ಶರವೇಗದಲ್ಲಿ ನೆಲಮಂಗಲ-ತುಮಕೂರು ಹೈವೇ ಕಾಮಗಾರಿ.. ಲೋಕಾರ್ಪಣೆ ಯಾವಾಗ? ಯಾರಿಗೆಲ್ಲ ಲಾಭ
ನೆಲಮಂಗಲ (Nelamangala) ಹಾಗೂ ತುಮಕೂರು (Tumakuru) ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48 (National Highway 48), ರಾಜಧಾನಿ ಬೆಂಗಳೂರನ್ನು ಹಲವು ಜಿಲ್ಲೆಗಳೊಂದಿಗೆ ಬೆಸೆಯುತ್ತದೆ. ಆದರಿದು 4 ಪಥದ ರಸ್ತೆಯಾಗಿದ್ದು, ವಾಹನ ದಟ್ಟಣೆ ಹೇರಳವಾಗಿದೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರಯಾಣಿಸುವುದು ತೀರಾ ಕಷ್ಟ ಕೆಲಸವಾಗಿದೆ. 2022ರ ಆಗಸ್ಟ್ ತಿಂಗಳಲ್ಲಿ ಈ ರಸ್ತೆಯನ್ನು ವಿಸ್ತರಿಸುವ ಯೋಜನೆಯು ಆರಂಭವಾಗಿತ್ತು. ಅದರ ಹೊರತಾಗಿ ಕಾಮಗಾರಿಯು ಪೂರ್ಣ ಪ್ರಮಾಣದಲ್ಲಿ ಶುರುವಾಗದೇ ನೆನೆಗುದಿಗೆ ಬಿದಿತ್ತು. ಸದ್ಯ, ಹೆದ್ದಾರಿ ಅಭಿವೃದ್ಧಿಗೆ ವೇಗ ದೊರೆತಿದೆ.
ನೆಲಮಂಗಲ-ತುಮಕೂರು ಹೆದ್ದಾರಿಯ ಮರುನಿರ್ಮಾಣದ ಜವಾಬ್ದಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಹೊತ್ತಿದೆ. 2026ರ ಜೂನ್ ವೇಳೆಗೆ ಸರ್ವಿಸ್ ರಸ್ತೆಯನ್ನು ತೆರೆಯಲು ಉದ್ದೇಶಿಸಿದೆ. ಆ ನಂತರದಲ್ಲಿ ಕಾಮಗಾರಿಯನ್ನು ಮತ್ತಷ್ಟು ತ್ವರಿತಗೊಳಿಸಿ, 2027ರ ಮಾರ್ಚ್‌ನೊಳಗೆ ಹೊಸ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆಯಿದೆ.

ಈ ಮೊದಲು ನೆಲಮಂಗಲ-ತುಮಕೂರು ಹೆದ್ದಾರಿ ಈಗಿರುವ 44 ಉದ್ದದ ರಸ್ತೆಯನ್ನು 6 ಪಥಗಳಿಗೆ ವಿಸ್ತರಿಸಲು 2025ರ ಆಗಸ್ಟ್ ತಿಂಗಳವರೆಗೆ ಗಡುವನ್ನು ನೀಡಲಾಗಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿ ತಡವಾಗಿದೆ. ಈ ವರ್ಷದ ಏಪ್ರಿಲ್‌ನಿಂದ ಮತ್ತೆ ಕಾಮಗಾರಿ ಆರಂಭಗೊಂಡಿದೆ.
ಸದ್ಯ ನೆಲಮಂಗಲದಿಂದ ದಾಬಸ್‌ಪೇಟೆವರೆಗೆ ಹೆದ್ದಾರಿ ನಿರ್ಮಾಣದ ಕೆಲಸಗಳು ಭರದಿಂದ ಸಾಗುತ್ತಿವೆ. ಕೆಲ ಭಾಗದಲ್ಲಿ ಸರ್ವಿಸ್ ರಸ್ತೆ ಪೂರ್ಣಗೊಂಡಿದೆ. ಅಲ್ಲಿ ಮುಖ್ಯರಸ್ತೆಯಿಂದ ವಾಹನಗಳ ಸಂಚಾರವನ್ನು ತಿರುಗಿ, ಕಾಮಗಾರಿಯನ್ನು ನಡೆಸಲಾಗಿದೆ. ಹಲವೆಡೆಗಳಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇದೇ ವೇಗದಲ್ಲಿ ಸಾಗಿದರೆ ಎನ್‌ಹೆಚ್‌ಎಐ ಯೋಜಿಸಿದಂತೆ ನಿಗದಿತ ಅವಧಿಯೊಳಗೆ ಈ ಹೆದ್ದಾರಿ ಉದ್ಘಾಟನೆಗೊಳುವ ನಿರೀಕ್ಷೆಯಿದೆ.
