KSRTC: ಅಯ್ಯಪ್ಪ ಭಕ್ತರಿಗೆ ಸಿಹಿಸುದ್ದಿ, ಬೆಂಗಳೂರಿನಿಂದ ಶಬರಿಮಲೆಗೆ ಬಸ್.. ಟಿಕೆಟ್ ದರವೆಷ್ಟು?
ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಶಬರಿಮಲೆ (Sabarimala) ಅಯ್ಯಪ್ಪ ಸ್ವಾಮಿ (Ayyappa Swamy) ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಇಲ್ಲಿದೆ ಸಿಹಿಸುದ್ದಿ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಈ ಮಾರ್ಗದಲ್ಲಿ ಹೊಸ ವೋಲ್ವೋ ಬಸ್ (Volvo bus) ಸೇವೆಯನ್ನು ಪ್ರಾರಂಭಿಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಪ್ರತಿವರ್ಷ ರಾಜ್ಯದಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ಬಸ್ ಸಂಚಾರದಿಂದ ಅವರಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ. ಡಿಸೆಂಬರ್ 1ರಿಂದ ಐರಾವತ ವೋಲ್ವೋ ಬಸ್ ಸಂಚಾರ ಆರಂಭವಾಗಲಿದ್ದು, ಟಿಕೆಟ್ ದರ ರೂ.1600 ಇದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಬುಕ್ಕಿಂಗ್ ಮಾಡಬಹುದು.

ಪ್ರಯಾಣಿಕರಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವಾರು ತಮ್ಮ ಆಸನಗಳನ್ನು ಕಾಯ್ದಿರಿಸುತ್ತಿದ್ದಾರೆ. ಇನ್ನೂ 15 ಸೀಟುಗಳು ಮಾತ್ರ ಬಾಕಿ ಉಳಿದಿದ್ದು, ಸಾಮಾನ್ಯ ದರಕ್ಕಿಂದ ಟಿಕೆಟ್ ಬೆಲೆ ಕೊಂಚ ಅಧಿಕಗೊಂಡಿದ್ದು, ರೂ.1,750 ಆಗಿದೆ. 'ಐರಾವತ' ಪ್ರೀಮಿಯಂ ಬಸ್ ಆಗಿರುವುದರಿಂದ ಶಕ್ತಿ ಯೋಜನೆ ಇದಕ್ಕೆ ಅನ್ವಯವಾಗುವುದಿಲ್ಲ. ಈ ರೀತಿಯ ಬಸ್‌ಗಳಲ್ಲಿ ಎಲ್ಲರೂ ಟಿಕೆಟ್ ಖರೀದಿಸಬೇಕಾಗಿದೆ.
ಶಾಂತಿನಗರ (Shanthinagar) ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50 ಗಂಟೆಗೆ ಹೊರಡುವ ಈ ಬಸ್, ಮರುದಿನ ಬೆಳಿಗ್ಗೆ 6.45ಕ್ಕೆ ನಿಲಕ್ಕಲ್ (ಪಂಪಾ - ಶಬರಿಮಲೆ) ತಲುಪುತ್ತದೆ. ನಿಲಕ್ಕಲ್‌ನಿಂದ (Nilakkal) ಸಂಜೆ 6ಕ್ಕೆ ಸಂಚಾರ ಆರಂಭಿಸುವ ಬಸ್, ಬೆಳಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ ಎಂದು ಕೆಎಸ್‌ಆರ್‌ಟಿಸಿ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಕಳೆದ ತಿಂಗಳು ಕೆಎಸ್‌ಆರ್‌ಟಿಸಿ, ರಾಜ್ಯದ ಜನರು ದೂರದ ಊರುಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅತ್ಯಾಕರ್ಷಕ ನಾನ್ ಎಸಿ ಸ್ಲೀಪರ್ (Non AC Sleeper) ಬಸ್‌ಗಳನ್ನು ಪರಿಚಯಿಸಿತ್ತು. ಒಟ್ಟು 40 'ಪಲ್ಲಕ್ಕಿ' (ನಾನ್ ಎಸಿ ಸ್ಲೀಪರ್) ಬಸ್‌ಗಳು ಕಾರ್ಯಾಚರಣೆಯನ್ನು ಶುರು ಮಾಡಿದ್ದವು. ಇವು, ಅಂಬಾರಿ ಎಸಿ ಬಸ್ಗೆ ಕೊಂಚ ಹೋಲಿಕೆಯಾಗುತ್ತವೆ.
ಇದೇ ವರ್ಷದ ಆಗಸ್ಟ್ 28 ರಂದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ), 'ಕಲ್ಯಾಣ ರಥ' ಹೆಸರಿನಲ್ಲಿ ಹೊಸ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಿತ್ತು. ಈ ಬಸ್ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಸಂಪೂರ್ಣ ಎಸಿ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್ ಸೇರಿದಂತೆ ವಿವಿಧ ಸೌಕರ್ಯಗಳನ್ನು ಪಡೆದಿದೆ.
ಕಳೆದ ಫೆಬ್ರವರಿಯಲ್ಲಿ ಕೆಎಸ್‌ಆರ್‌ಟಿಸಿ ತನ್ನ ಪ್ರೀಮಿಯಂ 'ಅಂಬಾರಿ ಉತ್ಸವ' ವೋಲ್ವೋ 9600 ಮಲ್ಟಿ ಆಕ್ಸಲ್ ಸ್ಲೀಪರ್ ಬಸ್‌ಗಳನ್ನು ಲೋಕಾರ್ಪಣೆ ಮಾಡಿತ್ತು. ಇದು, ದೇಶದಲ್ಲಿಯೇ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಬಸ್ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದು, ಬೆಂಗಳೂರು - ಹೈದರಾಬಾದ್, ಬೆಂಗಳೂರು - ಪಣಜಿ, ಬೆಂಗಳೂರು - ತ್ರಿಶೂರು ಸೇರಿದಂತೆ ವಿವಿಧ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಜನರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications