Nitin Gadkari: ರಸ್ತೆ ಸುರಕ್ಷತೆಗಾಗಿ '4E'ಗೆ ಹೆಚ್ಚಿನ ಒತ್ತು ನೀಡಬೇಕು.. ಸಚಿವ ನಿತಿನ್ ಗಡ್ಕರಿ ಮಹತ್ವದ ಹೇಳಿಕೆ
ರಸ್ತೆ ಸುರಕ್ಷತೆ ಅತ್ಯಂತ ಮುಖ್ಯವಾಗಿದ್ದು, 2030ರ ವೇಳೆಗೆ ಅಪಘಾತದಿಂದ ಸಂಭವಿಸುವ ಸಾವಿನ ಪ್ರಮಾಣವನ್ನು ಶೇಕಡ 50% ಕಡಿಮೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಮಂಗಳವಾರ ಹೇಳಿದ್ದಾರೆ. ನವದೆಹಲಿಯಲ್ಲಿ ಇಂಡಸ್ಟ್ರಿ ಅಸೋಸಿಯೇಷನ್ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದ್ದಾರೆ.
ರಸ್ತೆ ಸುರಕ್ಷತೆಗೆ ಒತ್ತು ನೀಡುವ ಸಲುವಾಗಿ ಸಾಮಾಜಿಕ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು. ಜೊತೆಗೆ 4ಇ (4E)ಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಂದರೆ, ಎಂಜಿನಿಯರಿಂಗ್ (ರಸ್ತೆ ಹಾಗೂ ವಾಹನ ಎಂಜಿನಿಯರಿಂಗ್ - Road and Vehicle Engineering), ಜಾರಿ (Enforcement), ಶಿಕ್ಷಣ (Education) ಮತ್ತು ತುರ್ತು ವೈದ್ಯಕೀಯ ಸೇವೆ (Emergency medical service)ಗಳಿಗೆ ಪ್ರಾಮುಖ್ಯತೆ ಕೊಡಬೇಕಾಗಿದೆ ಎಂದು ತಿಳಿಸಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ (Minister of Road Transport and Highways) ನಿತಿನ್ ಗಡ್ಕರಿ ಅವರು ನೀಡಿರುವ ಮಾಹಿತಿ ಪ್ರಕಾರ, ದೇಶಾದ್ಯಂತ 2022ರಲ್ಲಿ ಒಟ್ಟು 460,000 ರಸ್ತೆ ಅಪಘಾತಗಳು (Road Accidents) ಸಂಭವಿಸಿದ್ದು, 168,000 ಮಂದಿ ಮೃತಪಟ್ಟಿದ್ದಾರೆ. 400,000 ಜನರಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ, ಪ್ರತಿ ಗಂಟೆಗೆ 53 ರಸ್ತೆ ಅಪಘಾತವಾಗುತ್ತಿದ್ದು, 19 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
2022ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಶೇಕಡ 12% ಹೆಚ್ಚಳವಾಗಿದ್ದು, ಅಪಘಾತ ಸಂಬಂಧಿತ ಸಾವುಗಳಲ್ಲಿ ಶೇಕಡ 10% ಅಧಿಕಗೊಂಡಿದೆ. ಇದು ಭಾರತದ ಜಿಡಿಪಿ(GDP)ಗೆ ಶೇಕಡ 3.14% ನಷ್ಟಕ್ಕೆ ಕಾರಣವಾಗಿದೆ. ಮೃತಪಟ್ಟವರಲ್ಲಿ ಶೇಕಡ 60% ಮಂದಿ 