ಲಾಕ್‌ಡೌನ್ ನಡುವೆಯೂ ಎದುರಾಯ್ತು ಸಂಚಾರ ದಟ್ಟಣೆ
ಸದ್ಯ ಇಡೀ ಜಗತ್ತಿನ ಮುಂದಿರುವ ಏಕೈಕ ದೊಡ್ಡ ಸವಾಲು ಮಾರಣಾಂತಿಕ ಕರೋನಾ ವೈರಸ್‌ನ ನಿಯಂತ್ರಣ. ಕರೋನಾ ವೈರಸ್ ಕಪಿಮುಷ್ಟಿಯಿಂದ ಹೊರ ಬರಲು ಸಾಧ್ಯವಾಗದೇ ಪ್ರಪಂಚದ ಬಹುತೇಕ ದೇಶಗಳು ತತ್ತರಿಸಿ ಹೋಗಿವೆ. ಇವುಗಳಲ್ಲಿ ಸಣ್ಣ ದೇಶಗಳಿಂದ ಬಲಿಷ್ಠ ರಾಷ್ಟ್ರಗಳು ಸೇರಿವೆ.

ಸೂಪರ್ ಪವರ್ ರಾಷ್ಟ್ರಗಳು ಮಾತ್ರವಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದ ದೇಶಗಳೂ ಸಹ ಈ ವೈರಸ್‌ನಿಂದ ಹಾನಿಗೀಡಾಗಿವೆ. ಫ್ರಾನ್ಸ್ ಹಾಗೂ ಇಟಲಿ ದೇಶಗಳು ಇದಕ್ಕೆ ಸೂಕ್ತ ಉದಾಹರಣೆಯಾಗಿವೆ. ಆರಂಭದಲ್ಲಿ ನೂರರ ಸಂಖ್ಯೆಯಲ್ಲಿದ್ದ ಭಾರತದಲ್ಲಿ ಈಗ ಸೋಂಕಿತರ ಪ್ರಮಾಣ 19,000ದ ಗಡಿ ದಾಟಿದೆ.

ಇದುವರೆಗೆ 590 ಜನರು ಸಾವನ್ನಪ್ಪಿದ್ದಾರೆ. ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಲಾಕ್‌ಡೌನ್ ಅನ್ನು ವಿಸ್ತರಿಸಲಾಗಿದೆ. 2ನೇ ಹಂತದ ಲಾಕ್‌ಡೌನ್ ಮೇ 3ರವರೆಗೆ ಜಾರಿಯಲ್ಲಿರಲಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಈ ಲಾಕ್‌ಡೌನ್ ಅನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆಗಳಿವೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಸೋಂಕಿತರ ಸಂಖ್ಯೆ ಹೆಚ್ಚಲು ಜನರ ಅಸಹಕಾರವೂ ಸಹ ಕಾರಣವಾಗಿದೆ.

ಅಗತ್ಯವಿರುವವರು ಮಾತ್ರ ಹೊರಬರುವಂತೆ ಸೂಚಿಸಿದ್ದರೂ ಜನ ವಿನಾಕಾರಣ ರಸ್ತೆಗಿಳಿದು ವೈರಸ್ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತಿದ್ದಾರೆ. ಕಳೆದ ಭಾನುವಾರ ರಾಜಧಾನಿ ದೆಹಲಿಯಲ್ಲಿ ಸಂಚಾರ ದಟ್ಟಣೆಯು ವಿಪರೀತವಾಗಿ ಹೆಚ್ಚಾಗಿತ್ತು. ಈ ಬಗ್ಗೆ ಕೆಲವರು ಟ್ವೀಟ್ ಮಾಡಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಭಾರತದ ಒಟ್ಟು ಜನಸಂಖ್ಯೆಯ 2%ನಷ್ಟು ಜನರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ದೇಶದ 12%ನಷ್ಟು ಕರೋನಾ ಸೋಂಕಿತರು ದೆಹಲಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರು ಮುನ್ನೆಚ್ಚರಿಕೆಯಿಲ್ಲದೇ ವರ್ತಿಸುವುದು ಆಘಾತಕಾರಿ. ಈ ವಾಹನ ದಟ್ಟಣೆ ಉಂಟಾಗಿರುವುದು ಪೊಲೀಸರ ತಪಾಸಣೆಯ ಸಂದರ್ಭದಲ್ಲಿ.

ಈ ಘಟನೆ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಕಳೆದ ಭಾನುವಾರ ಒಂದೇ ದಿನ ದೆಹಲಿಯಲ್ಲಿ 110 ಜನರಿಗೆ ಕರೋನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಇದರಿಂದಾಗಿ ಕರೋನಾ ವೈರಸ್ ಸೋಂಕಿತರ ಸಂಖ್ಯೆ 2003ಕ್ಕೆ ಏರಿಯಾಗಿದೆ. ಈ ವೈರಸ್‌ಗೆ ದೆಹಲಿಯಲ್ಲಿ 45 ಜನರು ಬಲಿಯಾಗಿದ್ದಾರೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕೆಲವು ತಜ್ಞರು ಮುಂದಿನ ದಿನಗಳಲ್ಲಿ ಕರೋನಾದ ಪರಿಣಾಮವು ಮತ್ತಷ್ಟು ಗಂಭೀರವಾಗಿರಲಿದೆ ಎಂದು ಹೇಳಿದ್ದಾರೆ. ಆದರೂ ಜನ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಸುತ್ತಾಡುತ್ತಿರುವುದು ಗಾಬರಿಗೊಳಿಸುವಂತಿದೆ.

ಈ ಸಂಚಾರ ದಟ್ಟಣೆಯಲ್ಲಿ ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರು ಸಿಕ್ಕಿಬಿದ್ದರೆ ಕರೋನಾ ಸೋಂಕಿತರ ಗತಿ ಏನು ಎಂಬುದು ಸಾಮಾಜಿಕ ಕಾರ್ಯಕರ್ತರ ಪ್ರಶ್ನೆ. ದೇಶದ ಬಹುತೇಕ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಪೊಲೀಸರು ಕೈಚೆಲ್ಲಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.


Click it and Unblock the Notifications