ವಿನಾಕಾರಣ ಹಾರ್ನ್ ಮಾಡಿದರೆ ಹೆಚ್ಚು ಹೊತ್ತು ಉರಿಯಲಿದೆ ಕೆಂಪು ದೀಪ..!
ಭಾರತದ ವಾಹನ ಸವಾರರು ಕೆಟ್ಟ ಅಭ್ಯಾಸವೊಂದನ್ನು ರೂಢಿಸಿಕೊಂಡಿದ್ದಾರೆ. ಅವಶ್ಯಕತೆಯಿಲ್ಲದಿದ್ದರೂ ವಿನಾಕಾರಣ ಹಾರ್ನ್ ಮಾಡುವುದೇ ಆ ಕೆಟ್ಟ ಅಭ್ಯಾಸ. ಇನ್ನು ಕೆಲವರಿಗೆ ಹಾರ್ನ್‍ಗಳನ್ನು ಏಕೆ ನೀಡಲಾಗಿದೇ ಎಂಬುದರ ಅರಿವೇ ಇಲ್ಲ.

ಈ ರೀತಿ ವಿನಾಕಾರಣ ಹಾರ್ನ್ ಮಾಡುವುದರಿಂದ ರಸ್ತೆಗಳಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೆ ಕಿರಿಕಿರಿಯುಂಟಾಗುವುದು ಸಹಜ. ಇದರ ಪರಿಣಾಮವಾಗಿ ಶಬ್ದ ಮಾಲಿನ್ಯವು ವಿಪರೀತವಾಗಿ ಏರಿಕೆಯಾಗುತ್ತಿದೆ. ಭಾರತೀಯರ ಈ ಕೆಟ್ಟ ಅಭ್ಯಾಸವನ್ನು ವಿದೇಶಗಳಲ್ಲಿ ಟೀಕಿಸಲಾಗಿದೆ.

ಆದರೆ ಭಾರತೀಯರು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಹಾರ್ನ್ ಮಾಡುವುದನ್ನು ಮುಂದುವರೆಸುತ್ತಲೇ ಇದ್ದಾರೆ. ಇನ್ನು ಮುಂದೆ ಹಾರ್ನ್ ಮಾಡುವ ಮುನ್ನ ಎಚ್ಚರ ವಹಿಸಿ. ನೀವು ಮಾಡುವ ಹಾರ್ನ್‍ನಿಂದ ಸಿಗ್ನಲ್‍ನಲ್ಲಿರುವ ದೀಪದ ಮೇಲೆ ಪರಿಣಾಮ ಬೀರುತ್ತದೆ.

ಸಿಗ್ನಲ್‍ನಲ್ಲಿರುವ ದೀಪವು ಹಾರ್ನ್ ಮಾಡಿದ ತಕ್ಷಣ ಕೆಂಪು ಬಣ್ಣಕ್ಕೆ ತಿರುಗುತ್ತದೆಯೇ ಪರಿಶೀಲಿಸಿ. ಇದು ವಿಚಿತ್ರವಾದರೂ ಸತ್ಯ. ಇದುವರೆಗೂ ವಿನಾಕಾರಣ ಹಾರ್ನ್ ಮಾಡುವುದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಪೊಲೀಸ್ ಇಲಾಖೆ, ಈ ವಿಷಯವನ್ನು ಈಗ ಗಂಭೀರವಾಗಿ ಪರಿಗಣಿಸಿದೆ.

ಬಹುತೇಕ ವಾಹನ ಸವಾರರಿಗೆ ಈ ವಿಷಯ ತಿಳಿದಿಲ್ಲ. ಮುಂಬೈ ಪೊಲೀಸ್ ಇಲಾಖೆಯು ಹೊಸ ಯೋಜನೆಯೊಂದಕ್ಕೆ ಕೈ ಹಾಕಿದೆ. ಮುಂಬೈ ಮಹಾನಗರದಲ್ಲಿ ವಾಹನಗಳು ವಿಪರೀತ ಸಂಖ್ಯೆಯಲ್ಲಿವೆ. ಮುಂಬೈ ಅನ್ನು ವಿಶ್ವದ ಹಾರ್ನ್ ನಗರವೆಂದು ಕರೆಯಲಾಗುತ್ತದೆ.

ವಿಪರೀತವಾಗಿ ಮಾಡಲಾಗುವ ಹಾರ್ನ್‍ನಿಂದಾಗಿ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ವಿನಾಕಾರಣ ಹಾರ್ನ್ ಮಾಡುವ ಕೇವಲ 1,293 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆಯೆಂಬ ಸಂಗತಿ ಆರ್‍ಟಿಐನಿಂದ ಹೊರಬಿದ್ದಿದೆ.

ಇದರಿಂದಾಗಿ ಈ ವಿಷಯವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದಿರುವುದು ಕಂಡು ಬರುತ್ತದೆ. ಈಗ ಮುಂಬೈ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಇದನ್ನು ತಡೆಗಟ್ಟಲು ವಿವಿಧ ಯೋಜನೆಗಳನ್ನು ಆರಂಭಿಸಿದ್ದಾರೆ.

ಇದರಲ್ಲಿ ಅವಶ್ಯಕತೆಯಿಲ್ಲದೆ ಹಾರ್ನ್ ಮಾಡಿದರೆ ಟ್ರಾಫಿಕ್ ಸಿಗ್ನಲ್‍ಗಳ ಸಹಾಯದಿಂದ ಹಾರ್ನ್ ಮಾಡಿದವರನ್ನು ಶಿಕ್ಷಿಸಲಾಗುವುದು. ಇದಕ್ಕಾರಿ ಮುಂಬೈನ ವಿವಿಧ ಸಿಗ್ನಲ್‍ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಹೊಸ ಯೋಜನೆಗೆ ಪನಿಶಿಂಗ್ ಸಿಗ್ನಲ್ ಎಂದು ಹೆಸರಿಡಲಾಗಿದ್ದು, ಕಳೆದ ಶುಕ್ರವಾರ ಈ ಯೋಜನೆಯನ್ನು ಆರಂಭಿಸಲಾಗಿದೆ.

ಮುಂಬೈನ ಮರೀನ್ ಡ್ರೈವ್, ಬೆದರ್ ರೋಡ್ ಹಾಗೂ ಬಾಂದ್ರಾಗಳಲ್ಲಿರುವ ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಡೆಸಿಬಲ್ ಮೀಟರ್‍ಗಳನ್ನು ಅಳವಡಿಸಲಾಗಿದೆ. ವಾಹನ ಸವಾರರು ಒಂದೇ ಸಮನೇ ಹಾರ್ನ್ ಮಾಡಿದರೆ, ಆ ಹಾರ್ನ್ 85 ಡೆಸಿಬಲ್ ವ್ಯಾಪ್ತಿಯನ್ನು ಮೀರಿದರೆ ಸಿಗ್ನಲ್ ಲೈಟ್ ರಿ ಸೆಟ್ ಆಗುತ್ತದೆ.

ರಿ ಸೆಟ್ ಆದ ನಂತರ ಕೆಲವು ಸಮಯದವರೆಗೆ ಅಂದರೆ 2 ಸೆಕೆಂಡುಗಳವರೆಗೆ ಕೆಂಪು ದೀಪವು ಉರಿಯಲಿದೆ. ಇದರಿಂದಾಗಿ ವಾಹನ ಸವಾರರು ಮತ್ತೆ 2 ಸೆಕೆಂಡುಗಳು ಕಾಲ ಹೆಚ್ಚುವರಿಯಾಗಿ ಸಿಗ್ನಲ್‍ನಲ್ಲಿ ಕಾಯಬೇಕಾಗುತ್ತದೆ. ಮುಂಬೈ ಪೊಲೀಸರ ಈ ಹೊಸ ಯೋಜನೆಗೆ ನಾಗರೀಕರು ಮೆಚ್ಚುಗೆ ಸೂಚಿಸಿದ್ದಾರೆ.

ಯಾರೊಬ್ಬರೂ ಈ ಯೋಜನೆಯನ್ನು ಟೀಕಿಸದಿದ್ದರೂ, ಕೆಲವರು ಈ ಯೋಜನೆಯ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಆಂಬ್ಯುಲೆನ್ಸ್ ಹಾಗೂ ಫೈರ್ ಟ್ರಕ್‍ಗಳ ಸೈರನ್‍ನಿಂದ ಉಂಟಾಗುವ ಶಬ್ದದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದರ ಬಗ್ಗೆ ಮುಂಬೈ ಪೊಲೀಸರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.


Click it and Unblock the Notifications