Mahindra Bolero: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ತಪಾಸಣೆಗಾಗಿ ಮಹೀಂದ್ರಾ ಬೊಲೆರೊ ಬಳಕೆ
ಭಾರತೀಯ ರೈಲ್ವೆ ರಂಗ ಭಾರೀ ಬೆಳವಣಿಗೆಯನ್ನು ಸಾಧಿಸುತ್ತಿದೆ. ಪ್ರತಿವರ್ಷವೂ ದೇಶದ ದೂರದ ಪ್ರದೇಶಗಳನ್ನು ಸಂಪರ್ಕಿಸಲು ರೈಲ್ವೆಯನ್ನು ವಿಸ್ತರಿಸುತ್ತಿದ್ದಾರೆ. ಭಾರತೀಯ ರೈಲ್ವೆ ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಯ ಮೇಲೆ ನಿರ್ಮಾಣಗೊಂಡ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ.
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ನಿರ್ಮಾಣವು ಕೊನೆಯ ಹಂತದಲ್ಲಿದ್ದು, ಸೇತುವೆಯನ್ನು ಕಾರ್ಯಾಚರಣೆಗೆ ತೆರೆಯುವ ಮೊದಲು, ಭಾರತೀಯ ರೈಲ್ವೆ ಸೇತುವೆಯನ್ನು ಪರಿಶೀಲಿಸುತ್ತಿದೆ. ಹೊಸ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ, ಅಲ್ಲಿ ಸಣ್ಣ ಮಾರ್ಪಾಡುಗಳೊಂದಿಗೆ ಮಹೀಂದ್ರಾ ಬೊಲೆರೊವನ್ನು ತಪಾಸಣೆಗಾಗಿ ರೈಲು ವಾಹನವಾಗಿ ಬಳಸುವುದನ್ನು ನಾವು ನೋಡಬಹುದಾಗಿದೆ. ಪತ್ರಕರ್ತ ಮತ್ತು ಲೇಖಕ ರಾಜೇಂದ್ರ ಬಿ ಅಕ್ಲೇಕರ್ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯು ನದಿಯ ತಳದಿಂದ 359 ಮೀಟರ್ ಎತ್ತರದಲ್ಲಿದೆ ಮತ್ತು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ ಎತ್ತರವಾಗಿದೆ. ಇದು ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದೆ. ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ, ಒಳಗೆ ಉದ್ಯೋಗಿಗಳೊಂದಿಗೆ ಮಹೀಂದ್ರಾ ಬೊಲೆರೊವನ್ನು ನಾವು ನೋಡಬಹುದು. ತಪಾಸಣಾ ಟ್ರಾಲಿಯಲ್ಲಿ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಕೂಡ ಕುಳಿತಿದ್ದಾರೆ.
ಬೊಲೆರೊ ರೈಲು ಹಳಿಗಳನ್ನು ಪರಿಶೀಲಿಸುತ್ತಿದೆ ಮತ್ತು ಕೆಲಸಗಳನ್ನು ಸುಲಭಗೊಳಿಸಲು ಅದನ್ನು ತಪಾಸಣೆ ಟ್ರಾಲಿಯಾಗಿ ಪರಿವರ್ತಿಸಲಾಗಿದೆ. ಮೂಲ ಚಕ್ರಗಳು ಮತ್ತು ಟೈರ್‌ಗಳನ್ನು ಹೊರತುಪಡಿಸಿ, ಬೊಲೆರೊ ಮುಂಭಾಗ ಮತ್ತು ಹಿಂಭಾಗದಲ್ಲಿ ಟ್ರಾಲಿ ಅಥವಾ ಲೊಕೊದಂತಹ ಹೆಚ್ಚುವರಿ ಲೋಹದ ಚಕ್ರಗಳನ್ನು ಅಳವಡಿಸಲಾಗಿದೆ. ಈ ಲೋಹದ ಚಕ್ರಗಳೊಂದಿಗೆ ಬೊಲೆರೊ ಟ್ರ್ಯಾಕ್ ಮೂಲಕ ಸಾಗುತ್ತದೆ. ಸಾಮಾನ್ಯ ಟೈರ್ಗಳು ಹೆಚ್ಚುವರಿ ಬೆಂಬಲ ಮತ್ತು ಶಕ್ತಿಯನ್ನು ಒದಗಿಸುತ್ತವೆ.

ಮಹೀಂದ್ರಾ ಬೊಲೆರೊ ಒಂದು ರೇರ್ ವ್ಹೀಲ್ ಡ್ರೈವ್ ವಾಹನ ಆಗಿದ್ದು, ಇದರ ಹಿಂಬದಿಯ ಚಕ್ರವು ಕಾರನ್ನು ಮುಂದಕ್ಕೆ ತಳ್ಳುತ್ತದೆ ಆದರೆ ಲೋಹದ ಚಕ್ರಗಳು ಟ್ರ್ಯಾಕ್‌ನಿಂದ ಹೊರಹೋಗದಂತೆ ತಡೆಯುತ್ತದೆ. ಸಾಮಾನ್ಯವಾಗಿ ಇಂತಹ ತಪಾಸಣೆಗೆ ರೈಲ್ವೇ ಮೋಟಾರೀಕೃತ ಟ್ರಾಲಿಗಳನ್ನು ಬಳಸುತ್ತದೆ. ಈ ಟ್ರಾಲಿಗಳು ಹಿಂಭಾಗದಲ್ಲಿ ಸಣ್ಣ ಎಂಜಿನ್ ಹೊಂದಿದ್ದು, ನಾಲ್ಕು ಜನರು ಕುಳಿತುಕೊಳ್ಳಬಹುದು. ಈ ಸಂದರ್ಭದಲ್ಲಿ, ಮಹೀಂದ್ರಾ ಬೊಲೆರೊದಲ್ಲಿ 7-8 ಜನರು ಕುಳಿತುಕೊಳ್ಳಬಹುದು.
ರೈಲ್ವೆ ಟ್ರ್ಯಾಕ್‌ನಲ್ಲಿ ಸಾಮಾನ್ಯ ಕಾರನ್ನು ತಪಾಸಣೆ ವಾಹನವಾಗಿ ಬಳಸುವುದನ್ನು ನಾವು ಬಹುಶಃ ಮೊದಲ ಬಾರಿಗೆ ನೋಡಿದ್ದೇವೆ. ನಿರ್ಮಾಣ ಹಂತದಲ್ಲಿ ರೈಲು ಹಳಿಗಳ ಮೇಲೆ ಅಗೆಯುವ ಯಂತ್ರಗಳು ಮತ್ತು ಟ್ರಕ್‌ಗಳನ್ನು ಬಳಸುವುದನ್ನು ನಾವು ನೋಡಿದ್ದೇವೆ. ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಯು ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಇದನ್ನು ಹಲವು ವಿಧದಲ್ಲಿ ಪರೀಕ್ಷಿಸಲಾಗಿದೆ. ಸೇತುವೆಯು ಹೆಚ್ಚಿನ ವೇಗದ ಗಾಳಿ, ಭೂಕಂಪಗಳು, ವಿಪರೀತ ತಾಪಮಾನ ಪ್ರಭಾವಗಳನ್ನು ತಡೆದುಕೊಳ್ಳಬಲ್ಲದು.
ಸೇತುವೆಯ ಮುಖ್ಯ ಕಮಾನಿನ ನಿರ್ಮಾಣವು 2021ರ ಏಪ್ರಿಲ್ ತಿಂಗಳಿನಲ್ಲಿ ಪೂರ್ಣಗೊಂಡಿತು. ಈ ಚೆನಾಬ್ ಸೇತುವೆಯು 120 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಯೋಜನೆಗೆ ಸರ್ಕಾರ ಸುಮಾರು 1,400 ಕೋಟಿ ಹೂಡಿಕೆ ಮಾಡಿದೆ. ಭಾರತದಲ್ಲಿ ಹೆಚ್ಚಿನ ಜನರು ಇನ್ನೂ ಪ್ರಯಾಣಿಸಲು ರೈಲ್ವೆಯನ್ನು ಅವಲಂಬಿಸಿದೆ ಏಕೆಂದರೆ ಇದು ವಿಮಾನಕ್ಕಿಂತ ಅಗ್ಗವಾಗಿದೆ. ಚೆನಾಬ್ ನದಿಯ ಮೇಲೆ ನಿರ್ಮಿಸಲಾದ ಸೇತುವೆಯು ಕತ್ರಾದಿಂದ ಬನಿಹಾಲ್ ವರೆಗಿನ 111 ಕಿಮೀ ವ್ಯಾಪ್ತಿಯವರೆಗೆ ಸಂಪರ್ಕವನ್ನು ಕಲ್ಪಿಸುತ್ತದೆ.
ಚೆನಾಬ್ ನದಿಯ ಮೇಲೆ ನಿರ್ಮಿಸಲಾದ ರೈಲ್ವೆ ಸೇತುವೆಯು 1.3 ಕಿಮೀ ಉದ್ದವಾಗಿದೆ ಮತ್ತು 266 ಕಿಮೀ ವೇಗದ ಗಾಳಿಯ ವೇಗವನ್ನು ತಡೆದುಕೊಳ್ಳುತ್ತದೆ. ಇದು ಬ್ಲಾಸ್ಟ್ ಪ್ರೂಫ್ ಕೂಡ ಆಗಿದೆ. ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ (ಯುಎಸ್‌ಬಿಆರ್‌ಎಲ್) ರೈಲು ಸಂಪರ್ಕವು ಸಂಪೂರ್ಣವಾಗಿ ಕಾರ್ಯಾರಂಭಿಸಿದ ನಂತರ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರದಲ್ಲೇ ಜಮ್ಮು ಮತ್ತು ಶ್ರೀನಗರವನ್ನು ಸಂಪರ್ಕಿಸುತ್ತದೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ.


Click it and Unblock the Notifications