ಬೈಕಿನಲ್ಲಿ ಅಸಭ್ಯವಾಗಿ ಪ್ರಯಾಣಿಸುತ್ತಿದ್ದ ಜೋಡಿಗೆ ಛೀಮಾರಿ ಹಾಕಿದ ಸ್ಥಳೀಯರು
ಭಾರತವು ವಿಶ್ವದ ಅತಿದೊಡ್ಡ ದೇಶಗಳಲ್ಲಿ ಒಂದಾಗಿದೆ. ಸಂಸ್ಕೃತಿ ಹಾಗೂ ಸಂಸ್ಕಾರಗಳಲ್ಲಿ ಭಾರತವು ಇತರ ದೇಶಗಳಿಗೆ ಮಾದರಿಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿರುವಂತಹ ಪದ್ದತಿಗಳಿಗೆ ಭಾರತದಲ್ಲಿ ಜಾಗವಿಲ್ಲ. ಒಂದು ವೇಳೆ ಆ ರೀತಿಯ ಘಟನೆಗಳು ಭಾರತದಲ್ಲಿ ನಡೆದರೆ ಸಾರ್ವಜನಿಕರು ಖಂಡಿಸುತ್ತಾರೆ.

ಕೆಲವೊಮ್ಮೆ ಅಸಭ್ಯ ವರ್ತನೆ ತೋರುವವರಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಹಲವು ಘಟನೆಗಳು ವರದಿಯಾಗಿವೆ. ಈಗ ಇದೇ ರೀತಿಯ ಮತ್ತೊಂದು ಘಟನೆ ವರದಿಯಾಗಿದೆ. ಈ ಘಟನೆ ಬಿಹಾರದಿಂದ ವರದಿಯಾಗಿದೆ. ಈ ಘಟನೆಯಲ್ಲಿ ಜೋಡಿಯೊಂದು ಸಾರ್ವಜನಿಕ ರಸ್ತೆಯಲ್ಲಿ ಅಸಭ್ಯ ರೀತಿಯಲ್ಲಿ ಪ್ರಯಾಣಿಸುತ್ತಿತ್ತು. ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹಿಂದಿನ ಸೀಟಿನಲ್ಲಿ ಕುಳಿತು ಕೊಳ್ಳ ಬೇಕಾಗಿದ್ದ ಯುವತಿ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಅಸಭ್ಯ ರೀತಿಯಲ್ಲಿ ಕುಳಿತಿದ್ದಾಳೆ. ಈ ಅನುಚಿತ ಪ್ರಯಾಣವನ್ನು ನೋಡಿದ ಮತ್ತೊಬ್ಬ ವಾಹನ ಸವಾರ ಈ ಘಟನೆಯನ್ನು ತನ್ನ ಮೊಬೈಲ್ ಮೂಲಕ ರೆಕಾರ್ಡ್ ಮಾಡಿದ್ದಾನೆ.

ಆದರೆ ಬೈಕಿನಲ್ಲಿದ್ದ ಜೋಡಿ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ಪ್ರಯಾಣವನ್ನು ಮುಂದುವರೆಸಿದೆ. ಆಗ ಅಲ್ಲಿದ್ದ ಸ್ಥಳೀಯರು ಬೈಕ್ ಅನ್ನು ತಡೆದು ನಿಲ್ಲಿಸಿದ್ದಾರೆ. ನಂತರ ಆ ಜೋಡಿಯೊಂದಿಗೆ ಮಾತು ಕತೆ ನಡೆಸಿದ್ದಾರೆ.

ಆ ಜೋಡಿಯನ್ನು ಮತ್ತೊಂದು ಬೈಕಿನಲ್ಲಿ ಹಿಂಬಾಲಿಸಿ ತಡೆದು ನಿಲ್ಲಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಯಾವ ಕಾರಣಕ್ಕೆ ಈ ರೀತಿ ಪ್ರಯಾಣ ಬೆಳೆಸುತ್ತಿದ್ದೀರಾ ? ನಿಮ್ಮದು ಯಾವ ಊರು ಎಂದು ಪ್ರಶ್ನೆಗಳ ಸುರಿ ಮಳೆ ಗೈದಿದ್ದಾರೆ.

ಕೆಲ ಹೊತ್ತಿನ ನಂತರ ಆ ಜೋಡಿಯನ್ನು ಗದರಿ, ಸ್ಥಳಕ್ಕೆ ಪೊಲೀಸರನ್ನು ಕರೆಯುವುದಾಗಿ ಎಚ್ಚರಿಕೆ ನೀಡುತ್ತಾರೆ. ಆಗ ಆ ಜೋಡಿ ಮತ್ತೆಂದು ಈ ಪ್ರದೇಶಕ್ಕೆ ಬರುವುದಿಲ್ಲವೆಂದು ತಿಳಿಸಿ ಅಲ್ಲಿಂದ ಹೊರಟು ಹೋಗುತ್ತಾರೆ.

2015 ರಲ್ಲಿಯೂ ಮಧ್ಯಪ್ರದೇಶದ ಯುವ ಜೋಡಿಯೊಂದು ಗೋವಾದ ಸಾರ್ವಜನಿಕ ರಸ್ತೆಯಲ್ಲಿ ಇದೇ ರೀತಿಯಲ್ಲಿ ಪ್ರಯಾಣ ಬೆಳೆಸಿತ್ತು. ಆ ದೃಶ್ಯವನ್ನು ರೆಕಾರ್ಡ್ ಮಾಡಿ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲಾಗಿತ್ತು.

ವೀಡಿಯೊ ಆಧಾರದ ಮೇಲೆ ಆ ಜೋಡಿಯನ್ನು ಪತ್ತೆ ಹಚ್ಚಿದ್ದ ಗೋವಾ ಪೊಲೀಸರು ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದ ಕಾರಣಕ್ಕೆ ಅವರಿಗೆ ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಈ ಘಟನೆಗಳು ಸಾಮಾಜಿಕ ಜಾಲತಾಣಗಳು ಎಷ್ಟು ಪ್ರಬಲವಾಗಿವೆ ಎಂಬುದನ್ನು ತೋರಿಸುತ್ತವೆ.

ಈ ರೀತಿ ಸಾರ್ವಜನಿಕ ರಸ್ತೆಯಲ್ಲಿ ಪ್ರಯಾಣಿಸುವುದರಿಂದ ಇತರ ವಾಹನ ಸವಾರರ ಗಮನ ಇವರತ್ತ ಸರಿದು ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಈ ರೀತಿಯ ಪ್ರಯಾಣವು ಇವರಿಗೆ ಮಾತ್ರವಲ್ಲದೇ ಇತರ ಪ್ರಯಾಣಿಕರಿಗೂ ಅಪಾಯಕಾರಿಯಾಗಿ ಪರಿಣಮಿಸುತ್ತವೆ.

ಇಂತಹ ಅಪಾಯಕಾರಿ ಪ್ರಯಾಣವು ಅಪಘಾತಕ್ಕೆ ದಾರಿ ಮಾಡಿಕೊಡುತ್ತದೆ. ಇವರ ಸಮೀಪ ಸಾಗುವವರಿಗೂ ಅಪಾಯವಾಗುವುದನ್ನು ತಳ್ಳಿ ಹಾಕುವಂತಿಲ್ಲ. ಈ ಕಾರಣಕ್ಕಾಗಿಯೇ ಪೊಲೀಸರು ಈ ರೀತಿ ಅಪಾಯಕಾರಿಯಾಗಿ ಪ್ರಯಾಣಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.
ಈ ರೀತಿಯ ಪ್ರಯಾಣಕ್ಕೆ ಭಾರೀ ಪ್ರಮಾಣದ ದಂಡ ವಿಧಿಸಬಹುದು. ಜೊತೆಗೆ ಜೈಲು ಶಿಕ್ಷೆಯನ್ನು ಸಹ ವಿಧಿಸಬಹುದು. ಈ ರೀತಿ ಕೃತ್ಯಗಳಲ್ಲಿ ತೊಡಗಲು ಬಯಸುವವರು ಖಾಸಗಿ ಜಾಗಗಳನ್ನು ಬಳಸುವುದು ಒಳ್ಳೆಯದು. ಬೈಕ್ ಸವಾರ ಮಾತ್ರವಲ್ಲದೇ ಹಿಂಬದಿಯ ಸವಾರ ಸಹ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಆದರೆ ಈ ವೀಡಿಯೊದಲ್ಲಿ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿರುವ ಯುವತಿ ಹೆಲ್ಮೆಟ್ ಧರಿಸಿರಲಿಲ್ಲ.

ವೀಡಿಯೊದಲ್ಲಿರುವ ಯುವಕ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಚಾಲನೆ ಮಾಡುತ್ತಿದ್ದ. ಆದರೆ ಯಾವ ಮಾದರಿ ಎಂದು ತಿಳಿದು ಬಂದಿಲ್ಲ. ಬಹುಶಃ ಈ ಬೈಕ್ ಕ್ಲಾಸಿಕ್ 350 ಬೈಕ್ ಆಗಿರುವ ಸಾಧ್ಯತೆಗಳಿವೆ. ಈ ಬೈಕ್ ಡ್ಯುಯಲ್ ಸೈಲೆನ್ಸರ್ ಸಿಸ್ಟಂ ಹೊಂದಿದೆ. ಬೈಕ್ ಮಾಲೀಕ ಹೆಚ್ಚುವರಿಯಾಗಿ ಈ ಆಕ್ಸೆಸರಿಸ್ ಅಳವಡಿಸಿರ ಬಹುದು.


Click it and Unblock the Notifications