ಶಿರಡಿ ಸಾಯಿಬಾಬಾ ಚರಣಕ್ಕೆ ಮಹೀಂದ್ರಾ XUV700 ಕಾರು ಅರ್ಪಣೆ: ಸಾಂಪ್ರದಾಯ ಮುಂದುವರಿಕೆ
ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಮಹೀಂದ್ರಾ (Mahindra) ಖ್ಯಾತಿಗಳಿಸಿದೆ. ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ಹೊಸ ಮಾದರಿಯನ್ನು ಪರಿಚಯಿಸಿದಾಗ ಅದರ ಮೊದಲ ತಯಾರಿಕ ವಾಹನವನ್ನು ಶಿರಡಿಯ ಸಾಯಿಬಾಬಾ ಚರಣಕ್ಕೆ ಅರ್ಪಣೆ ಮಾಡುವ ಸಂಪ್ರದಾಯವನ್ನು ರೂಡಿಸಿಕೊಂಡಿದೆ. ಅದರಂತೆ ದೇಗುಲಕ್ಕೆ XUV700 ಉಡುಗೊರೆಯಾಗಿ ನೀಡಿದೆ.
ಶಿರಡಿ ಸಾಯಿಬಾಬಾ ಸಂಸ್ಥಾನವು 'ಮಹೀಂದ್ರಾ XUV700 AX7L' ಎಸ್‌ಯುವಿಯನ್ನು ದೇಣಿಗೆಯಾಗಿ ಪಡೆಯುವ ಸಮಾರಂಭದ ವಿಡಿಯೋವನ್ನು ತನ್ನ ಸಾಯಿ ಲೀಲಾ ಟೈಮ್ಸ್ ಯೂಟ್ಯೂಬ್ ವಾಹಿನಿಯಲ್ಲಿ ಹಂಚಿಕೊಂಡಿದೆ. ಮಹೀಂದ್ರಾ ಆಟೋಮೋಟಿವ್ ವಿಭಾಗದ ಸಿಇಒ ವೀಜಯ್ ನಕ್ರಾ ಅವರು, ಸಾಯಿಬಾಬಾ ಸಂಸ್ಥಾನದ ಆಡಳಿತಾಧಿಕಾರಿ ಡಾ.ಆಕಾಶ್ ಕಿಸ್ವೆ ಅವರಿಗೆ ಕಾರಿನ ಕೀಲಿಯನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಿದ್ದಾರೆ.

ಶಿರಡಿಯ ಸಾಯಿಬಾಬಾ ದೇವಸ್ಥಾನದ ಮುಂಭಾಗದಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ಬಗ್ಗೆ ಮಾತನಾಡಿರುವ ದೇಗುಲದ ಆಡಳಿತಾಧಿಕಾರಿ ಡಾ.ಆಕಾಶ್ ಕಿಸ್ವೆ, 'ಮಹೀಂದ್ರಾ ದೇಶದಲ್ಲಿ ಹೊಸ ಕಾರನ್ನು ಬಿಡುಗಡೆಗೊಳಿಸಿದಾಗ, ಅದರ ಮೊದಲ ಮಾದರಿಯನ್ನು ಸಾಯಿಬಾಬಾ ಸಂಸ್ಥಾನಕ್ಕೆ ದೇಣಿಗೆಯಾಗಿ ನೀಡುತ್ತದೆ. ಈ ಮೊದಲು ಬೊಲೆರೊ, ಸ್ಕಾರ್ಪಿಯೋ, ಕ್ಸೈಲೋ, ಲೋಗನ್, ಮ್ಯಾಕ್ಸಿಮೊ, ಯುವರಾಜ್ ಟ್ರಾಕ್ಟರ್, XUV500, XUV300, ಮರಾಜೋ ಸೇರಿದಂತೆ 14 ವಾಹನಗಳನ್ನು ಉಡುಗೊರೆಯಾಗಿ ನೀಡಿದೆ' ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮಹೀಂದ್ರಾ, ಇದೇ ರೀತಿಯಲ್ಲಿ ಕೇರಳದ ಗುರುವಾಯೂರು ದೇಗುಲಕ್ಕೆ ಹೊಚ್ಚ ಹೊಸ XUV700 ಎಸ್‌ಯುವಿಯನ್ನು ದೇಣಿಗೆ ನೀಡಿತ್ತು. ಕಾರಿನ ಕೀಲಿಯನ್ನು ಗುರುವಾಯೂರು ದೇವಸ್ವಂ ಮಂಡಳಿ ಅಧ್ಯಕ್ಷ ಡಾ.ವಿ.ಕೆ.ವಿಜಯನ್ ಅವರಿಗೆ ಮಹೀಂದ್ರಾದ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥರಾದ ಆರ್.ವೇಲುಸಾಮಿ ಅವರು, ಹಸ್ತಾಂತರಿಸಿದ್ದರು. 2021ರಲ್ಲೂ ಗುರುವಾಯೂರು ದೇವಸ್ಥಾನಕ್ಕೆ ಮಹೀಂದ್ರಾ, ಥಾರ್ ಎಸ್‌ಯುವಿಯನ್ನು ಉಡುಗೊರೆ ನೀಡಿತ್ತು.