Mahindra: 15 ಅಡಿ ಉರುಳಿದರೂ ಎಲ್ಲರು ಸೇಫ್: ಕಾರಿನ ಗುಣಮಟ್ಟಕ್ಕೆ ಸಲಾಂ ಎಂದ ಪ್ರಯಾಣಿಕರು!
ಮಹೀಂದ್ರಾ ಸ್ಕಾರ್ಪಿಯೋ - ಎನ್ (Mahindra Scorpio-N) ಎಸ್‌ಯುವಿಯೊಂದು ರಸ್ತೆಯಿಂದ 15 ಅಡಿ ಕೆಳಗೆ ಉರುಳಿದ್ದು, ಕಾರಿನ ದೃಢವಾದ ನಿರ್ಮಾಣ ಗುಣಮಟ್ಟದಿಂದಾಗಿ ಕಾರಿನಲ್ಲಿದ್ದ 7 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ. ಈ ಮಹೀಂದ್ರಾ ಸ್ಕಾರ್ಪಿಯೋ - ಎನ್ ಅಪಘಾತದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೂಲಗಳ ಪ್ರಕಾರ, ಒಟ್ಟು 7 ಮಂದಿ ಪ್ರಯಾಣಿಕರಿದ್ದ ಸ್ಕಾರ್ಪಿಯೋ - ಎನ್ ಎಸ್‌ಯುವಿ ಉತ್ತರ ಪ್ರದೇಶದ ಗೋರಕ್ ಪುರದಿಂದ ಇಲ್ಲಿನ ಬಸ್ತಿಗೆ ಪ್ರಯಾಣಿಸುತ್ತಿತ್ತು. ಇವರೆಲ್ಲರು ಸಂಬಂಧಿಕರ ಅಂತ್ಯಕ್ರಿಯೆಯೊಂದಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದರು ಎನ್ನಲಾಗಿದೆ. ಅಂದು ರಾತ್ರಿ 10:30ರ ಸುಮಾರಿಗ ಎಸ್‌ಯುವಿ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಸುಮಾರು 10 ರಿಂದ 15 ಅಡಿ ಆಳಕ್ಕೆ ಉರುಳಿದೆ. ಅದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರು ಹಾಗೂ ಸ್ಥಳೀಯರು ಸಹಾಯಕ್ಕೆ ಬಂದು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಕೂಡಲೇ ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ. ಅದೃಷ್ಟವಶಾತ್, ಎಲ್ಲಾ ಏಳು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಏಳು ಪ್ರಯಾಣಿಕರಲ್ಲಿ, ಒಬ್ಬರಿಗೆ ಮಾತ್ರ ಮೂಳೆ ಮುರಿದಿದೆ. ಅವರಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದ ಮೂವರು ಸುರಕ್ಷಿತವಾಗಿದ್ದಾರೆ. ವೀಡಿಯೊ ಮತ್ತು ಚಿತ್ರಗಳಲ್ಲಿ ನೋಡಿದಂತೆ, ಮಹೀಂದ್ರಾ ಸ್ಕಾರ್ಪಿಯೋ - ಎನ್ ಸಂಪೂರ್ಣವಾಗಿ ಉರುಳಿದ್ದರೂ ರೂಫ್ ಮತ್ತು ಪಿಲ್ಲರ್‌ಗಳು ದೃಢವಾಗಿ ನಿಂತಿರುವುದನ್ನು ನಾವು ಗಮನಿಸಬಹುದು. ಇಡೀ ಕಾರು ಅದರ ನಿರ್ಮಾಣ ಗುಣಮಟ್ಟದಿಂದಾಗಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿರಿಸುವಲ್ಲಿ ಯಶಸ್ವಿಯಾಗಿದೆ.
ಅಪಘಾತಕ್ಕೆ ಕಾರಣ?: ಮೂಲಗಳ ಪ್ರಕಾರ ರಾತ್ರಿ ರಸ್ತೆಯಲ್ಲಿ ಕಡಿಮೆ ಗೋಚರತೆಯಿಂದಾಗಿ ಅಪಘಾತ ಸಂಭವಿಸಿದೆ. ಡ್ರೈವರ್‌ಗೆ ಕೂಡ ನಿಖರವಾಗಿ ಏನು ತಪ್ಪಾಗಿದೆ ಎಂಬುದರ ಬಗ್ಗೆ ಖಚಿತವಾಗಿ ಹೇಳಿಲ್ಲ. ಹಾಗೆಂದು ಮಹೀಂದ್ರಾ ಸ್ಕಾರ್ಪಿಯೋ - ಎನ್ ಕಾರಿನಿಂದ ಯಾಂತ್ರಿಕ ದೋಷವಾಗಿದೆ ಎಂದು ಕೂಡ ಆತ ಹೇಳಿಕೊಂಡಿಲ್ಲ.

ಚಾಲಕ ಇದು ತಿಳಿದಿರಬೇಕು: ಎಸ್‌ಯುವಿಗಳು ರೋಲ್ ಓವರ್ (ಉರುಳುವುದು) ಆಗುವುದು ಭಾರತೀಯ ರಸ್ತೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಪಘಾತವಾಗಿದೆ. ಈ ಹಿಂದೆಯೂ ಭಾರತದಲ್ಲಿ ಇಂತಹ ಅಪಘಾತಗಳು ನಡೆದಿರುವ ಹಲವು ಉದಾಹರಣೆಗಳಿವೆ. ಆದ್ದರಿಂದ ಚಾಲಕ, ವಾಹನವನ್ನು ರೋಲ್ ಓವರ್ ಪರಿಸ್ಥಿತಿಯಲ್ಲಿ ಅಪಘಾತವನ್ನು ಹೇಗೆ ತಪ್ಪಿಸಬೇಕು ಎಂದು ತಿಳಿದಿರಬೇಕು. ಮೊದಲನೆಯದಾಗಿ, ಯಾವುದೇ ಕಾರಾಗಿರಲಿ ರೋಲ್ ಓವರ್ ಅಪಘಾತಗಳನ್ನು ತಡೆಗಟ್ಟಲು ಎಚ್ಚರಿಕೆಯ ಚಾಲನಾ ಅಭ್ಯಾಸಗಳಿಗೆ ಆದ್ಯತೆ ನೀಡಬೇಕು. ಗೊಂದಲವಿಲ್ಲದೆ ಗಮನವನ್ನು ರಸ್ತೆಯ ಮೇಲೆ ಕೇಂದ್ರೀಕರಿಸಬೇಕು, ಹಾಗೆಯೇ ತಿರುವುಗಳಿರುವಾಗ ಸಂಭಾವ್ಯ ಅಪಾಯಗಳ ಬಗ್ಗೆಯೂ ಜಾಗರೂಕರಾಗಿರಬೇಕು.
ಸರಿಯಾದ ಟೈರ್ ಒತ್ತಡವನ್ನು ಕಾಪಾಡಿಕೊಳ್ಳುವುದು ಅತಿಮುಖ್ಯವಾದ ಅಂಶವಾಗಿದೆ. ಏಕೆಂದರೆ ಕಡಿಮೆ ಗಾಳಿಯಿರುವ ಟೈರ್‌ಗಳು ಎಳೆತ ಮತ್ತು ಸ್ಥಿರತೆಯನ್ನು ಕಾಪಾಡುವಲ್ಲಿ ವಿಫಲಗೊಳ್ಳುತ್ತವೆ. ಇದರಿಂದ ತಿರುವುಗಳಲ್ಲಿ ಅಪಾಯವನ್ನು ಹೆಚ್ಚಿಸುತ್ತವೆ. ಹೆಚ್ಚುವರಿಯಾಗಿ, ನಿಯಮಿತ ಸರ್ವಿಸ್ ಟೆಸ್ಟ್‌ಗಳನ್ನು ನಡೆಸಬೇಕು. ಇವುಗಳಲ್ಲಿ ಬ್ರೇಕ್ ತಪಾಸಣೆ ಮತ್ತು ಸಸ್ಪೆಂಷನ್ ನಿರ್ವಹಣೆ ಮುಖ್ಯ.
ಚಾಲಕರು ತಿರುವುಗಳಲ್ಲಿ ಓಡಿಸುವಾಗ, ವಿಶೇಷವಾಗಿ ಹೆದ್ದಾರಿಗಳು ಮತ್ತು ಗ್ರಾಮೀಣ ರಸ್ತೆಗಳಲ್ಲಿ ವಾಹನಗಳನ್ನು ಚಾಲನೆ ಮಾಡುವಾಗ ತಮ್ಮ ಚಾಲನಾ ವೇಗವನ್ನು ಕಾಪಾಡಿಕೊಳ್ಳಬೇಕು. ಅಂದರೆ ಆಯಾ ಪ್ರದೇಶಕ್ಕೆ ತಕ್ಕಂತೆ ಇಂತಿಷ್ಟೇ ವೇಗದಲ್ಲಿರಲು ಸೂಚಿಸಿರಲಾಗಿರುತ್ತದೆ. ಆ ವೇಗದಲ್ಲಿದ್ದರೇ ಅಪಘಾತ ಸಾಧ್ಯತೆಗಳು ಕಡಿಮೆ, ವಿಶೇಷವಾಗಿ ಎಸ್‌ಯುವಿಗಳಂತಹ ಹೆಚ್ಚಿನ ಭಾರವಾದ ವಾಹನಗಳು ಇದನ್ನು ಪಾಲಿಸಬೇಕು.
ಕೊನೆಯದಾಗಿ, ಪ್ರಯಾಣಿಕರು ಅಥವಾ ಸರಕುಗಳೊಂದಿಗೆ ವಾಹನವನ್ನು ಓವರ್ ಲೋಡ್ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಹಠಾತ್ ಬ್ರೇಕಿಂಗ್ ಸಮಯದಲ್ಲಿ ವಾಹನ ತೂಕದ ಮಿತಿಗಳನ್ನು ಮೀರುವುದರಿಂದ ವಾಹನ ಅಸ್ಥಿರಗೊಳ್ಳಬಹುದು. ತೂಕವನ್ನು ಸಮಾನವಾಗಿ ವಿತರಿಸುವುದು ರೋಲ್ ಓವರ್ ಅಪಘಾತಗಳನ್ನು ಕಡಿಮೆ ಮಾಡುತ್ತದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








