ಕರೋನಾ ವೈರಸ್ ಎಫೆಕ್ಟ್: ಹೊಸ ಕಾರು ಖರೀದಿ ಯೋಜನೆ ಕೈಬಿಟ್ಟ ರಾಜ್ಯಪಾಲರು
ಕರೋನಾ ವೈರಸ್ ಹಲವು ದೇಶಗಳ ಆರ್ಥಿಕತೆಗೆ ದೊಡ್ಡ ಹೊಡೆತವನ್ನು ನೀಡಿದೆ. ಭಾರತವು ಸಹ ಇದರಿಂದ ಹೊರತಾಗಿಲ್ಲ. ಭಾರತದ ಬಹುತೇಕ ರಾಜ್ಯ ಸರ್ಕಾರಗಳು ಖರ್ಚು ಕಡಿತಗೊಳಿಸಲು ಆರಂಭಿಸಿವೆ. ಇದರ ನಡುವೆ ರಾಜಭವನದಲ್ಲಿನ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯರಿ ಹೊಸ ಕಾರು ಖರೀದಿಸುವುದನ್ನು ರದ್ದುಪಡಿಸಿದ್ದಾರೆ.

ಜೊತೆಗೆ ರಾಜ್ಯಪಾಲರು ರಾಜಭವನದಲ್ಲಿನ ಹೊಸ ನಿರ್ಮಾಣ ಹಾಗೂ ದುರಸ್ತಿ ಕಾರ್ಯಗಳನ್ನು ನಿಲ್ಲಿಸಿದ್ದಾರೆ. ರಾಜಭವನದಲ್ಲಿ ಯಾವುದೇ ಹೊಸ ನೇಮಕಾತಿ ನಡೆಸದಂತೆ ಹಾಗೂ ವಿವಿಐಪಿಗಳಿಗೆ ನೀಡುವ ಉಡುಗೊರೆ ಸಂಪ್ರದಾಯವನ್ನು ಕೊನೆಗೊಳಿಸುವಂತೆ ರಾಜ್ಯಪಾಲರು ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಅಂದ ಹಾಗೆ ಮಹಾರಾಷ್ಟ್ರದ ರಾಜ್ಯಪಾಲರು ಸದ್ಯಕ್ಕೆ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಇ 350 ಸಿಡಿಐ ಅನ್ನು ಅಧಿಕೃತ ಕಾರನ್ನಾಗಿ ಬಳಸುತ್ತಿದ್ದಾರೆ.

ಈ ಕಾರ್ ಅನ್ನು 2014ರಲ್ಲಿ ರಿಜಿಸ್ಟರ್ ಮಾಡಲಾಗಿದೆ. ಸಾಮಾನ್ಯವಾಗಿ ರಾಜಕಾರಣಿಗಳು ಬಳಸುವ ವಾಹನಗಳು ಶಸ್ತ್ರಸಜ್ಜಿತವಾಗಿರುತ್ತವೆ. ಆದರೆ ಈ ಕಾರನ್ನು ರಾಜಭವನಕ್ಕೆ ಸೇರ್ಪಡೆಗೊಳಿಸಿದ ನಂತರ ಶಸ್ತ್ರಸಜ್ಜಿತಗೊಳಿಸಲಾಯಿತು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಕಾರನ್ನು ಭಗತ್ ಸಿಂಗ್ ಕೊಶ್ಯರಿರವರಿಗಿಂತ ಮುಂಚೆ ಇದ್ದ ರಾಜ್ಯಪಾಲರು ಸಹ ಬಳಸುತ್ತಿದ್ದರು. 2019ರ ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ಬಂದ ಭಗತ್ ಸಿಂಗ್ ಕೊಶ್ಯರಿರವರು ಮುಂದಿನ ಸೂಚನೆ ಬರುವವರೆಗೂ ಈ ಕಾರನ್ನೇ ಬಳಸಲಿದ್ದಾರೆ.

ರಾಜ್ಯಪಾಲರು ಖರೀದಿಸುವ ಮುಂದಿನ ಕಾರು ಯಾವುದು ಎಂದು ತಿಳಿದು ಬಂದಿಲ್ಲ. ನಿಯಮಗಳ ಪ್ರಕಾರ, ಮಹಾರಾಷ್ಟ್ರದ ಮುಖ್ಯಮಂತ್ರಿ, ರಾಜ್ಯಪಾಲರು, ಉಪಮುಖ್ಯಮಂತ್ರಿ, ಮುಖ್ಯ ನ್ಯಾಯಮೂರ್ತಿ ಹಾಗೂ ಲೋಕಾಯುಕ್ತರು ತಮಗೆ ಇಷ್ಟ ಬಂದ ಕಾರ್ ಅನ್ನು ಖರೀದಿಸಬಹುದು. ಅವರು ಖರೀದಿಸುವ ಕಾರುಗಳಿಗೆ ಹಣಕಾಸಿನ ಯಾವುದೇ ಮಿತಿಯಿಲ್ಲ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈಗಾಗಲೇ ಉತ್ತರ ಪ್ರದೇಶ ಸರ್ಕಾರವು 2020-21ರ ಆರ್ಥಿಕ ವರ್ಷದಲ್ಲಿ ಯಾವುದೇ ಹೊಸ ಅಧಿಕೃತ ವಾಹನಗಳನ್ನು ಖರೀದಿಸದಂತೆ ಆದೇಶ ಹೊರಡಿಸಿದೆ. ಇದರ ಜೊತೆಗೆ ಸರ್ಕಾರದ ಖರ್ಚುಗಳನ್ನು ಕಡಿತಗೊಳಿಸಲು ಪ್ರಯಾಣವನ್ನು ಕಡಿಮೆ ಮಾಡಲು ಹಾಗೂ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಗಳನ್ನು ನಡೆಸುವಂತೆ ಸಚಿವರಿಗೆ ಸೂಚಿಸಲಾಗಿದೆ.

ವಿಮಾನ ಪ್ರಯಾಣ ಅವಶ್ಯಕವಾಗಿರುವ ಸಂದರ್ಭದಲ್ಲಿ ಬಿಜಿನೆಸ್ ಕ್ಲಾಸ್ ಬದಲು, ಎಕಾನಾಮಿಕ್ ಕ್ಲಾಸ್‌ನಲ್ಲಿ ಪ್ರಯಾಣಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಮ್ಮೇಳನ, ಸೆಮಿನಾರ್ ಹಾಗೂ ಸಭೆಗಳಿಗೆ ಐಷಾರಾಮಿ ಹೋಟೆಲ್‌ಗಳನ್ನು ಬಳಸುವ ಬದಲು ಸರ್ಕಾರಿ ಕಟ್ಟಡಗಳನ್ನು ಬಳಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.


Click it and Unblock the Notifications