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ XUV700 ರೂಪಾಂತರಗಳಿಗೆ ಅನುಗುಣವಾಗಿ ರೂ.14.01 ಲಕ್ಷದಿಂದ ರೂ.26.18 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಇದು ಎರಡು ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 200 hp ಗರಿಷ್ಠ ಪವರ್, 380 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಇನ್ನೊಂದು, 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್, 155 hp ಪವರ್, 360 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇವೆರೆಡು, 6 ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತವೆ. ಪ್ರಮುಖವಾಗಿ, ಡೀಸೆಲ್ ಚಾಲಿತ ರೂಪಾಂತರಗಳು ಜಿಪ್, ಜ್ಯಾಪ್, ಜೂಮ್ ಹಾಗೂ ಕಸ್ಟಮ್ ಎಂಬ ಡ್ರೈವ್ ಮೋಡ್ ಗಳನ್ನು ಒಳಗೊಂಡಿವೆ.
ಮಹೀಂದ್ರಾ XUV700 ದೇಶೀಯ ಯುವ ಖರೀದಿದಾರರನ್ನು ತನ್ನತ್ತ ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದ್ದು, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅತ್ಯಾಧುನಿಕ ಸನ್ ರೂಫ್, ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, 6 ವೇ ಪವರ್ಡ್ ಡ್ರೈವರ್ ಸೀಟ್, 12 ಸ್ವೀಕರ್ ಹಾಗೂ ಅಲೆಕ್ಸಾ ಕನೆಕ್ಟಿವಿಟಿ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ.
ಮಹೀಂದ್ರಾ XUV700 ಕಾರು, ಸುರಕ್ಷತೆಯ ದೃಷ್ಟಿಯಿಂದ ಬೆಲೆಗೆ ತಕ್ಕಂತೆ ಅತ್ಯಾಧುನಿಕವಾಗಿದ್ದು, ಗ್ಲೋಬಲ್ NCAP ಪರೀಕ್ಷೆಯಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. 7 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ISOFIX ಆಂಕರ್ಸ್, TPMS ( ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಹೊಂದಿದೆ.
ಇನ್ನು, 2021ರ ಆಗಸ್ಟ್ ತಿಂಗಳಲ್ಲಿ ಮಹೀಂದ್ರಾ ಕಂಪನಿ 'XUV700' ಎಸ್‌ಯುವಿಯನ್ನು ಅದ್ದೂರಿಯಾಗಿ ದೇಶದಲ್ಲಿ ಬಿಡುಗಡೆಗೊಳಿಸಿತ್ತು. ಅಂದಿನಿಂದಲೇ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಇತ್ತೀಚೆಗೆ ಕೇವಲ 20 ತಿಂಗಳಲ್ಲಿ ಒಂದು ಲಕ್ಷ ಕಾರುಗಳನ್ನು ವಿತರಣೆ ಮಾಡಿ, ಕಂಪನಿಯು ಐತಿಹಾಸಿಕ ದಾಖಲೆ ಮಾಡಿತು. ಈ ಕಾರಿಗೆ ಎಂಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಜರ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಹಬ್ಬ ಸೀಸನ್ ವೇಳೆಗೆ ಕಂಪನಿಯು XUV700 ಹೊಸ ರೂಪಾಂತರ ಪರಿಚಯಿಸಬಹುದು.


Click it and Unblock the Notifications