70ರ ವಯಸ್ಸಲ್ಲೂ ಡ್ರೈವಿಂಗ್ ಸ್ಕೂಲ್ ನಡೆಸುತ್ತಿರುವ ವೃದ್ಧೆ: ಇವರಿಗಿದೆ 11 ಬಗೆಯ ವಾಹನ ಪರವಾನಗಿ
ಯಾವುದೇ ವಾಹನವನ್ನಾಗಲಿ ಓಡಿಸಬೇಕೆಂದರೆ ಪರವಾನಗಿ ಬಹಳ ಮುಖ್ಯ. ಈ ನಿಟ್ಟಿನಲ್ಲಿ ತಮ್ಮ ವೃತ್ತಿಗನುಗುಣವಾಗಿ ಅಥವಾ ವೈಯಕ್ತಿಕ ವಾಹನಗಳನ್ನು ಓಡಿಸಲು ಪರವಾನಗಿ ಹೊಂದಿರುತ್ತಾರೆ. ಆದರೆ ಕೆಲವರು ಕ್ರೇಜ್‌ಗಾಗಿ ವಿವಿಧ ವಾಹನಗಳನ್ನು ಓಡಿಸಲು 4 ರಿಂದ 6 ಪರವಾನಗಿಗಳನ್ನು ಹೊಂದಿರುತ್ತಾರೆ. ಆದರೆ ಕೇರಳದ ವ್ಯಕ್ತಿಯೊಬ್ಬರು ಬರೋಬ್ಬರಿ 11 ವಿವಿಧ ವಾಹನಗಳ ಪರವಾನಗಿ ಹೊಂದಿದ್ದಾರೆ.

ಇಲ್ಲಿ ಮತ್ತೊಂದು ಆಶ್ಚರ್ಯದ ಸಂಗತಿಯೆಂದರೇ 11 ವಿವಿಧ ಬಗೆಯ ವಾಹನಗಳನ್ನು ಓಡಿಸಲು ಪರವಾನಗಿ ಹೊಂದಿರುವುದು ಓರ್ವ ಮಹಿಳೆ. ಹೌದು ಕೇರಳದ ಕೊಚ್ಚಿಯ 71 ವರ್ಷದ ರಾಧಾಮಣಿ ಎಂಬಾಕೆ ಬರೋಬ್ಬರಿ 11 ಪರವಾನಗಿಗಳನ್ನು ಹೊಂದಿದ್ದಾರೆ. ಇವರು ರಾತ್ರಿಯಲ್ಲಿ ಮಕ್ಕಳಿಗೆ ಕಥೆಗಳನ್ನು ಹೇಳುವ ಸಾಮಾನ್ಯ ಅಜ್ಜಿಯಲ್ಲ. ಬದಲಿಗೆ ಎಲ್ಲಾ ಅಜ್ಜಿಯರಿಗಿಂತ ಭಿನ್ನವಾಗಿದ್ದಾರೆ.

ಅಲ್ಲದೇ ನಮ್ಮಲ್ಲಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರನ್ನು ರೋಲ್ ಮಾಡೆಲ್ ಆಗಿಯೂ ತೆಗೆದುಕೊಳ್ಳಬಹುದು. ರಾಧಾಮಣಿ ಅವರು ಫೋರ್ಕ್ ಲಿಫ್ಟ್, ಗ್ರ್ಯಾನ್, ರೋಡ್ ರೋಲರ್, ಟ್ರ್ಯಾಕ್ಟರ್, ಕಂಟೇನರ್ ಟ್ರೇಲರ್ ಟ್ರಕ್, ಬಸ್ ಮತ್ತು ಲಾರಿ ಸೇರಿದಂತೆ 11 ಬಗೆಯ ವಾಹನಗಳನ್ನು ಓಡಿಸಲು ಪರವಾನಗಿ ಹೊಂದಿದ್ದಾರೆ. ಅವರು ಈ 11 ರೀತಿಯ ವಾಹನಗಳನ್ನು ಓಡಿಸಲು ಪರವಾನಗಿ ಪಡೆದ ರೀತಿಯೂ ಬಲು ರೋಚಕ.

ರಾಧಾಮಣಿಗೆ 30 ವರ್ಷ ವಯಸ್ಸಿದ್ದಾಗ ಮೊದಲು ಕಾರು ಚಾಲನೆ ಮಾಡುವುದನ್ನು ಕಲಿತರು. ವಾಹನ ಚಾಲನೆಗೆ ಒಗ್ಗಿಕೊಳ್ಳಲು ರಾಧಾಮಣಿ ಅವರ ಪತಿಯೇ ಅವರನ್ನು ಒತ್ತಾಯಿಸಿದ್ದರು. ರಾಧಾಮಣಿ ಕೂಡ ಮೊದಲು ಕಾರು ಓಡಿಸಲು ಬಹಳ ಕಷ್ಟಪಟ್ಟಿದ್ದರಂತೆ. ಬಳಿಕ ವಾಹನ ಚಾಲನೆಯಲ್ಲಿ ಆಸಕ್ತಿ ಹೆಚ್ಚಾಗತೊಡಗಿತು. ನಂತರದ ದಿನಗಳಲ್ಲಿ ರಾಧಾಮಣಿ ಅವರ ಪತಿ 1970ರಲ್ಲಿ ಡ್ರೈವಿಂಗ್ ಸ್ಕೂಲ್ ಪ್ರಾರಂಭಿಸಿದರು.

ಕೊಚ್ಚಿಯಲ್ಲಿ ಈ ಚಾಲನಾ ಶಾಲೆಯನ್ನು ಪ್ರಾರಂಭಿಸಲಾಯಿತು. ದುರದೃಷ್ಟವಶಾತ್ ರಾಧಾಮಣಿ ಅವರ ಪತಿ 2004ರಲ್ಲಿ ಅಪಘಾತದಲ್ಲಿ ನಿಧನರಾದರು. ಘಟನೆಯ ನಂತರ ತನ್ನ ಕುಟುಂಬ ನಡೆಸುವ ಡ್ರೈವಿಂಗ್ ಸ್ಕೂಲ್ ಅನ್ನು ನಿರ್ವಹಿಸಲು ರಾಧಾಮಣಿ ತನ್ನ ಮಕ್ಕಳಿಗೆ ಸಹಾಯ ಮಾಡಲು ಪ್ರಾರಂಭಿಸಿದರು.

ಡ್ರೈವಿಂಗ್ ಸ್ಕೂಲ್‌ನಲ್ಲಿ ಡ್ರೈವಿಂಗ್ ಕಲಿಸಿಕೊಡುವವರು ಕಡ್ಡಾಯವಾಗಿ ಚಾಲನಾ ಪರವಾನಗಿಯನ್ನು ಹೊಂದಿರಬೇಕು. ಏಕೆಂದರೆ ಅವರು ಇತರರಿಗೆ ಕಲಿಸುವ ವಾಹನಕ್ಕೆ ಚಾಲನಾ ಪರವಾನಗಿಯನ್ನು ಹೊಂದಿರುವುದು ಬಹಳ ಮುಖ್ಯ. ಈ ವಿಷಯದಲ್ಲಿ ರಾಧಾಮಣಿ ತುಂಬಾ ವಿಶೇಷ. ಏಕೆಂದರೆ ಅವರು 11 ಬಗೆಯ ವಾಹನಗಳ ಪರವಾನಗಿಯನ್ನು ಹೊಂದಿದ್ದಾರೆ.

ಆದರೆ ರಾಧಾಮಣಿ ಸದ್ಯಕ್ಕೆ ಈ ಎಲ್ಲಾ ವಾಹನಗಳನ್ನು ಓಡಿಸುವುದಿಲ್ಲ. ಏಕೆಂದರೆ ಡ್ರೈವಿಂಗ್ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಕಲಿಸುವ ಗುಂಪಿನಲ್ಲಿ ಅವರು ಪ್ರಸ್ತುತ ಇಲ್ಲ. ಅವರು ಸಮಯವಿದ್ದಾಗ ಮಾತ್ರ ವಿದ್ಯಾರ್ಥಿಗಳಿಗೆ ವಾಹನ ಓಡಿಸಲು ತರಬೇತಿ ನೀಡುತ್ತಿದ್ದರು. ಪ್ರಸ್ತುತ ಅವರು ಚಾಲನಾ ಶಾಲೆಯ ಕಂಪ್ಯೂಟರ್ ಸಂಬಂಧಿತ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಇಲ್ಲಿ ಮತ್ತೊಂದು ಆಶ್ಚರ್ಯಕರ ವಿಷಯವೆಂದರೆ ರಾಧಾಮಣಿ ಕಾಲೇಜು ವಿದ್ಯಾರ್ಥಿ ಕೂಡ ಹೌದು. ರಾಧಾಮಣಿ ಅವರು ಚಾಲನಾ ಶಾಲೆಯ ಕಂಪ್ಯೂಟರ್ ಸಂಬಂಧಿತ ಕೆಲಸವನ್ನು ನೋಡಿಕೊಳ್ಳುವ ಜೊತೆಗೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಕೋರ್ಸ್ ಅನ್ನು ಸಹ ಮಾಡುತ್ತಿದ್ದಾರೆ. ಅವರು ಸದ್ಯ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಓದುತ್ತಿದ್ದಾರೆ.

ಈ ವಯಸ್ಸಿನಲ್ಲಿ ಅವರು ಓದುತ್ತಿರುವುದು ಶ್ಲಾಘನೀಯ. ಇದಕ್ಕಾಗಿಯೇ ಸುದ್ದಿಯ ಆರಂಭದಲ್ಲಿ ರಾಧಾಮಣಿ ನಮ್ಮೆಲ್ಲರಿಗೂ ಸ್ಫೂರ್ತಿ ಮತ್ತು ಅವರನ್ನು ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳಬಹುದು ಎಂದು ಹೇಳಲಾಯಿತು. ವಾಸ್ತವವಾಗಿ ಅವರ ಕಥೆಯು ಹಲವರಿಗೆ, ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿಯಾಗಿದೆ.

ಸಾಧನೆ ಮಾಡಲು ವಯಸ್ಸು ಅಡ್ಡಿಯಲ್ಲ ಎಂಬುದನ್ನು ರಾಧಾಮಣಿ ಅವರ ಕಥೆ ಹೇಳುತ್ತದೆ. ಈ ವಯಸ್ಸಿನಲ್ಲೂ ಅವರು ಹೊಸ ವಿಷಯಗಳನ್ನು ಕಲಿಯುತ್ತಲೇ ಇದ್ದಾರೆ. ಆದ್ದರಿಂದ ಅವರು ಯುವ ಪೀಳಿಗೆಗೂ ಮಾದರಿಯಾಗಿದ್ದಾರೆ. ಇಂದು ಮಹಿಳೆಯರು ವಾಹನಗಳನ್ನು ಓಡಿಸುವುದು ಸಾಮಾನ್ಯ ಸಂಗತಿ. ಆದರೆ ಭಾರೀ ವಾಹನಗಳ ಕಾರ್ಯಾಚರಣೆ ಮಾಡುವುದು ಅಪರೂಪ.

ಬಸ್, ಲಾರಿಯಂತಹ ವಾಹನಗಳನ್ನು ನಿರ್ವಹಿಸಬಲ್ಲ ಮಹಿಳೆಯರು ಇನ್ನೂ ಇದ್ದಾರೆ. ಆದರೆ ಅವರ ಸಂಖ್ಯೆ ಬಹಳ ಕಡಿಮೆ. ಈ ನಡುವೆ ರಾಧಾಮಣಿ 11 ಬಗೆಯ ವಾಹನಗಳನ್ನು ನಿರ್ವಹಿಸಲು ಪರವಾನಗಿ ಹೊಂದಿರುವುದು ಶ್ಲಾಘನೀಯ.


Click it and Unblock the Notifications