ಹೊಸ ಹೆದ್ದಾರಿ ಲೋಕಾರ್ಪಣೆಗೊಂಡ ನಂತರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರೊಂದಿಗೆ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಬಳ್ಳಾರಿ, ವಿಜಯನಗರ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯವರಿಗೂ ಪ್ರಯೋಜನವಾಗಲಿದೆ. ಪ್ರಯಾಣದ ಅವಧಿಯು ಇಳಿಕೆಯಾಗಲಿದೆ. ಪ್ರವಾಸೋದ್ಯಮ & ಕೈಗಾರಿಕಾ ಕ್ಷೇತ್ರಗಳು ಅಭಿವೃದ್ಧಿಗೊಳ್ಳಲಿವೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯೂ ನಡೆಯುತ್ತಿದೆ:
ಈ ಹೆದ್ದಾರಿಯು ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸಲಿದೆ. ರಾಜ್ಯದಲ್ಲಿ 71 ಕಿಲೋಮೀಟರ್ ಹಾದುಹೋಗಲಿದ್ದು, ಕಾಮಗಾರಿಯು ಪೂರ್ಣಗೊಂಡಿದೆ. ವಾಹನಗಳು ಓಡಾಟ ನಡೆಸುತ್ತಿವೆ. ಆದರೆ, ಆಂಧ್ರ ಮತ್ತು ತಮಿಳುನಾಡಿನ ಹಲವೆಡೆಗಳಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಕೆಲಸಗಳು ಬಾಕಿ ಉಳಿದಿವೆ. ಹೀಗಾಗಿ ನೂತನ ಹೆದ್ದಾರಿ 2026 ಮಾರ್ಚ್ ಅಂತ್ಯದೊಳಗೆ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.
ಹೊಸ ಎಕ್ಸ್‌ಪ್ರೆಸ್‌ವೇ ಉದ್ಯಾನ ನಗರಿ ಬೆಂಗಳೂರಿಗರು ಹಾಗೂ ಕಡಲ ನಗರಿ ಚೆನ್ನೈಗೆ ಸಂಪರ್ಕ ಕೊಂಡಿಯಾಗಿದೆ. ಜೊತೆಗೆ ಈ ರಸ್ತೆಯಿಂದ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಹಾಗೂ ಶ್ರೀಪೆರಂಬದೂರುಗಳ ಜನರಿಗೂ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಲಿದೆ.
ಈ ಎಕ್ಸ್‌ಪ್ರೆಸ್‌ವೇ 262 ಕಿಲೋಮೀಟರ್ ಉದ್ದವಿದೆ. ರೂ.17,000 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದು 4 ಪಥಗಳ ಹೆದ್ದಾರಿಯಾಗಿದೆ. ವಾಹನ ದಟ್ಟಣೆಗೆ ಅಧಿಕಗೊಂಡರೆ, 8 ಪಥಗಳಿಗೆ ವಿಸ್ತರಣೆ ಮಾಡಬಹುದು. ಪ್ರಸ್ತುತ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಚೆನ್ನೈಗೆ ತೆರಳಲು 6 ಗಂಟೆ ಬೇಕಾಗುತ್ತದೆ. ಅದು 3 ಗಂಟೆಗಳಿಗೆ ಇಳಿಕೆಯಾಗುವ ಸಂಭವವಿದೆ.
ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ಕೂಡ ಸಿದ್ಧಗೊಳ್ಳಲಿದೆ:
ಬೆಂಗಳೂರು ಹಾಗೂ ಪುಣೆ ನಗರಗಳ ನಡುವೆ ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಒಪ್ಪಿಗೆ ಸೂಚಿಸಿವೆ. ಕೇಂದ್ರ ಸರ್ಕಾರದ ಅಂತಿಮ ಅನುಮೋದನೆ ಮಾತ್ರ ಬಾಕಿಯಿದೆ ಎಂದು ಈ ಹಿಂದೆ ವರದಿಯಾಗಿತ್ತು. ನೂತನ ಹೆದ್ದಾರಿ ಕರ್ನಾಟಕದ 9 ಹಾಗೂ ಮಹಾರಾಷ್ಟ್ರದ 3 ಜಿಲ್ಲೆಗಳಲ್ಲಿ ಹಾದುಹೋಗಲಿದ್ದು, 700 ಕಿಲೋಮೀಟರ್ ಉದ್ದದ ರಸ್ತೆ ಇದಾಗಿರಲಿದೆ.
ಈ ಹೆದ್ದಾರಿ ನಿರ್ಮಾಣಕ್ಕೆ ರೂ.50,000 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಮೊದಲಿಗೆ 6 ಪಥಗಳಲ್ಲಿ ನಿರ್ಮಾಣಗೊಳ್ಳಲಿದೆ. ಆ ಬಳಿಕ 8 ಪಥಗಳಿಗೆ ವಿಸ್ತರಣೆ ಮಾಡಬಹದು. 2028ರಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಈಗಿರುವ 14 ರಿಂದ 15 ಗಂಟೆಗಳ ಪ್ರಯಾಣದ ಅವಧಿಯು 7 ಗಂಟೆಗಳಿಗೆ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications








