41 ವರ್ಷಗಳ ಬಳಿಕ ನಮ್ಮ ಹೆಮ್ಮೆಯ ಯೋಧ ಬಾಹ್ಯಾಕಾಶಕ್ಕೆ.. ಇದು ದೇಶಕ್ಕೆ ಹೆಮ್ಮೆ
ಗಗನಯಾನವೆಂಬುದು ಒಂದು ಕನಸು. ಅಂತಹ ಬಹುವರ್ಷಗಳ ಕನಸೊಂದನ್ನು ನಮ್ಮ ದೇಶದ ಹೆಮ್ಮೆಯ ಯೋಧರೊಬ್ಬರು ನನಸು ಮಾಡಿದ್ದಾರೆ. ನಾಸಾ, ಇಸ್ರೋ, ಆ್ಯಕ್ಸಿಯಂ ಸ್ಪೇಸ್ ಹಾಗೂ ಸ್ಪೇಸ್‌ಎಕ್ಸ್‌ನ ಒಡಂಬಡಿಕೆಯ ಭಾಗವಾಗಿ, ಆ್ಯಕ್ಸಿಯಂ 4 (Axiom 4) ಮಿಷನ್‌ನಡಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಬಾಹ್ಯಾಕಾಶ ಯಾನವನ್ನು ಕೈಗೊಂಡಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಫಾಲ್ಕನ್-9 (Falcon-9) ಹೆಸರಿನ ರಾಕೆಟ್‌ನಲ್ಲಿ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಶುಭಾಂಶು ಶುಕ್ಲಾ ಅವರು, ಆ್ಯಕ್ಸಿಯಂ 4 ಮಿಷನ್‌ನಡಿ 15 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಲಿದ್ದಾರೆ. ಅಲ್ಲಿ ಹಲವು ಪ್ರಯೋಗಗಳನ್ನು ನಡೆಸಲಿದ್ದಾರೆ. ಶುಭಾಂಶು ಅವರೊಂದಿಗೆ ಅಮೆರಿಕದ ಪೆಗ್ಗಿ ವಿಟ್ಸನ್, ಪೊಲೆಂಡ್‌ನ ಸ್ಲಾವೋಜ್ ಉಜ್ನಾನ್ಸ್ಕಿ ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಕೂಡ ಅಂತರಿಕ್ಷಕ್ಕೆ ತೆರಳಿದ್ದಾರೆ.

ಇದರೊಂದಿಗೆ 39ರ ಹರೆಯದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಬಾಹ್ಯಾಕಾಶ ಯಾನ ಕೈಗೊಂಡ 2ನೇ ಭಾರತೀಯ ಗಗನಯಾನಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಈ ಮೊದಲು ಅಂದರೆ ಬರೋಬ್ಬರಿ 41 ವರ್ಷಗಳ ಹಿಂದೆ, 1984ರಲ್ಲಿ ರಷ್ಯಾದ ಅಂತರಿಕ್ಷ ನೌಕೆಯಲ್ಲಿ ಭಾರತದ ರಾಕೇಶ್ ಶರ್ಮಾ ಗಗನಯಾತ್ರೆ ಮಾಡಿದ್ದರು.
ಶುಭಾಂಶು ಶುಕ್ಲಾ ಹಿನ್ನೆಲೆ ಏನು?
1985ರಲ್ಲಿ ಜನಿಸಿದ ಶುಭಾಂಶು ಶುಕ್ಲಾ ಅವರು ಮೂಲತಃ ಉತ್ತರ ಪ್ರದೇಶದ ಲಕ್ನೋದವರು. ಅಲಿಗಂಜ್‌ನ ಸಿಟಿ ಮಾಂಟೆಸ್ಸರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದರು. ಆ ಬಳಿಕ, ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ (ಎನ್‌ಡಿಎ) ಬಿಎಸ್‌ಸಿ ಪದವಿ ಪಡೆದು, 2006ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡದ್ದರು.

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅನುಭವಿ ಪೈಲೆಟ್ ಆಗಿದ್ದು, ಸರಿ ಸುಮಾರು 2,000 ಗಂಟೆಗಳ ವಿಮಾನ ಹಾರಾಟದ ಅನುಭವವನ್ನು ಹೊಂದಿದ್ದಾರೆ. ಸುಖೋಯ್ 30 ಎಂಕೆಐ, ಮಿಗ್-21, ಮಿಗ್-29, ಜಾಗ್ವಾರ್ ಮತ್ತು ಡಾರ್ನಿಯರ್ 228 ಸೇರಿದಂತೆ ವಿವಿಧ ಯುದ್ಧ ವಿಮಾನಗಳನ್ನು ಚಲಾಯಿಸಿದ್ದಾರೆ.
ಶುಭಾಂಶು ಶುಕ್ಲಾ ಅವರಿಗೆ ಗಣ್ಯಾತಿ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು, 1.40 ಕೋಟಿ ಭಾರತೀಯರ ಆಶಯ, ಭರವಸೆ ಹಾಗೂ ಆಕಾಂಕ್ಷೆಗಳನ್ನು ತಮ್ಮೊಂದಿಗೆ ಹೊತ್ತಿದ್ದಾರೆ. ಅವರಿಗೆ ಮತ್ತು ಇತರೆ ಗಗನಯಾತ್ರಿಗಳಿಗೆ ಎಲ್ಲ ರೀತಿಯಲ್ಲೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ' ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಶುಭಾಂಶು ಶುಕ್ಲಾ ಅಂತರಿಕ್ಷ ಯಾನ ಕೈಗೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಮುಂಬರುವ ವರ್ಷಗಳಲ್ಲಿ ಭಾರತದ ನೆಲದಿಂದಲೇ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಇಸ್ರೋ ಸಹ ಕಾರ್ಯಪ್ರವೃತವಾಗಿದೆ. ಅತಿ ಶೀಘ್ರದಲ್ಲೇ ಅದು ಸಾಕಾರಗೊಳ್ಳುವ ನಿರೀಕ್ಷೆಯಿದೆ.


Click it and Unblock the Notifications








