ಮಂಗಳೂರು: ವಿಡಿಯೋ ನೋಡಿದ್ರೆ ಕರುಳು ಕಿತ್ತು ಬರುತ್ತೆ!, ಅತಿವೇಗದಲ್ಲಿದ್ದ ಬಸ್.. ಬಡವನ ಅನ್ಯಾಯದ ಸಾವು
ಬದುಕಿನ ಬಂಡಿ ಎಳೆಯಲು ಒಬ್ಬೊಬ್ಬರು ಒಂದೊಂದು ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಜೀವನೋಪಾಯಕ್ಕೆ ಬಾಗಲಕೋಟೆಯಿಂದ ಮಂಗಳೂರಿಗೆ ಬಂದು ಕಂಡಕ್ಟರ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ದಾರುಣವಾಗಿ ಅಂತ್ಯ ಕಂಡಿದ್ದಾನೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ನೋಡಿದರೆ ಎಂತಹವರಿಗೂ ಕರಳು ಕಿತ್ತು ಬರುತ್ತದೆ.
ಮಂಗಳವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದ್ದು, ಕದ್ರಿ ಕೆಪಿಟಿಯಿಂದ ಬರುತ್ತಿದ್ದ ಖಾಸಗಿ ಬಸ್ ಮೊದಲೇ ಅತಿವೇಗದಲ್ಲಿತ್ತು. ನಂತೂರು ಸರ್ಕಲ್ ನಲ್ಲಿ ಟರ್ನ್ ಆಗುವಾಗ ಫುಟ್‌ಬೋರ್ಡ್ ಮೇಲೆ ನಿಂತಿದ್ದ ಕಂಡಕ್ಟರ್ ಏಕಾಏಕಿ ಕೆಳಗೆ ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ತಲೆಗೆ ತೀವ್ರವಾಗಿ ಗಾಯಗೊಂಡಿದ್ದರಿಂದ ರಾತ್ರಿ 8 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ.

ಮೃತ ದುರ್ದೈವಿಯನ್ನು ಬಾಗಲಕೋಟೆಯ ಈರಯ್ಯ ಎಂದು ಗುರುತಿಸಲಾಗಿದೆ. ಅವರು ಸುರತ್ಕಲ್ ತಡಂಬೈಲ್ ನಲ್ಲಿ ವಾಸವಿದ್ದರೂ ಎಂದು ವರದಿಯಾಗಿದೆ. ಘಟನೆ ಸಂಬಂಧ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತಿವೇಗದ ಚಾಲನೆಯಿಂದಲೇ ಈ ದುರ್ಘಟನೆ ಸಂಭವಿಸಿದೆ. ಹೆಚ್ಚಿನ ಕಲೆಕ್ಷನ್ ಮಾಡಲು ಹಾಗೂ ನಿಗದಿತ ಸಮಯದೊಳಗೆ ಗೊತ್ತುಪಡಿಸಿದ ನಿಲ್ದಾಣ ತಲುಪಲು ಬಸ್‌ಗಳನ್ನು ಈ ರೀತಿಯಾಗಿ ಓಡಿಸುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಿಮಗೆ ಗೊತ್ತಿರಲಿ.. ಫುಟ್‌ಬೋರ್ಡ್ ಮೇಲೆ ಕುಳಿತುಕೊಂಡು ಅಥವಾ ನಿಂತುಕೊಂಡು ಪ್ರಯಾಣಿಸುವುದು ತುಂಬಾ ಅಪಾಯಕಾರಿಯಾಗಿದೆ. ಬಸ್ ವೇಗವಾಗಿ ಹೋಗುವಾಗ ಇದ್ದಕ್ಕಿಂದಂತೆ ಬ್ರೇಕ್ ಹಾಕಿದಾಗ ಅಥವಾ ತಿರುವುಗಳಲ್ಲಿ, ಪ್ರಯಾಣಿಕರು ಇಲ್ಲವೇ ಬಸ್ ಸಿಬ್ಬಂದಿ ಮುಗ್ಗರಿಸಿ, ಕೆಳಗೆ ಬೀಳಬಹುದು. ಇದರಿಂದ ಪ್ರಾಣಗೂ ಹಾನಿಯಾಗಬಹುದು. ಸದ್ಯ, ಮಂಗಳೂರಿನಲ್ಲಿ ನಡೆದಿರುವ ಘಟನೆ ಅದಕ್ಕೆ ಸಾಕ್ಷಿಯಾಗಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಮೇಲೆ ಜನರು, ಫುಟ್‌ಬೋರ್ಡ್ ಕುಳಿತುಕೊಂಡು ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಇತ್ತೀಚೆಗೆ ಗದಗದಲ್ಲಿ ಮಗುವನ್ನು ಮಹಿಳೆಯೊಬ್ಬರು ಮಡಿಲಿನಲ್ಲಿ ಮಲಗಿಸಿಕೊಂಡು ನಗರ ಸಾರಿಗೆ ಬಸ್ ಫುಟ್‌ಬೋರ್ಡ್‌ನಲ್ಲಿ ಕುಳಿತುಕೊಂಡು ಪ್ರಯಾಣಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿತ್ತು. ಸೀಟ್ ಸಿಗದ ಕಾರಣ, ಮಹಿಳೆಯೂ ಈ ರೀತಿಯಾಗಿ ಮಾಡಿದ್ದರು. ಕೆಲ ನಿಮಿಷಗಳ ಬಳಿಕ, ಮಹಿಳೆ ಮಗುವನ್ನು ಎತ್ತಿಕೊಂಡು ಒಳಗಡೆ ಹೋಗಿದ್ದರು ಎಂದು ವರದಿಯಾಗಿತ್ತು.
ಅದಕ್ಕೂ ಮೊದಲು, ಜುಲೈ ತಿಂಗಳಲ್ಲಿ ಹುಲಿಗಿಯಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ಸಿನ ಫುಟ್‌ಬೋರ್ಡ್ ಮೇಲೆ ವೃದ್ದೆಯೊಬ್ಬರು ಕುಳಿತುಕೊಂಡು ಮಗುವನ್ನು ಮಡಿಲಿನಲ್ಲಿ ಮೇಲೆ ಮಲಗಿಸಿಕೊಂಡು ಪ್ರಯಾಣಿಸಿದ್ದರು. ಜೂನ್ ನಲ್ಲಿ ಹಾವೇರಿ ಜಿಲ್ಲೆಯಲ್ಲಿ ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್‌ನಿಂದ 14 ವರ್ಷದ ಶಾಲಾ ಬಾಲಕಿಯೊಬ್ಬಳು ಆಯತಪ್ಪಿ ಬಿದ್ದು, ಮೃತಪಟ್ಟಿದ್ದಳು. ಆ ಬಳಿಕ ರಾಜ್ಯ ಸಾರಿಗೆ ಇಲಾಖೆ ಎಚ್ಚೆತ್ತು ಕೊಂಡಿತ್ತು.
ಸಚಿವ ರಾಮಲಿಂಗಾರೆಡ್ಡಿ ಅವರು, ಎಲ್ಲ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಬಸ್ ಗಳು ಪ್ರಯಾಣ ಆರಂಭಿಸುವ ಮೊದಲು ಬಾಗಿಲುಗಳನ್ನು ಮುಚ್ಚಬೇಕೆಂದು ಸೂಚಿಸಿದ್ದರು. ಜೊತೆಗೆ ಈ ಕುರಿತು ಹಲವು ಮಾರ್ಗಸೂಚಿಗಳನ್ನು ಒಳಗೊಂಡಂತೆ ಕೆಎಸ್‌ಆರ್‌ಟಿಯು ಸುತ್ತೋಲೆ ಹೊರಡಿಸಿತ್ತು. ಡಿಪೋಗಳಿಂದ ಟ್ರಿಪ್‌ಗೆ ತೆರಳುವ ಮೊದಲು ಬಸ್‌ನ ಎಲ್ಲ ಬಾಗಿಲುಗಳನ್ನು ಪರಿಶೀಲಿಸಬೇಕು. ಫುಟ್‌ಬೋರ್ಡ್‌ನಲ್ಲಿ ನಿಂತುಕೊಂಡು/ ಕುಳಿತುಕೊಂಡು ತೆರಳಲು ಪ್ರಯಾಣಿಕರಿಗೆ ಅವಕಾಶ ನೀಡಬಾರದು ಎಂದು ತಿಳಿಸಿತ್ತು.
ರಾಜ್ಯ ಸರ್ಕಾರವು, ಪ್ರಯಾಣಿಕರ ಸುರಕ್ಷತೆಗೆ ಸಾರಿಗೆ ಬಸ್ ಗಳಲ್ಲಿ ಕೆಲವೊಂದು ಮಾರ್ಗಸೂಚಿಗಳನ್ನು ಜಾರಿಗೆ ತಂದಿರುವುದು ಉತ್ತಮ ಬೆಳವಣಿಗೆಯಾಗಿದೆ. ಖಾಸಗಿ ಬಸ್ ಗಳಿಗೂ ಈ ರೀತಿಯ ನಿಯಮಗಳನ್ನು ಅನ್ವಯ ಮಾಡಿದ್ದರೆ, ಮಂಗಳೂರಿನಲ್ಲಿ ಕಂಡಕ್ಟರ್ ಸಾವು ಸಂಭವಿಸುತ್ತಿರಲಿಲ್ಲವೇನೋ.. ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದ್ದು, ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications