ಲಿ ಬಳಕೆ ಮಾಡಲಾಗಿರುವ ಎಲೆಕ್ಟ್ರಿಕ್ ಮೋಟಾರ್, 38.8 bhp ಗರಿಷ್ಠ ಪವರ್ ಹಾಗೂ 95 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 147 km/h ಟಾಪ್ ಸ್ವೀಡ್ ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 7.1 kWh ಹಾಗೂ 10.3 kWh ಬ್ಯಾಟರಿ ಪ್ಯಾಕ್ ಪಡೆದಿದೆ.
ಈ ಅಲ್ಟ್ರಾವೈಲೆಟ್ ಎಫ್77 ರೇಂಜ್ ಕುರಿತು ಹೇಳುವುದಾದರೆ, ಸಂಪೂರ್ಣ ಚಾರ್ಜ್ ನಲ್ಲಿ 206 km ರಿಂದ 307 km ಕ್ರಮಿಸುವ ಸಾಮರ್ಥ್ಯ ಒಳಗೊಂಡಿದೆ. ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, 5 ಇಂಚಿನ TFT ಇನ್ಸ್ಟ್ರುಮೆಂಟಲ್ ಕನ್ಸೋಲ್, ಎಲ್ಇಡಿ ಲೈಟಿಂಗ್, ರೈಡ್ ಅನಾಲಿಟಿಕ್ಸ್, ನ್ಯಾವಿಗೇಷನ್, ಜಿಯೋಫೆನ್ಸಿಂಗ್, ಕ್ರ್ಯಾಶ್ ಡಿಟೆಕ್ಷನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications