KSRTC: 'ಕೆಎಸ್‌ಆರ್‌ಟಿಸಿ' ಲೋಗೋ ಬಳಕೆ.. ಕರ್ನಾಟಕಕ್ಕೆ ಜಯ, ಕೇರಳ ಅರ್ಜಿ ವಜಾ
'ಕೆಎಸ್‌ಆರ್‌ಟಿಸಿ' ಸಂಕ್ಷೇಪಣ (Abbreviation) ಬಳಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಗೆ ಇದ್ದ ಎಲ್ಲಾ ಕಾನೂನು ಅಡೆತಡೆಗಳನ್ನು ಮದ್ರಾಸ್ ಹೈಕೋರ್ಟ್ (Madras High Court) ಮಂಗಳವಾರ ತೆರವುಗೊಳಿಸಿದೆ. ಆ ಬಗ್ಗೆ ಕೆಎಸ್‌ಆರ್‌ಟಿಸಿ ಶುಕ್ರವಾರ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿದೆ.
ಕರ್ನಾಟಕ (Karnataka) ಸಾರಿಗೆ ಸಂಸ್ಥೆಯು ಕೆಎಸ್‌ಆರ್‌ಟಿಸಿ ಸಂಕ್ಷೇಪಣ ಉಪಯೋಗ ಮಾಡಬಾರದು ಎಂದು ಕೇರಳ (Kerala) ರಾಜ್ಯ ಸಾರಿಗೆ ನಿಗಮ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಕೇರಳದ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯು 1965 ಹಾಗೂ ಕರ್ನಾಟಕ ಸಾರಿಗೆ ನಿಗಮವು 1973 ರಿಂದ ಕೆಎಸ್‌ಆರ್‌ಟಿಸಿ (KSRTC) ಸಂಕ್ಷೇಪಣವನ್ನು ಬಳಕೆ ಮಾಡುತ್ತಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (Karnataka State Road Transport Corporation), 1973 ರಿಂದ ಕೆಎಸ್‌ಆರ್‌ಟಿಸಿ ಲೋಗೋ ಬಳಕೆ ಮಾಡಲಾಗುತ್ತಿದೆ ಎಂದು ಹಲವು ದಾಖಲೆಯನ್ನು ಸಲ್ಲಿಸಿ, ಕೇಂದ್ರ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿ (Trade Mark Registry) ಯಿಂದ 2013 ರಲ್ಲಿ ಟ್ರೇಡ್ ಮಾರ್ಕ್ ಪ್ರಮಾಣಪತ್ರವನ್ನು ಪಡೆದುಕೊಂಡಿತ್ತು.
ಇದಕ್ಕೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (Intellectual Property Appellate Board - IPAB) ಯಲ್ಲಿ ಪ್ರಶ್ನೆ ಮಾಡಿ, ಕರ್ನಾಟಕವು 'ಕೆಎಸ್‌ಆರ್‌ಟಿಸಿ' ಸಂಕ್ಷೇಪಣ ಬಳಕೆ ಮಾಡುತ್ತಿರುವುದಕ್ಕೆ ಆಕ್ಷೇಪ ಎತ್ತಿತ್ತು. ಕೇರಳ ರಾಜ್ಯವು 1965 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಆ ಸಾರಿಗೆ ಸಂಸ್ಥೆಗೆ ಕೆಎಸ್‌ಆರ್‌ಟಿಸಿ ಎಂಬ ಸಂಕ್ಷೇಪಣ ಉಪಯೋಗಿಸುತ್ತಿದೆ.

ಮೈಸೂರು ರಾಜ್ಯವನ್ನು 'ಕರ್ನಾಟಕ' ಎಂದು 1973 ರಲ್ಲಿ ಮರು ನಾಮಕರಣಗೊಳಿಸಿತು. ಆ ಬಳಿಕ ಮೈಸೂರು ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಎಂದು ಬದಲಾಯಿತು. ಆಗಿನಿಂದ ಎರಡು ರಾಜ್ಯಗಳ ನಡುವೆ 'ಕೆಎಸ್‌ಆರ್‌ಟಿಸಿ' ಹೆಸರಿಗಾಗಿ ತಿಕ್ಕಾಟ ಶುರುವಾಗಿತ್ತು. ಕೇರಳವು ಕರ್ನಾಟಕ ಪಡೆದಿದ್ದ ಟ್ರೇಡ್ ಮಾರ್ಕ್ ಪ್ರಮಾಣಪತ್ರವನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿತ್ತು.
ಆದರೆ, ಕರ್ನಾಟಕ ಸಾರಿಗೆ ನಿಗಮವು 'ಕೆಎಸ್‌ಆರ್‌ಟಿಸಿ' ಲೋಗೋದಲ್ಲಿ ಗಂಡಭೇರುಂಡ (Gandaberunda) ಚಿಹ್ನೆ ಉಪಯೋಗಕ್ಕೆ ಟ್ರೇಡ್ ಮಾರ್ಕ್ ಪಡೆದಿದ್ದು, ಕೇರಳ ಸಾರಿಗೆ ನಿಗಮದ ಲೋಗೋದಲ್ಲಿ ಆನೆ (Elephant) ಗುರುತುಯಿದೆ. ಅದು ಬೇರೆ ಟ್ರೇಡ್ ಮಾರ್ಕ್ ಎಂದು ಕರ್ನಾಟಕ ವಾದ ಮಾಡಿತ್ತು. ಕೇಂದ್ರ ಸರ್ಕಾರ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (IPAB) ಅನ್ನು ರದ್ದುಗೊಳಿಸಿದ ನಂತರ, ಅಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.

ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ಮದ್ರಾಸ್ ಹೈಕೋರ್ಟ್, ಡಿಸೆಂಬರ್ 12 ರಂದು ಕೇರಳ ಆರ್‌ಟಿಸಿ (Kerala RTC) ಸಲ್ಲಿಸಿದ ಅರ್ಜಿಗಳನ್ನು ವಜಾಗೊಳಿಸಿದ್ದು, ಕರ್ನಾಟಕದ ವಾದವನ್ನು ಎತ್ತಿ ಹಿಡಿದಿದೆ. ಈ ಬಗ್ಗೆ ಕರ್ನಾಟಕ ಸಾರಿಗೆ ಸಂಸ್ಥೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಇನ್ಮುಂದೆ 'ಕೆಎಸ್‌ಆರ್‌ಟಿಸಿ' ಹೆಸರನ್ನು ಬಳಸಲು ನಿಗಮಕ್ಕೆ ಯಾವುದೇ ಕಾನೂನು ಅಡಚಣೆಯಿಲ್ಲ ಎಂದು ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications