KSRTC: ಸಿಹಿಸುದ್ದಿ.. ಶೀಘ್ರ ಕೆಎಸ್‌ಆರ್‌ಟಿಸಿಯಿಂದ ಹೊಸ ಐರಾವತ ಬಸ್ ಪರಿಚಯ.. ನಿಮ್ಮೂರಿಗೆ ಬೇಗ ಹೋಗಬಹುದು!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ - KSRTC) ತನ್ನ ಪ್ರಯಾಣಿಕರಿಗೆ ಶೀಘ್ರದಲ್ಲಿಯೇ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದೆ. ದೂರದ ಊರುಗಳಿಗೆ ಪ್ರಯಾಣಿಕರು ಆರಾಮದಾಯಕವಾಗಿ ತೆರಳಲು ಹಲವು ವರ್ಷಗಳ ನಂತರ, ಹೊಸ ಐರಾವತ್ ಕ್ಲಬ್ ಕ್ಲಾಸ್ ಮತ್ತು ಸ್ಲೀಪರ್ ಬಸ್‌ಗಳನ್ನು ಖರೀದಿಸಲು ಮುಂದಾಗಿದೆ.
ಕೆಎಸ್‌ಆರ್‌ಟಿಸಿಯು ಸರಿ ಸುಮಾರು 5 ವರ್ಷಗಳಿಂದ ಯಾವುದೇ ನೂತನ ಐರಾವತ ಬಸ್‌ಗಳನ್ನು ಕಾರ್ಯಾಚರಣೆಗೆ ಬಿಟ್ಟಿಲ್ಲ. ಈಗ ಹಳೆಯ ಬಸ್‌ಗಳನ್ನು ಬದಲಾಯಿಸಲು ಮುಂದಾಗಿದ್ದು, 40 ಹೊಸ ಐರಾವತ ಬಸ್‌ಗಳಿಗೆ ಟೆಂಡರ್ ಕರೆದಿದೆ ಎಂದು 'ದಿ ಹಿಂದೂ' ವರದಿ ಮಾಡಿದೆ. ಹೀಗಿರುವ ಪ್ರೀಮಿಯಂ ಬಸ್‌ಗಳು ಕೆಎಸ್‌ಆರ್‌ಟಿಸಿಗೆ ರಾಷ್ಟ್ರಮಟ್ಟದಲ್ಲಿ ಕೂಡ ಹಲವಾರು ಪುರಸ್ಕಾರಗಳನ್ನು ತಂದುಕೊಟ್ಟಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು, 'ನಾವು ಹೊಸ ಐರಾವತ ಬಸ್‌ಗಳನ್ನು ಖರೀದಿಸಲು ಟೆಂಡರ್ ಆಹ್ವಾನಿಸಿದ್ದೇವೆ. ಶೀಘ್ರ ಹಳೆಯ ಬಸ್‌ಗಳ ಜಾಗಕ್ಕೆ ಹೊಸ ಬಸ್‌ಗಳು ಬರಲಿವೆ. ಟೆಂಡರ್ ಮೂಲಕ ಒಟ್ಟು 40 ಮಲ್ಟಿ ಆಕ್ಸೆಲ್ ಬಸ್‌ಗಳನ್ನು ಕೊಂಡುಕೊಳ್ಳಲಾಗುವುದು' ಎಂದು ಹೇಳಿದ್ದಾರೆ. ಸಾರಿಗೆ ಸಂಸ್ಥೆ ನಿಯಮಗಳ ಪ್ರಕಾರ, 13 ಲಕ್ಷ ಕಿ.ಮೀ ಗಿಂತ ಹೆಚ್ಚಿನ ದೂರ ಓಡಿದ ಎಸಿ ಬಸ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸಬೇಕು.
ನೂತನ ಬಸ್‌ಗಳು ಪ್ರಯಾಣಿಕರಿಗೆ ಐಷಾರಾಮಿ ಸೌಕರ್ಯವನ್ನು ಒದಗಿಸಲಿವೆ. 15 ಮೀಟರ್ ಉದ್ದವಿರುವ ಈ ಬಸ್‌ಗಳು, ಬಿಎಸ್-6 ಎಂಜಿನ್‌ನಿಂದ ಚಾಲಿತವಾಗಲಿವೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ 40 ಆರಾಮದಾಯಕ ಆಸನಗಳನ್ನು ಹೊಂದಿರಲಿವೆ. ಈ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಅದಕ್ಕಾಗಿ ಕ್ಯಾಮೆರಾಗಳು, ಎಮರ್ಜೆನ್ಸಿ ಪ್ಯಾನಿಕ್ ಬಟನ್‌ಗಳು, ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಹಾಗೂ ಫೈರ್ ಡಿಟೆಕ್ಷನ್ ಸಿಸ್ಟಮ್ ಅನ್ನು ಪಡೆದಿರಲಿವೆ ಎನ್ನಲಾಗಿದೆ.
ಕೆಎಸ್‌ಆರ್‌ಟಿಸಿಯು ಪ್ರೀಮಿಯಂ ಸೇರಿದಂತೆ ಒಟ್ಟು 8,234 ಬಸ್‌ಗಳನ್ನು ಓಡಿಸುತ್ತಿದೆ. ಪ್ರತಿದಿನ 7,000 ಕಿ.ಮೀ ಸಂಚರಿಸುವ ನಿಗಮದ ಬಸ್‌ಗಳು, 23 ಲಕ್ಷ ಪ್ರಯಾಣಿಕರನ್ನು ಸುರಕ್ಷಿತವಾಗಿ ನಿರ್ದಿಷ್ಟ ಗಮ್ಯ ಸ್ಥಾನವನ್ನು ತಲುಪಿಸುತ್ತವೆ. ಜೊತೆಗೆ ಪಲ್ಲಕ್ಕಿ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಉತ್ಸವ್ ಹಾಗೂ ರಾಜಹಂಸದಂತಹ ಪ್ರೀಮಿಯಂ ಬಸ್‌ಗಳು ಕೂಡ ಕೆಎಸ್‌ಆರ್‌ಟಿಸಿ ಬಳಿಯಿವೆ.
ಕೆಎಸ್‌ಆರ್‌ಟಿಸಿಯ ಬಸ್‌ಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ ದಾವಣಗೆರೆ ಮತ್ತು ಚಾಮರಾಜನಗರದಿಂದ ಕಾರ್ಯಾಚರಣೆಯನ್ನು ನಡೆಸುತ್ತವೆ. ರಾಜ್ಯ ಹಾಗೂ ಹೊರರಾಜ್ಯದ ಹಲವು ಊರುಗಳಿಗೆ ಸಂಪರ್ಕವನ್ನು ಕಲ್ಪಿಸಲಿದ್ದು, ಬರೋಬ್ಬರಿ 34,904 ಸಿಬ್ಬಂದಿ ಹಗಲು-ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಕೆಎಸ್‌ಆರ್‌ಟಿಸಿಯ ನೂತನ ಅಶ್ವಮೇಧ (Ashvamedha) ಬಸ್‌ಗಳು ಸಹ ಕಾರ್ಯಾಚರಣೆಯನ್ನು ಶುರು ಮಾಡಿದ್ದವು. ಇವು ಸಾಮಾನ್ಯ ಸಾರಿಗೆಯ ಮೇಲ್ದರ್ಜೆಗೇರಿಸಿದ ಬಸ್‌ಗಳಾಗಿದ್ದು, 52 ಆಸನಗಳನ್ನು ಒಳಗೊಂಡಿವೆ. ಮುಂಭಾಗ ಹಾಗೂ ಹಿಂಭಾಗದ ಎಲ್‌ಇಡಿ ಡೆಸ್ಟಿನೇಶನ್ ಬೋರ್ಡ್‌ಗಳನ್ನು ಪಡೆದಿವೆ. ಹಾಗೆಯೇ ಸೆನ್ಸರ್ ಮೂಲಕ ಕಾರ್ಯನಿರ್ವಹಿಸಬಲ್ಲ ಡೋರ್ (ಬಾಗಿಲು)ಗಳನ್ನು ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








