ಮೈಸೂರು - ಚೆನ್ನೈ ಬುಲೆಟ್ ಟ್ರೈನ್, ವಿಮಾನಕ್ಕೆ ಸವಾಲೆಸೆಯುವ ವೇಗ.. ಎರಡೂವರೆ ಗಂಟೆ ಸಾಕು!
ಭಾರತದ ಪ್ರಮುಖ ನಗರಗಳಲ್ಲಿ ಕೆಲವೇ ವರ್ಷಗಳಲ್ಲಿ ಬುಲೆಟ್ ರೈಲುಗಳು (Bullet Train) ಸಂಚರಿಸಲಿವೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ರೀತಿಯ ತಯಾರಿ ನಡೆಸುತ್ತಿದೆ. ಮೈಸೂರು-ಚೆನ್ನೈ ನಡುವೆ ಬುಲೆಟ್ ರೈಲು ಹಳಿ ನಿರ್ಮಾಣದ ಕಾಮಗಾರಿಗೆ ಶೀಘ್ರ ಸಮೀಕ್ಷೆ ನಡೆಯಲಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಮೈಸೂರು - ಚೆನ್ನೈ (mysore - chennai) ನಡುವೆ ಬುಲೆಟ್ ರೈಲು ಮಾರ್ಗ ನಿರ್ಮಾಣ ಕಾಮಗಾರಿ ನಡೆಸಲು ಕೆಲವೇ ದಿನಗಳಲ್ಲಿ ವೈಮಾನಿಕ ಸಮೀಕ್ಷೆ (Aerial survey) ಜರುಗಲಿದೆ. ಆ ನಂತರ, ಯೋಜನೆಯ ವಿಸ್ತೃತ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತದೆ. ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್, ದೇಶದ ವಿವಿಧ ನಗರಗಳ ನಡುವೆ ಬುಲೆಟ್ ರೈಲು ಮಾರ್ಗ ಕಾಮಗಾರಿ ಆರಂಭಿಸಲು ಸಿದ್ಧತೆಯನ್ನು ನಡೆಸುತ್ತಿದೆ.

ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಚೆನ್ನೈ ಮಧ್ಯೆ 435 ಕಿಲೋಮೀಟರ್ ಬುಲೆಟ್ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಉಪಗ್ರಹ ಸಮೀಕ್ಷೆ (satellite survey), ಭೂ ಸಮೀಕ್ಷೆ (land survey), ನಕ್ಷೆ (map) ಹಾಗೂ ವೆಚ್ಚದ ಕುರಿತ ವರದಿ ತಯಾರಿಸುವ ಜವಾಬ್ದಾರಿಯನ್ನು 'ಎಎಆರ್‌ವಿಇಇ ಅಸೋಸಿಯೆಟ್ಸ್' ಸಂಸ್ಥೆ ಹೊತ್ತಿದೆ. ಸದ್ಯ, ಕೋಲಾರ ಸಮೀಪ ವೈಮಾನಿಕ ಸಮೀಕ್ಷೆಗೆ ಅನುಕೂಲವಾಗುವಂತೆ ಗುರುತು ಮಾಡಲಾಗಿದೆ.
ಬುಲೆಟ್ ರೈಲುಗಳು 240 - 320 km/h ವೇಗದಲ್ಲಿ ಸಂಚರಿಸುವ ಸಾಧ್ಯತೆಯಿದ್ದು, ಮೈಸೂರು - ಚೆನ್ನೈ ನಡುವೆ ಒಂದೊಮ್ಮೆ ಸಂಚಾರ ಆರಂಭಿಸಿದರೆ, ಪ್ರಯಾಣ ಅವಧಿಯು ಕೇವಲ ಎರಡೂವರೆ ಗಂಟೆ ಇರಲಿದೆ. ಪ್ರಸ್ತುತ, ಬೆಂಗಳೂರಿಂದ ಕಾರ್ಯಾಚರಿಸುವ ವೇಗದ ಶತಾಬ್ದಿ ರೈಲು, ಕನಿಷ್ಠ 5 - 6 ಗಂಟೆಗೆ ಚೆನ್ನೈ ತಲುಪುತ್ತದೆ. ಬುಲೆಟ್ ರೈಲು ಎರಡು ರಾಜ್ಯಗಳ ನಡುವೆ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಯನ್ನು ಉತ್ತೇಜಿಸುತ್ತದೆ.
ಇತ್ತೀಚೆಗೆ, ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಹೈದರಾಬಾದ್ ಬೆಂಗಳೂರು ಹಾಗೂ ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳ ನಡುವೆ ಹೈಸ್ಪೀಡ್ ರೈಲು ಸಂಚಾರಕ್ಕೆ ಯೋಜನೆ ಸಿದ್ದಪಡಿಸಲಾಗುವುದು ಎಂದು ಹೇಳಿದ್ದರು. ನ್ಯಾಷನಲ್ ರೈಲ್ ಪ್ಲಾನ್ (ಎನ್‌ಆರ್‌ಪಿ) ಪ್ರಕಾರ, ಬೆಂಗಳೂರು ಹಾಗೂ ಹೈದರಾಬಾದ್ ನಡುವಿನ 618 ಕಿಲೋಮೀಟರ್ ಉದ್ದದ ಬುಲೆಟ್ ರೈಲು ಸಂಪರ್ಕ ಜಾಲ 2041ರ ವೇಳೆಗೆ ಉದ್ಘಾಟನೆಗೊಳ್ಳಬಹುದು.
ಆ ನಂತರವೇ ಚೆನ್ನೈ - ಬೆಂಗಳೂರು - ಮೈಸೂರು ಮಧ್ಯೆ ಬುಲೆಟ್ ರೈಲು 2051ರಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಇನ್ನುಳಿದಂತೆ, ದೆಹಲಿ - ವಾರಣಾಸಿ, ದೆಹಲಿ - ಅಹಮದಾಬಾದ್, ದೆಹಲಿ - ಅಮೃತಸರ, ಮುಂಬೈ - ನಾಗ್ಪುರ, ವಾರಣಾಸಿ - ಹೌರಾ ನಗರಗಳ ನಡುವೆ ಹೈಸ್ಪೀಡ್ ರೈಲು ಸಂಚರಿಸಲಿದೆ. ಈ ಮೂಲಕ ಪ್ರಮುಖ ನಗರಗಳ ನಡುವೆ ಪ್ರಯಾಣದ ಅವಧಿಯು ತುಂಬಾ ಕಡಿಮೆಯಾಗಲಿದೆ.
ಜಪಾನ್ ಸರ್ಕಾರದ ಸಹಯೋಗದಲ್ಲಿ ಕೇಂದ್ರ ಸರ್ಕಾರ, ಮುಂಬೈ - ಅಹಮದಾಬಾದ್ ನಗರಗಳ ನಡುವೆ ಬುಲೆಟ್ ರೈಲು ಯೋಜನೆಯನ್ನು ಕೈಗೊಳ್ಳುತ್ತಿದ್ದು, 2027ರ ವೇಳೆಗೆ ಅದು ಸಂಚಾರಕ್ಕೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಸದ್ಯ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೈಸ್ವೀಡ್ ರೈಲಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟ ನಡೆಸುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಇದರ ವೇಗವನ್ನು 160 km/h ಸೀಮಿತಗೊಳಿಸಲಾಗಿದೆ.
ಇನ್ನು, ಮೈಸೂರು - ಚೆನ್ನೈ ನಡುವೆ ಬುಲೆಟ್ ಹಳಿ ನಿರ್ಮಾಣದ ಕಾಮಗಾರಿಗೆ ಶೀಘ್ರ ಸಮೀಕ್ಷೆ ನಡೆಸಲು ಅಗತ್ಯ ಸಿದ್ಧತೆ ನಡೆಸುತ್ತಿದೆ. ಈ ರೈಲು ಕಾರ್ಯಚರಣೆಯನ್ನು ಶುರು ಮಾಡಿದ ಮೇಲೆ, ಎರಡು ನಗರಗಳ ನಡುವಿನ 435 ಕಿಲೋಮೀಟರ್ ದೂರ ಕ್ರಮಿಸಲು ಕೇವಲ ಎರಡೂವರೆ ಗಂಟೆ ಹಿಡಿಯಲಿದ್ದು, ಈ ಬುಲೆಟ್ ರೈಲಿಗಾಗಿ ಹಲವು ವರ್ಷಗಳು ಕಾಯಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications