ಗರಿಷ್ಟ ಗುಣಮಟ್ಟದ ಮಾರುತಿ ಕಾರು? 15 ಅಡಿ ಆಳಕ್ಕೆ ಬಿದ್ದರು ಪ್ರಯಾಣಿಕರು ಸೇಫ್!
ಇತ್ತೀಚೆಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನವವಿವಾಹಿತ ದಂಪತಿ ರಾತ್ರಿ ವೇಳೆ ಬಾವಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರಿಬ್ಬರನ್ನು ಸಮಯಕ್ಕೆ ಸರಿಯಾಗಿ ರಕ್ಷಿಸಲಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ. ಈ ಘಟನೆಯು ಕೇರಳದ ಎರ್ನಾಕುಲಂ ಜಿಲ್ಲೆಯ ಕೋಲೆಂಚೇರಿ ಬಳಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಮಳಯಾಲಂನ ಮಾತೃಭೂಮಿ ನ್ಯೂಸ್ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗಿದೆ. ವಿಚಿತ್ರವೇನೆಂದರೆ ಸುರಕ್ಷತೆಯಲ್ಲಿ ಕಳೆಪೆ ಗುಣಮಟ್ಟದ್ದಾಗಿದೆ ಎಂದು ಹೇಳಲಾಗುವ ಮಾರುತಿ ಸುಜುಕಿ ಸ್ವಿಫ್ಟ್ ಈ ಅಪಘಾತದಲ್ಲಿ ಪ್ರಯಾಣಿಕರ ಜೀವ ಉಳಿಸಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ.
ಬಾವಿಗೆ ಬಿದ್ದಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಮಾಲೀಕ ಕಾರ್ತಿಕ್ ಮತ್ತು ಅವರ ಪತ್ನಿ ವಿಸ್ಮಯ ಎರಡು ತಿಂಗಳ ಹಿಂದೆ ವಿವಾಹವಾಗಿದ್ದರು. ಕಳೆದ ಶುಕ್ರವಾರ ಕೇರಳದ ಕೊಟ್ಟಾರಕರದಿಂದ ಅಲುವಾ ಎಂಬ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದರು. ದುರದೃಷ್ಟವಶಾತ್ ಕಳಪೆ ಗುಣಮಟ್ಟದ ರಸ್ತೆಯಿಂದಾಗಿ ಎರ್ನಾಕುಲಂ ಜಿಲ್ಲೆಯ ಕೋಲೆಂಚೇರಿ ಬಳಿ ಕಾರು ನಿಯಂತ್ರಣ ಕಳೆದುಕೊಂಡಿದೆ.

ನೀರಿನಿಂದ ತುಂಬಿದ ರಸ್ತೆಯಲ್ಲಿ ದಾರಿ ಸರಿಯಾಗಿ ಕಾಣದ ಕಾರಣ, ಕಾರು ಅಲ್ಲೆ ಪಕ್ಕದಲ್ಲಿದ್ದ ಬಾವಿಗೆ ಗುದ್ದಿದೆ. ಈ ರಭಸಕ್ಕೆ ಅದರ ಗೋಡೆ ಮುರಿದು ಆಳಕ್ಕೆ ಬಿದ್ದಿದೆ. ಬಾವಿ ಸುಮಾರು 15 ಅಡಿ ಆಳವಿದ್ದು, ಅದರೊಳಗೆ ಐದು ಅಡಿ ನೀರಿತ್ತು ಎಂದು ಹೇಳಲಾಗಿದೆ. ಸ್ವಿಫ್ಟ್ ಬಾವಿಗೆ ಬಿದ್ದ ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಬಾವಿಗೆ ಏಣಿಯನ್ನು ಇಳಿಸಿ ಒಳಗಿದ್ದ ದಂಪತಿಯನ್ನು ಮೇಲಕ್ಕೆ ಕರೆತಂದಿದ್ದಾರೆ.
ನಂತರ ಕ್ರೇನ್ ತರಿಸಿ ಅದರ ಸಹಾಯದಿಂದ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಬಾವಿಯಿಂದ ಹೊರತೆಗೆಯಲಾಯಿತು. ನೀರು ಐದು ಅಡಿ ಆಳವಿದ್ದ ಕಾರಣ, ಅವರು ವಾಹನದಿಂದ ಬೇಗನೆ ಹೊರಬರಲು ಸಾಧ್ಯವಾಗಿದೆ. ನೀರು ಆಳವಾಗಿದ್ದರೆ, ದಂಪತಿ ಹೊರಬರಲು ಕಷ್ಟವಾಗುತ್ತಿತ್ತು. ಅಲ್ಲದೇ ಬಾವಿಯಲ್ಲಿ ನೀರು ಇಲ್ಲದಿದ್ದರೇ ಕಾರು ಬಿದ್ದ ರಭಸಕ್ಕೆ ತೀವ್ರ ಅನಾಹುತಕ್ಕೂ ಕಾರಣವಾಗುತ್ತಿತ್ತು.

ಎಷ್ಟು ಸುರಕ್ಷಿತ ಮಾರುತಿ ಸ್ವಿಫ್ಟ್?: ಮೇ 2024 ರಲ್ಲಿ ಭಾರತದಲ್ಲಿ ಬಿಡುಗಡೆಯಾದ ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಯುರೋ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲಿ ಇದು ಸುರಕ್ಷತಾ ಮೌಲ್ಯಮಾಪನಗಳಲ್ಲಿ ಒಟ್ಟಾರೆ 3-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ಆದ್ರೆ ಇಲ್ಲಿ ಅಪಘಾತವಾದ ಕಾರು ಹಳೆಯ ಸ್ವಿಫ್ಟ್ ಅಥವಾ ಹೊಸ ಸ್ವಿಫ್ಟ್ ಎಂಬುದು ತಿಳಿದುಬಂದಿಲ್ಲ.
ಹಳೆಯ ಸ್ವಿಫ್ಟ್ ಕಾರು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಯಲ್ಲಿ ಕೇವಲ 1 ಸ್ಟಾರ್ ರೇಟಿಂಗ್ ಮಾತ್ರ ಪಡೆದುಕೊಂಡಿದೆ. ಇಲ್ಲಿ ಮುಖ್ಯವಾಗಿ ದಂಪತಿಯ ಜೀವ ಉಳಿಸಿರುವುದು ಬಾವಿಯಲ್ಲಿದ್ದ ನೀರು ಎಂದು ಹೇಳಬಹುದು. ಏಕೆಂದರೆ ನಿರು ಇಲ್ಲದಿದ್ದಲ್ಲಿ ಕಾರು ಬಿದ್ದ ರಭಸಕ್ಕೆ ನೆಲಕ್ಕೆ ಅಪ್ಪಳಿಸಿ ಇಬ್ಬರಿಗೂ ಗಂಭೀರ ಗಾಯಗಳು ಆಗುವ ಸಾಧ್ಯತೆಗಳು ಇದ್ದವು.
ಹೊಸ ಮಾರುತಿ ಸ್ವಿಫ್ಟ್ ಸುರಕ್ಷತೆ: ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಇದರಲ್ಲಿ 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TCS (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಸೀಟ್ ಬೆಲ್ಟ್ ರಿಮೈಂಡರ್ ಒಳಗೊಂಡಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications