ನದಿಯಲ್ಲಿ ಮುಳುಗುತ್ತಿದ್ದ ಸೈನಿಕನ ಕಾರನ್ನು ರಕ್ಷಿಸಿ, ಪ್ರಾಣ ಉಳಿಸಿ ಸಾರ್ಥಕತೆ ಮೆರೆದ ಸ್ಥಳೀಯರು
ಹಲವಾರು ಅಪಘಾತ ಪ್ರಕರಣಗಳಲ್ಲಿ ಸ್ಥಳೀಯರ ಸಹಾಯ ಸಿಗದೇ ಪ್ರಾಣಬಿಟ್ಟ ಹಲವಾರು ಘಟನೆಗಳು ಪ್ರತಿ ದಿನ ದೇಶದ ನಾನಾ ಕಡೆ ವರದಿಯಾಗುತ್ತಿರುವುದನ್ನು ನಾವು ನೊಡಿದ್ದೇವೆ. ಅಪಘಾತಕ್ಕೆ ಒಳಗಾದವರನ್ನು ಒಂದು ವೇಳೆ ಆಸ್ಪತ್ರೆಗೆ ಸೇರಿಸಿದರೆ ಪೊಲೀಸ್, ಕೋರ್ಟ್, ಕಛೇರಿ ಎಂದೆಲ್ಲಾ ಓಡಾಡಬೇಕಾಗುತ್ತದೋ ಏನೋ ಎಂಬ ಭಯದಿಂದಲೇ ಹಲವರು ಸಹಾಯಕ್ಕೆ ಮುಂದಾಗಲು ಹಿಂಜರಿಯುತ್ತಾರೆ.
ಆದರೆ ಇಲ್ಲೊಂದು ಕಡೆ ನದಿಯಲ್ಲಿ ಮುಳುಗುತ್ತಿದ್ದ ಸೈನಿಕ ಮತ್ತು ಆತನ ಕಾರನ್ನು ಸ್ಥಳೀಯರು ಒಂದಾಗಿ ಸೇರಿ ರಕ್ಷಿಸಿ ಮಾನವೀಯತೆ ಮೆರೆಯುವುದರ ಮೂಲಕ ಸೈನಿಕನ ಪ್ರಾಣವನ್ನು ರಕ್ಷಿಸಿ ಸಾರ್ಥಕತೆ ಮೆರೆದಿದ್ದಾರೆ. ಹೌದು, ಅಸ್ಸಾಂ ನ ನಿಮತಿ ಘಾಟ್ ಬಳಿ ಘಟನೆ ಸಂಭವಿಸಿದ್ದು, ಘಾಟ್ ಬಳಿ ಬ್ರಹ್ಮಪುತ್ರ ನದಿ ಹರಿಯುತ್ತಿದ್ದು ಈ ನದಿಗೆ ಸೈನಿಕನೊಬ್ಬನ ಹ್ಯುಂಡೈ ವೆನ್ಯೂ ಕಾರು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿತ್ತು.
ನದಿಗೆ ಬಿದ್ದ ಕಾರು ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಇದರ ಜೊತೆಗೆ ಅಲ್ಲೇ ಬ್ರಹ್ಮಪುತ್ರ ನದಿ ದಡದಲ್ಲಿದ್ದ ಜೀವ ರಕ್ಷಾ ದಳದ ಸಿಬ್ಬಂದಿಗಳು ಕೂಡ ಮುಳುಗುತ್ತಿದ್ದನ ಸೈನಿಕನ ರಕ್ಷಣೆಗೆ ಬಂದಿದ್ದಾರೆ. ಇನ್ನು ಕಾರು ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದುದನ್ನು ಗಮನಿಸಿದ ಇವರು ಕಾರನ್ನು ಹಗ್ಗದ ಸಹಾಯದಿಂದ ದಡಕ್ಕೆ ಎಳೆಯುವಲ್ಲಿ ಸಫಲರಾಗಿದ್ದಾರೆ. ಇನ್ನು ಈ ಸಂಧರ್ಭದಲ್ಲಿ ಅಲ್ಲೇ ಇದ್ದ ಟೆಂಪೋ ಡ್ರೈವರ್ ತನ್ನ ಪ್ರಾಣವನ್ನು ಲೆಕ್ಕಿಸದೇ ನದಿಗೆ ಹಾರಿ ಕಾರಿಗೆ ಹಗ್ಗ ಕಟ್ಟುವಲ್ಲಿ ಸಫಲರಾದರು.
ಟೆಂಪೋ ಡ್ರೈವರ್ ಜೊತೆಗೆ ಇನ್ನೊಬ್ಬ ಅಲ್ಲೇ ಇದ್ದ ಸ್ಥಳೀಯ ತನ್ನ ದೋಣಿಯ ಸಹಾಯದಿಂದ ನದಿಗೆ ಧುಮುಕಿ ಟೆಂಪೋ ಡ್ರೈವರ್‌ಗೆ ಸಹಾಯ ಮಾಡಿದ್ದಾರೆ. ಇವರಿಬ್ಬರು ನಡು ನೀರಿನಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವಾಗ ನದಿ ದಡದಲ್ಲಿ ಒಂದು ಗುಂಪು ಇವರಿಗೆ ಹಗ್ಗವನ್ನು ಕಳಿಸುತ್ತಾ, ಹಲವಾರು ಹಗ್ಗಗಳ ಸಹಾಯದಿಂದ ಕಾರನ್ನು ನದಿ ದಡಕ್ಕೆ ಎಳೆದು ಸೇರಿಸುವಲ್ಲಿ ಸಫಲರಾಗಿದ್ದಾರೆ. ಒಟ್ಟಾಗಿ ಎಲ್ಲರೂ ಸೇರಿ ನದಿಪಾಲಾಗುತ್ತಿದ್ದ ಸೈನಿಕ ಮತ್ತು ಆತನ ಕಾರನ್ನು ಯಶಸ್ವಿಯಾಗಿ ಉಳಿಸಿದ್ದಾರೆ.

ಘಟನೆಯ ಸಂಪೂರ್ಣ ದೃಶ್ಯವನ್ನು ಘಟನೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಎಲ್ಲಾ ದೃಶ್ಯಗಳನ್ನು ವಿವರವಾಗಿ ನೋಡಬಹುದಾಗಿದೆ. ಬೋಟ್ ಮತ್ತು ದಡದಲ್ಲಿದ್ದ ಜನರು ಯಾವ ರೀತಿಯಾಗಿ ಸೈನಿಕ ಮತ್ತು ಆತನ ಹ್ಯುಂಡೈ ವೆನ್ಯೂ ಕಾರನ್ನು ರಕ್ಷಿಸಿದ್ದಾರೆ ಎಂಬುದು ತಿಳಿಯುತ್ತದೆ. ಒಂದು ವೇಳೆ ನಿರ್ಜನ ಪ್ರದೇಶದಲ್ಲಿ ಸೈನಿಕನ ನಿಯಂತ್ರಣ ತಪ್ಪಿ ಕಾರು ನೀರಿಗೆ ಬಿದ್ದಿದ್ದರೆ ನಿಜಕ್ಕೂ ಕಾರು ಮತ್ತು ಸೈನಿಕ ಉಳಿಯುವುದ ಕಷ್ಟವಾಗುತ್ತಿತ್ತು.
ಅಪಘಾತದ ಸಂಧರ್ಭದಲ್ಲಿ ದಡದಲ್ಲಿ ಜನರ ಗುಂಪು ಮತ್ತು ಬೋಟ್‌ನಲ್ಲಿ ಜನರಿದ್ದದ್ದು ಒಳ್ಳೆಯದಾಯ್ತು. ಸಂಭವಿಸಬೇಕಾಗಿದ್ದ ಒಂದು ದೊಡ್ಡ ದುರಂತ ತಪ್ಪಿದೆ. ಅಲ್ಲಿದ್ದ ಜನರು ಮತ್ತು ಬೋಟ್‌ನಲ್ಲಿದ್ದವರಿಗೆ ಅಪಘಾತಕ್ಕೆ ಒಳಗಾದ ಸೈನಿಕ ಎಷ್ಟು ಕೃತಜ್ಞತೆ ಹೇಳಿದರೂ ಕಮ್ಮಿಯೇ ಸರಿ. ಎಲ್ಲದಕ್ಕಿಂತಲೂ ಹೆಚ್ಚಾಗಿ ಆ ಸಂಧರ್ಭದಲ್ಲಿ ಹಿಂದೆ ಮುಂದೆ ಯೋಚಿಸದೆ ನೀರಿಗೆ ಧುಮುಕಿ ಸಹಾಯ ಮಾಡಿದ ಟೆಂಪೋ ಡ್ರೈವರ್ ಮತ್ತು ಬೋಟ್‌ನಲ್ಲಿದ್ದ ವ್ಯಕ್ತಿಯ ಧೈರ್ಯ ಮೆಚ್ಚುವಂತದ್ದೇ ಸರಿ.
ಈ ಹಿಂದೆಯೂ ಸಹ ಬ್ರಹ್ಮಪುತ್ರ ನದಿಯು ಈ ರೀತಿಯ ಅಪಘಾಗಳ ಕೇಂದ್ರವಾಗಿತ್ತು. ಚಾಲಕರ ನಿಯಂತ್ರಣ ತಪ್ಪಿದ ಹಲವಾರು ಕಾರುಗಳು ನದಿ ಪಾಲಾಗಿದ್ದವು. ಈ ರೀತಿಯಾಗಿ ಹಲವಾರು ಪ್ರಾಣಪಕ್ಷಿಗಳು ಸಹ ಇಲ್ಲಿ ಹಾರಿ ಹೋಗಿದೆ. ಹಾಗಾಗಿ ಈ ಸ್ಥಳದಲ್ಲಿ ವಾಹನ ಚಲಾಯಿಸುವಾಗ ಅಪಘಾತವಾಗದ ರೀತಿಯಲ್ಲಿ ಎಚ್ಚರಿಕೆಯಿಂದ ಚಲಾಯಿಸಬೇಕಿದೆ. ಈ ರೀತಿಯ ಘಟನೆಗಳು ದೇಶದೆಲ್ಲೆಡೆ ನಡೆಯುವುದನ್ನು ನಾವು ಕಂಡಿದ್ದೇವೆ. ಹೆಚ್ಚು ತಿರುವುಗಳಿರುವ ರಸ್ತೆಗಳಲ್ಲಿ ಈ ರೀತಿಯ ಅಪಘಾತಗಳು ಸಹಜ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಅಪಘಾತವಾದಾಗ ಯಾರ ಅನುಮತಿಗೂ ಕಾದು ಕುಳಿತುಕೊಳ್ಳದೇ ಸಹಾಯಕ್ಕೆ ಧಾವಿಸುವುದು ನಿಜವಾದ ಮಾನವೀಯ ಗುಣ. ಈ ರೀತಿಯ ಸಹಾಯದಿಂದಾಗಿ ಅಪಘಾತಕ್ಕೆ ಒಳಗಾಗಿ ಜೀವನ್ಮರಣ ಹೋರಾಟದಲ್ಲಿರುವ ಹಲವು ಪ್ರಾಣಗಳು ಉಳಿಯುತ್ತವೆ. ಇದರಿಂದ ಎಷ್ಟೋ ಕುಟುಂಬಗಳು ತಮ್ಮ ಪ್ರೀತಿ ಪಾತ್ರರನ್ನು ಮರಳಿ ಪಡೆಯುತ್ತದೆ ಎಂಬ ವಿಷಯವನ್ನು ನಾವು ಮರೆಯಬಾರದು. ಅಪಘಾತಗಳಲ್ಲಿ ಸಹಾಯ ಮಾಡುವ ಕುರಿತಾಗಿ ಆಯಾ ಸರ್ಕಾರಗಳು ಜನರಿಗೆ ಅಗತ್ಯ ರೀತಿಯಲ್ಲಿ ಅರಿವು ಮೂಡಿಸಬೇಕು.


Click it and Unblock the Notifications