18-35 ವರ್ಷದವರಾಗಿದ್ದಾರೆ ಎಂದು ತಿಳಿಸಿದ್ದಾರೆ. ತಮ್ಮ ಸ್ವಕ್ಷೇತ್ರ ನಾಗಪುರದಲ್ಲಿ ಉತ್ತಮವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವವರಿಗೆ ಬಹುಮಾನ ವಿತರಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಇದರಿಂದ ಸಕಾರಾತ್ಮಕ ಫಲಿತಾಂಶ ದೊರೆಯುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಮುಂಬರುವ 5 ವರ್ಷಗಳಲ್ಲಿ ದೇಶದಲ್ಲಿ ಸಾರಿಗೆ ಮೂಲಸೌಕರ್ಯವನ್ನು ಅಮೆರಿಕಕ್ಕೆ ಸೆಡ್ಡು ಹೊಡೆಯುವಂತೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ಪ್ರಮುಖ ನಗರಗಳಲ್ಲಿ ಮೆಟ್ರೋ (Metro) ಸಂಪರ್ಕ ಜಾಲವನ್ನು ವಿಸ್ತರಿಸಲು ಉದ್ದೇಶಿಸಲಾಗಿದ್ದು, ಪ್ರಯಾಣದ ಸಮಯ ಕಡಿಮೆಯಾಗುವುದರೊಂದಿಗೆ ರಸ್ತೆ ಅಪಘಾತಗಳ ಸಂಖ್ಯೆಯು ಕ್ರಮೇಣ ಇಳಿಕೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರಸ್ತೆ ಅಪಘಾತವನ್ನು ತಪ್ಪಿಸುವುದು ಹೇಗೆ: ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಚಾಲನೆ ಮಾಡುವ ಮುನ್ನ ಹೆಲ್ಮೆಟ್, ಸೀಟ್ ಬೆಲ್ಟ್ ಒಳಗೊಂಡಂತೆ ಇತರೆ ಸುರಕ್ಷತಾ ಸಾಧನಗಳನ್ನು ಬಳಕೆ ಮಾಡಿರಿ. ಮದ್ಯಪಾನ ಮಾಡಿ ಎಂದಿಗೂ ವಾಹನಗಳನ್ನು ಚಲಾಯಿಸಬೇಡಿ. ಸಾಮಾನ್ಯ ರಸ್ತೆ ಅಥವಾ ಹೆದ್ದಾರಿಯೇ ಇರಲಿ ಚಾಲನೆ ಮಾಡುವಾಗ ಮೊಬೈಲ್ ಫೋನ್/ ಇಯರ್ ಫೋನ್ ಅನ್ನು ಬಳಸಬೇಡಿ. ಇದರಿಂದ ನಿಮ್ಮ ಗಮನವನ್ನು ರಸ್ತೆಯ ಮೇಲೆ ಕೇಂದ್ರಿಕರಿಸಲು ಸಾಧ್ಯವಾಗುವುದಿಲ್ಲ.
ರಸ್ತೆಗೆ ವಾಹನವನ್ನು ತೆಗೆದುಕೊಂಡು ಬರುವ ಮೊದಲು, ಟ್ರಾಫಿಕ್ ಸೇರಿದಂತೆ ಸಂಚಾರಿ ಸುರಕ್ಷತೆ ನಿಯಮಗಳನ್ನು ಅರಿತುಕೊಳ್ಳಿರಿ. ಹೆದ್ದಾರಿಯಲ್ಲಿ ಸುದೀರ್ಘ ಮಾರ್ಗಗಳಲ್ಲಿ ವಾಹನಗಳನ್ನು ಚಾಲನೆ ಮಾಡುವಾಗ ಪ್ರತಿ 2 ಗಂಟೆಗಳ ನಿರಂತರ ಚಾಲನೆಯ ನಂತರ ಕೊಂಚ ವಿಶ್ರಾಂತಿ ತೆಗೆದುಕೊಳ್ಳಿರಿ. ಗೊತ್ತುಪಡಿಸಿದ ನಿರ್ದಿಷ್ಟ ವೇಗಮಿತಿಯಲ್ಲಿ ವಾಹನಗಳನ್ನು ಚಲಾಯಿಸಿ, ಪಥ ಬದಲಾವಣೆ ಮಾಡುವಾಗ ಕೊಂಚ ಜಾಗ್ರತೆ ಇರಲಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications