ಮಂಗಳೂರು: ಫುಟ್‌ಪಾತ್ ಕೂಡ ಸುರಕ್ಷಿತವಲ್ಲ, ಹಿಟ್ & ರನ್.. ಯುವತಿ ಬಲಿ, ಸಿಸಿಟಿವಿ ದೃಶ್ಯ ಬೆಚ್ಚಿಬೀಳಿಸುತ್ತೆ!
ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಐವರು ಹೆಣ್ಣುಮಕ್ಕಳಿಗೆ ಕಾರೊಂದು ಡಿಕ್ಕಿಯಾಗಿದೆ. ಪರಿಣಾಮ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಈ ದುರ್ಘಟನೆ ಮಂಗಳೂರಿನ (Mangaluru) ಲೇಡಿಹಿಲ್ ಎಂಬಲ್ಲಿ ವರದಿಯಾಗಿದೆ. ಅಪಘಾತ ಹೇಗಾಯಿತು ಎನ್ನುವುದಕ್ಕೆ ಸಿಸಿಟಿವಿ (CCTV) ದೃಶ್ಯಾವಳಿಗಳು ದೊರೆತ್ತಿವೆ.
ಘಟನೆಯಲ್ಲಿ ರೂಪಶ್ರೀ (23) ಎಂಬ ಯುವತಿ ಸಾವನ್ನಪ್ಪಿದ್ದಾರೆ. ಸ್ವಾತಿ (26), ಹಿತನ್ವಿ (16), ಕಾರ್ತಿಕಾ (16), ಯತಿಕಾ (12) ಎಂಬುವವರೂ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷವೇ ಕಾರಣ ಎನ್ನಲಾಗಿದೆ. ದುರ್ಘಟನೆ ನಡೆದಾಗ ಕಾರು ಚಾಲಕ ಎಸ್ಕೇಪ್ ಆಗಿದ್ದು, ಆ ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಈ ಅಪಘಾತ ಪ್ರಕರಣ ಸಂಬಂಧ ಅಲ್ಲಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕಾರು ಚಾಲಕನನ್ನು ಕಮಲೇಶ್ ಬಲದೇವ್ ಎಂದು ಗುರುತಿಸಲಾಗಿದೆ. ಘಟನೆ ಬಗ್ಗೆ ಪ್ರತ್ಯೇಕದರ್ಶಿಯೊಬ್ಬರು ಮಾಹಿತಿ ನೀಡಿದ್ದು, ನಾಲ್ವರು ಯುವತಿಯರು ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದರು, ಹಿಂಬದಿಯಿಂದ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.
ಅಪಘಾತದ ಸಿಸಿಟಿವಿ ದೃಶ್ಯಗಳಿರುವ ವಿಡಿಯೋವನ್ನು ಸಿಟಿಜನ್ ಮೂವ್ಮೆಂಟ್ ಈಸ್ಟ್ ಬೆಂಗಳೂರು ಸಂಘಟನೆ ತನ್ನ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದೆ. 'ಫುಟ್‌ಪಾತ್ ಕೂಡ ಸುರಕ್ಷಿತವಲ್ಲ! ದಯವಿಟ್ಟು ಎಚ್ಚರಿಕೆಯಿಂದ ಚಾಲನೆ ಮಾಡಿ. ವೇಗದ ಮಿತಿಯನ್ನು ಮೀರಬೇಡಿ. ಮಂಗಳೂರಿನಲ್ಲಿ ವೇಗವಾಗಿ ಬಂದ ಕಾರು ನಾಲ್ಕು ಮಂದಿಗೆ ಡಿಕ್ಕಿ ಹೊಡೆದಿದ್ದರಿಂದ 23 ವರ್ಷದ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ' ಎಂದು ಬರೆದುಕೊಂಡಿದೆ.
ಇದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಅನುಮಾನ ವ್ಯಕ್ತಪಡಿಸಿದ್ದು, 'ಇದು ಆಕಸ್ಮಿಕವಲ್ಲ.ರಸ್ತೆ ಖಾಲಿಯಾಗಿದೆ, ಫುಟ್‌ಪಾತ್‌ಗೆ ಕಾರು ಹೇಗೆ ಬಂದಿತು. ನಂತರ, ಚಾಲಕನ ನಿಲ್ಲಿಸದೆ ಹೋಗಿದ್ದಾನೆ. ಯುವತಿಯರಿಗೆ ಏನಾದರೂ ಸಂಬಂಧವಿದೆಯೇ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಪಾದಚಾರಿಗಳಿಗೆ ದೇಶವಲ್ಲ' ಎಂದಿದ್ದಾರೆ. 'ಇದು ಕೊಲೆ' ಎಂದು ಇನ್ನೊಬ್ಬರು ಹೇಳಿದ್ದಾರೆ.
ರಸ್ತೆ ಅಪಘಾತ ತಪ್ಪಿಸುವುದು ಹೇಗೆ?: ದೇಶದಲ್ಲಿ ರಾಜ್ಯ - ರಾಷ್ಟ್ರಿಯ ಹೆದ್ದಾರಿಗಳಿಗೆ ಅನುಗುಣವಾಗಿ ಇಷ್ಟೇ ನಿಗದಿತ ವೇಗಮಿತಿಯಲ್ಲಿ ವಾಹನ ಚಾಲನೆ ಮಾಡಬೇಕೆಂಬ ಫಲಕಗಳನ್ನು ಅಳವಡಿಸಲಾಗಿರುತ್ತದೆ. ಅದನ್ನು ಅನುಸರಿಸಿ ವಾಹನ ಚಲಾಯಿಸಿದರೆ, ಅಪಘಾತವನ್ನು ತಪ್ಪಿಸಬಹುದು. ಬೈಕ್, ಕಾರು ಓಡಿಸುವಾಗ ಹೆಲ್ಮೆಟ್, ಸೀಟ್ ಬೆಲ್ಟ್ ಸೇರಿದಂತೆ ಇತರೆ ಸುರಕ್ಷತಾ ಸಾಧನ ಬಳಕೆ ಮಾಡುವ ಅಭ್ಯಾಸ ರೂಡಿಸಿಕೊಳ್ಳಿ. ಇದರಿಂದ ದೊಡ್ಡ ಮಟ್ಟದದಲ್ಲಿ ಅಪಾಯವಾಗುವುದು ತಪ್ಪುತ್ತದೆ.
ಮದ್ಯಪಾನ ಮಾಡಿ ಎಂದಿಗೂ ವಾಹನ ಚಲಾಯಿಸಬೇಡಿ. ಮುಖ್ಯವಾಗಿ ಕಾರು, ಬೈಕ್ ಓಡಿಸುವಾಗ ಮೊಬೈಲ್ ಫೋನ್ ಅಥವಾ ಇಯರ್ ಫೋನ್ ಉಪಯೋಗಿಸಬೇಡಿ. ಇದರಿಂದ ರಸ್ತೆಯ ಮೇಲೆ ಸರಿಯಾಗಿ ಗಮನ ನೀಡಲು ಸಾಧ್ಯವಾಗುವುದಿಲ್ಲ. ಅಗತ್ಯವಾಗಿರುವ ಎಲ್ಲಾ ಸಂಚಾರಿ ನಿಯಮಗಳನ್ನು ಪಾಲಿಸಿದರೆ, ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಬಹುದು. ಜೊತೆಗೆ ಹೆದ್ದಾರಿಯಲ್ಲಿ ಪಥ ಶಿಸ್ತು ಕಾಯ್ದುಕೊಳ್ಳಿರಿ. ಅಕ್ಕ- ಪಕ್ಕದ ವಾಹನಗಳ ಬಗ್ಗೆ ಗಮನಹರಿಸಿ. ನೆನಪಿಡಿ.. ಇಲ್ಲಿ ಪ್ರತಿಯೊಬ್ಬರ ಜೀವ ಕೂಡ ಅಮೂಲ್ಯವೆಂದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications