Vande Bharat: ಮೈಸೂರಿನಲ್ಲಿ ಕಾಫಿ ಕುಡಿದು ರೈಲು ಹತ್ತಿದರೆ ಚೆನ್ನೈನಲ್ಲಿ ಊಟ ಮಾಡಬಹುದು.. 6.25 ಗಂಟೆ ಪ್ರಯಾಣ
ಕರ್ನಾಟಕವು ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express), ವೇಗದ ರೈಲಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಶುಕ್ರವಾರದಿಂದ ಮೈಸೂರು ಹಾಗೂ ಚೆನ್ನೈ ನಡುವೆ ಎರಡನೇ ವಂದೇ ಭಾರತ್ ರೈಲಿನ ಓಡಾಟ ಶುರುವಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಈ ರೈಲಿಗೆ ಹಸಿರು ನಿಶಾನೆಯನ್ನು ತೋರಿಸಿದ್ದರು. ಮೈಸೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿರ್ವಹಣೆ ಮಾಡಲು ಅಗತ್ಯ ಸೌಲಭ್ಯಗಳಿಲ್ಲದ ಕಾರಣ, ಬುಧವಾರ ಹೊರತುಪಡಿಸಿ ಮಾರ್ಚ್ 14 ರಿಂದ ಏಪ್ರಿಲ್ 4 ರವರೆಗೆ ಎಸ್ಎಂವಿಟಿ ಬೆಂಗಳೂರು ಹಾಗೂ ಚೆನ್ನೈ ಸೆಂಟ್ರಲ್ ನಡುವೆ ಮಾತ್ರ ಸಂಚಾರವನ್ನು ನಡೆಸಿತ್ತು.

ಶುಕ್ರವಾರದಿಂದ (ಏ.5) ಈ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20663/ 20664) ಮೈಸೂರು ಮತ್ತು ಚೆನ್ನೈ ಸೆಂಟ್ರಲ್ ಮಧ್ಯೆ ಕೆಎಸ್‌ಆರ್ ಬೆಂಗಳೂರು ಮಾರ್ಗವಾಗಿ ಓಡಾಟವನ್ನು ಪ್ರಾರಂಭಿಸಿದೆ. 'ಮೈಸೂರು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿನ ನಿರ್ವಹಣೆಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ' ಎಂದು ನೈಋತ್ಯ ರೈಲ್ವೆ (SWR) ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 6 ಗಂಟೆಗೆ ಮೈಸೂರಿನಿಂದ ಹೊರಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಮಂಡ್ಯ, ಕೆಎಸ್ಆರ್ ಬೆಂಗಳೂರು, ಕೆಆರ್ ಪುರಂ ಮತ್ತು ಕಟಪಾಡಿ ನಿಲ್ದಾಣಗಳಲ್ಲಿ ನಿಲುಗಡೆಯಾಗಿ ಮಧ್ಯಾಹ್ನ 12.25ರ ಸುಮಾರಿಗೆ ಚೆನ್ನೈ ಸೆಂಟ್ರಲ್ ತಲುಪುತ್ತದೆ. ಅಲ್ಲಿಂದ ಸಂಜೆ 5 ಗಂಟೆಗೆ ಸಂಚಾರವನ್ನು ಶುರು ಮಾಡಲಿದ್ದು, ರಾತ್ರಿ 11.20ಕ್ಕೆ ಮೈಸೂರಿಗೆ ಬರುತ್ತದೆ.

ಈ ರೈಲು ಏಪ್ರಿಲ್ 5 ರಿಂದ ಜುಲೈ 29 ರ ನಡುವೆ ಬುಧವಾರದಂದು ಕಾರ್ಯಚರಣೆಯನ್ನು ನಡೆಸುವುದಿಲ್ಲ. ಜುಲೈ 30 ರಿಂದ ಪ್ರತಿ ಗುರುವಾರ ಓಡಾಟವನ್ನು ಮಾಡುವುದಿಲ್ಲ. ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಚಾರದಿಂದ ಎರಡು ನಗರಗಳ ನಡುವೆ ಓಡಾಡುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಅದರಲ್ಲೂ ಪ್ರವಾಸಿಗರಿಗೆ ತುಂಬಾ ನೆರವಾಗುತ್ತದೆ.
ಮೈಸೂರು ಮತ್ತು ಚೆನ್ನೈ ಮಧ್ಯೆ ಸಂಚರಿಸುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20607/20608), ನವೆಂಬರ್ 2022 ರಿಂದ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇದು ಚೆನ್ನೈ ಸೆಂಟ್ರಲ್‌ನಿಂದ ಬೆಳಗ್ಗೆ 5.50ಕ್ಕೆ ಹೊರಟು ಮಧ್ಯಾಹ್ನ 12.20ಕ್ಕೆ ಮೈಸೂರಿಗೆ ಬರುತ್ತದೆ. ಇಲ್ಲಿಂದ ಮಧ್ಯಾಹ್ನ 1.05ಕ್ಕೆ ಹೊರಟು ರಾತ್ರಿ 7.20ಕ್ಕೆ ಚೆನ್ನೈ ಸೆಂಟ್ರಲ್‌ಗೆ ತೆರಳುತ್ತದೆ.

ಈ ರೈಲುಗಳು ಮಾತ್ರವಲ್ಲದೆ, ಕರ್ನಾಟಕದ ಇತರೆ ಮಾರ್ಗಗಳಾದ ಬೆಂಗಳೂರು - ಕೊಯಮತ್ತೂರು, ಬೆಂಗಳೂರು - ಹುಬ್ಬಳ್ಳಿ - ಧಾರವಾಡ ಹಾಗೂ ಯಶವಂತಪುರ (ಬೆಂಗಳೂರು) - ಕಾಚಿಗುಡ (ಹೈದರಾಬಾದ್), ಮಂಗಳೂರು - ಮಡಗಾಂವ್ ನಡುವೆಯು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಚರಣೆಯನ್ನು ನಡೆಸುತ್ತಿವೆ. ಇವುಗಳಲ್ಲಿ ಪ್ರಯಾಣಿಕರಿಗೆ ವಿಮಾನದಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಸಂಪೂರ್ಣ ಹವಾನಿಯಂತ್ರಿತ ಬೋಗಿಯನ್ನು ಹೊಂದಿರುವ ವಂದೇ ಭಾರತ್ ಎಕ್ಸ್‌ಪ್ರೆಸ್, ಗರಿಷ್ಠ ವೇಗದಲ್ಲಿ ಸಂಚರಿಸುವ ಮೂಲಕ ಪ್ರಯಾಣಿಕರನ್ನು ವೇಗವಾಗಿ ಗಮ್ಯ ಸ್ಥಾನವನ್ನು ತಲುಪಿಸುತ್ತದೆ. ಸ್ವಯಂಚಾಲಿತ ಬಾಗಿಲು, ಆರಾಮದಾಯಕ ಆಸನಗಳು ಜೈವಿಕ ಶೌಚಾಲಯ, ಅಗ್ನಿ ನಿರೋಧಕ ಸಾಧನಗಳು, ವೈಫೈ ವ್ಯವಸ್ಥೆಯನ್ನು ಹೊಂದಿದ್ದು, ಈ ಮೂಲಕ ಜನರು ಸುಲಭವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications