Cruise Service: ದುಬೈನಿಂದ ಭಾರತದ ಈ ನಗರಕ್ಕೆ ಹಡಗು ಸೇವೆ.. ಟಿಕೆಟ್ ದರ ತೀರಾ ಕಡಿಮೆ, ವಿಮಾನದಂತೆ ಸೌಕರ್ಯ!
ಕೇರಳ ಸರ್ಕಾರ (Kerala government) ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ದುಬಾರಿ ಟಿಕೆಟ್ ವೆಚ್ಚವನ್ನು ಕಡಿಮೆಗೊಳಿಸಲು ಬೇಪೋರ್-ಕೊಚ್ಚಿ-ದುಬೈ (Beypore-Kochi-Dubai) ನಡುವೆ ಕ್ರೂಸ್ (ಹಡಗು) ಸೇವೆ ಆರಂಭಿಸಲು ಅನುಮತಿ ನೀಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಶೀಘ್ರದಲ್ಲೇ 'ಕ್ರೂಸ್' ಸಾಗರೋತ್ತರ ಮಾರ್ಗದಲ್ಲಿ ಸಂಚಾರ ನಡೆಸಲಿದೆ ಎಂದು 'ಮನೋರಮಾ' ವರದಿ ಮಾಡಿದೆ. ಅನಿವಾಸಿ ಭಾರತೀಯರಿಂದ ಭಾರೀ ಬೇಡಿಕೆ ಬಂದ ಹಿನ್ನೆಲೆ, ಈ ತೀರ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಬಂದರು ಸಚಿವ ಸರ್ಬಾನಂದ ಸೋನೋವಾಲ್ (Sarbananda Sonowal) ಅವರು ಕೂಡ ಕ್ರೂಸ್ ಓಡಾಟಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ದುಬೈ - ಭಾರತ ಮಧ್ಯೆ ಕ್ರೂಸ್ ಸೇವೆ ಪ್ರಾರಂಭವಾದ ಬಳಿಕ, ವಿದೇಶದಲ್ಲಿರುವ ಅನಿವಾಸಿ ಭಾರತೀಯರು, ಅದರಲ್ಲೂ ಕೇರಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ಹೆಚ್ಚಳಗೊಳ್ಳುತ್ತಿರುವ ವಿಮಾನ ಟಿಕೆಟ್ ದರಕ್ಕೆ ಪರ್ಯಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ವಿಮಾನ ಟಿಕೆಟ್‌ಗಳ ಅರ್ಧ ಅಥವಾ ಮೂರನೇ ಒಂದು ಭಾಗದಷ್ಟು ಹಣದಲ್ಲಿಯೇ ಈ ಕ್ರೂಸ್‌ನಲ್ಲಿ ಪ್ರಯಾಣಿಸಬಹುದಾಗಿದೆ.
ತಡೆ ರಹಿತವಾಗಿರುವ ಕ್ರೂಸ್ (ಹಡಗು), ದೊಡ್ಡ ವಿಮಾನದಂತೆ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಸುಗಮ ಸಂಚಾರವನ್ನು ಒದಗಿಸುತ್ತದೆ. ವಿಮಾನಕ್ಕೆ ಹೋಲಿಸಿದರೆ, 3 ಪಟ್ಟು ಹೆಚ್ಚು ಲಗೇಜ್ ಸಾಗಿಸುವ ಸಾಮರ್ಥ್ಯವನ್ನು ಪಡೆದಿದೆ. ಈ ಕ್ರೂಸ್‌ನಲ್ಲಿ 1,250 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಈ ಹಡಗು ದುಬೈನಿಂದ ಕೊಚ್ಚಿಗೆ ಬರಲು 3 ದಿನ ತೆಗದುಕೊಳ್ಳುತ್ತದೆ.

ದುಬೈ - ಕೊಚ್ಚಿ ನಡುವೆ ಏರ್ ಇಂಡಿಯಾ (Air India), ಸ್ಪೈಸ್ ಜೆಟ್ (SpiceJet) ಹಾಗೂ ಇಂಡಿಗೋ IndiGo) ಸೇರಿದಂತೆ ವಿವಿಧ ವಿಮಾನಯಾನ ಸಂಸ್ಥೆಗಳ ವಿಮಾನಗಳು ಕಾರ್ಯಾಚರಣೆ ನಡೆಸಲಿದ್ದು, ಪ್ರಯಾಣದ ಅವಧಿಯು 3 ಗಂಟೆ 55 ನಿಮಿಷದಿಂದ 4 ಗಂಟೆ 10 ನಿಮಿಷವಿದೆ. ಟಿಕೆಟ್ ದರಗಳು ರೂ.19,594 ದಿಂದ ರೂ.24,260ರವರೆಗೆ ಇದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾರ್ಜಾ ಭಾರತೀಯ ಸಂಘದ ಅಧ್ಯಕ್ಷ ವೈ.ಎ.ರಹೀಮ್ ಅವರು, 'ಡಿಸೆಂಬರ್‌ನಲ್ಲಿ ಬರುವ ಶಾಲಾ ರಜೆಗೂ ಮುನ್ನ, ಕ್ರೂಸ್ ಸೇವೆ ಶುರುವಾಗುವ ನೀರಿಕ್ಷೆಯಿದೆ' ಎಂದು ಹೇಳಿದ್ದಾರೆ. ಈ ಹಡಗನ್ನು ಪ್ರಾರಂಭಿಸಿರುವುದರಿಂದ ಗಲ್ಫ್ ರಾಷ್ಟ್ರದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ವಿಮಾನದ ಟಿಕೆಟ್ ಗೆ ಮಾಡುವ ಅರ್ಧ ಹಣದಲ್ಲಿ ತಮ್ಮ ಊರಿಗೆ ಪ್ರಯಾಣಿಸಬಹುದು.

ಇತ್ತೀಚಿನ ದಿನದಲ್ಲಿ ಭೂ ಸಾರಿಗೆ ಮೇಲೆ ಹೆಚ್ಚಿದ ಒತ್ತಡವನ್ನು ತಪ್ಪಿಸಲು ಜಲ ಸಾರಿಗೆಗೆ ಆದ್ಯತೆ ನೀಡಲಾಗುತ್ತಿದೆ. ಈ ವರ್ಷದ ಏಪ್ರಿಲ್‌ನಲ್ಲಿ ದೇಶದಲ್ಲಿ ಮೊದಲ ವಾಟರ್ ಮೆಟ್ರೋಗೆ ಕೇರಳದ ಕೊಚ್ಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ವಾಟರ್ ಮೆಟ್ರೋ ಸಣ್ಣ ಹಡಗಿನ ರೀತಿ ಇರಲಿದ್ದು, ತೀರ ಪ್ರದೇಶಗಳ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈಗ ಅಯೋಧ್ಯೆಯಲ್ಲಿಯೂ ಈ ಸೇವೆ ಆರಂಭವಾಗುವ ನೀರಿಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications