ಅನಾಗರಿಕತೆ: 8 ಬಾರಿ ಟ್ರ್ಯಾಕ್ಟರ್ ಹತ್ತಿಸಿ ಕೊಂದೆ ಬಿಟ್ಟ.. ಜೀವ ಕಾಪಾಡದೇ ವಿಡಿಯೋ ಮಾಡುವುದರಲ್ಲಿ ಜನ ಬ್ಯುಸಿ!
ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಅಡ್ಡಾ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಟ್ರ್ಯಾಕ್ಟರ್ ಚಾಲಕನ ಕ್ರೌರ್ಯದಿಂದ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಸದ್ಯ, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ವಲ್ಪವು ಮನುಷ್ಯತ್ವವಿಲ್ಲದೇ ಚಾಲಕ ಒಂದಲ್ಲ - ಎರಡಲ್ಲ ಬರೋಬ್ಬರಿ 8 ಬಾರಿ ಟ್ರ್ಯಾಕ್ಟರ್ ಹತ್ತಿಸಿದ್ದಾನೆ. ಕುಟುಂಬಸ್ಥರು, ಆ ವ್ಯಕ್ತಿಯನ್ನು ಉಳಿಸಲು ಪ್ರಯತ್ನಿಸಿದರೂ ಟ್ರ್ಯಾಕ್ಟರ್ ಚಾಲಕನ ದುಷ್ಕೃತ್ಯವನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಮತ್ತೆ ಕೆಲವರು, ಆ ನತದೃಷ್ಟನ ಪ್ರಾಣ ಉಳಿಸುವುದನ್ನು ಬಿಟ್ಟು, ಆ ಘಟನೆಯ ವಿಡಿಯೋವನ್ನು ಮಾಡಿದ್ದಾರೆ. ಈ ಮಾರಾಮಾರಿಯಲ್ಲಿ ಗಾಯಗೊಂಡ 12 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿದ ತಕ್ಷಣ, ಬಯಾನ ಪೊಲೀಸ್ ಠಾಣೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಅಡ್ಡಾ ಗ್ರಾಮದ ಬಹದ್ದೂರ್ ಸಿಂಗ್ ಗುರ್ಜರ್ ಮತ್ತು ಅತಾರ್ ಸಿಂಗ್ ಗುರ್ಜರ್ ಅವರ ಕುಟುಂಬದ ನಡುವೆ ಜಮೀನಿಗೆ ಸಂಬಂಧಿಸಿದಂತೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಮೂರು ದಿನಗಳ ಹಿಂದೆಯೂ ಮಾರಾಮಾರಿ ನಡೆದಿದ್ದು, ಎರಡು ಕಡೆಯವರೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆ ಘಟನೆ ಸಂಬಂಧ ಪೊಲೀಸರು, ಸುಮಾರು 22 ಮಂದಿಯನ್ನು ಬಂಧಿಸಿದ್ದರು. ಆದರೆ, ಬುಧವಾರ ಬಹದ್ದೂರ್ ಸಿಂಗ್ ಗುರ್ಜರ್ ಕುಟುಂಬವು ವಿವಾದಿತ ಜಮೀನಿನಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಉಳುಮೆ ಮಾಡಲು ತೆರಳಿದ್ದರು. ಆಗ, ಅತಾರ್ ಸಿಂಗ್ ಗುರ್ಜಾರ್ ಅವರ ಕುಟುಂಬ ಸ್ಥಳಕ್ಕೆ ಬಂದು ಅವರನ್ನು ತಡೆದಾಗ, ವಾಗ್ವಾದ ಶುರುವಾಗಿ ವಿಕೋಪಕ್ಕೆ ಹೋಗಿದೆ. 45 ವರ್ಷದ ನಿರ್ಪತ್ ಸಿಂಗ್ ಗುರ್ಜಾರ್ ಎಂಬುವವರ ಮೇಲೆ 8 ಬಾರಿ ಟ್ರ್ಯಾಕ್ಟರ್ ಹತ್ತಿಸಿ, ಹತ್ಯೆ ಮಾಡಲಾಗಿದೆ.

ಜಗಳವನ್ನು ನೋಡಲು ಹೆಚ್ಚಿನ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿ, ಮೂಕ ಪ್ರೇಕ್ಷಕರಂತೆ ನಿಂತಿದ್ದರು. ಕೆಲವರು ವಿಡಿಯೋವನ್ನು ಮಾಡುತ್ತಿದ್ದರು. ಆದರೆ, ನತದೃಷ್ಟ ನಿರ್ಪತ್ ಸಿಂಗ್ ಗುರ್ಜಾರ್ ನನ್ನು ರಕ್ಷಿಸಲು ಯಾರೊಬ್ಬರೂ ಮುಂದಾಗಲಿಲ್ಲ. ಕುಟುಂಬಸ್ಥರ ನೆರವಿಗೂ ಬರಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೆಲವರು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಎಎಸ್‌ಪಿ ಓಂಪ್ರಕಾಶ್ ಕಲ್ವಾನಿ ಅವರು, 'ಈ ಪ್ರಕರಣದಲ್ಲಿ 5 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ. ಇನ್ನು, ಘಟನೆ ಸಂಬಂಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಭೀಕರ ದುರ್ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸ್ವಲ್ಪವು ಮನುಷ್ಯತ್ವವಿಲ್ಲದೇ ವರ್ತಿಸಿರುವ ಚಾಲಕ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ಜೊತೆಗೆ ಸ್ಥಳೀಯರು ಕೂಡ ಮಾನವೀಯತೆ ಇಲ್ಲದೇ ಸುಮ್ಮನೆ ನಿಂತಿರುವುದು ದುರದೃಷ್ಟಕರ ಸಂಗತಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications