Kia: ಮೊದಲ ಬಾರಿಗೆ ಅಪಘಾತಕ್ಕೆ ತುತ್ತಾದ ಹೊಸ ಕಿಯಾ ಸೆಲ್ಟೋಸ್, ಸುರಕ್ಷತೆಗೆ ಸರಿಸಾಟಿಯಿಲ್ಲ.. ಪ್ರಯಾಣಿಕರು ಸೇಫ್!
ಭಾರತದ ಕಾರು ಮಾರುಕಟ್ಟೆಗೆ ದಕ್ಷಿಣ ಕೊರಿಯಾದ ಕಿಯಾ (Kia), 2019ರಲ್ಲಿ ಪ್ರವೇಶಿಸಿತ್ತು. ಅಂದಿನಿಂದಲೇ ಕಂಪನಿ, ವಾಹನಗಳು ದೊಡ್ಡಮಟ್ಟದಲ್ಲಿ ಜನಪ್ರಿಯತೆಗಳಿಸಿದ್ದವು. ಇತ್ತೀಚೆಗೆ ಗ್ರಾಹಕರ ಬೇಡಿಕೆಯನ್ನು ಪೂರೈಸಲು, ನವೀಕರಿಸಿದ ಕಿಯಾ ಸೆಲ್ಟೋಸ್ (facelifted Kia Seltos) ಬಿಡುಗಡೆಗೊಳಿಸಲಾಗಿತು. ಇದು, ವಿನ್ಯಾಸ, ಸುರಕ್ಷತೆಯ ದೃಷ್ಟಿಯಿಂದ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.
ಸದ್ಯ, ಹೊಸ ಫೇಸ್‌ಲಿಫ್ಟ್ ಕಿಯಾ ಸೆಲ್ಟೋಸ್ ಎಸ್‌ಯುವಿ ಅಪಘಾತಕ್ಕೆ ತುತ್ತಾಗಿದೆ ಎಂದು ವರದಿಯಾಗಿದೆ. ಪ್ರತೀಕ್ ಸಿಂಗ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೊ ಹಂಚಿಕೊಳ್ಳಲಾಗಿದೆ. ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಈ ಅಪಘಾತ ನಡೆದಿದೆ. ಬಿಳಿ ಬಣ್ಣದ ಸೆಲ್ಟೋಸ್ ಕಾರು ಇದಾಗಿದ್ದು, ರಸ್ತೆಯ ಡಿವೈಡರ್‌ಗೆ ಡಿಕ್ಕಿಯಾಗಿ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಈ ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕಾರು, ಅತಿವೇಗದಲ್ಲಿದ್ದ ಕಾರಣ, ಘಟನೆ ನಡೆದಿರಬಹುದು. ಇಲ್ಲವೇ, ರಸ್ತೆಯಲ್ಲಿ ಯಾರನ್ನಾದರೂ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಡಿವೈಡರ್‌ಗೆ ಗುದ್ದಿರಬಹುದು. ಅಪಘಾತದ ರಭಸಕ್ಕೆ ಹೆಡ್‌ಲೈಟ್, ಬಂಪರ್, ಹುಡ್, ಗ್ರಿಲ್ ಹಾಗೂ ರೇಡಿಯೇಟರ್ ಸೇರಿದಂತೆ ಎಸ್‌ಯುವಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಪಿಲ್ಲರ್ ಹಾಗೂ ರೂಫ್ ಭಾಗಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ.
ಅಪಘಾತ ನಡೆದಾಗ ಈ ಕಾರಿನ ಏರ್ ಬ್ಯಾಗ್ ಕೂಡ ತೆರೆದುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಜೊತೆಗೆ, ಇದು ನವೀಕರಿಸಿದ ಕಿಯಾ ಸೆಲ್ಟೋಸ್ ಎಸ್‌ಯುವಿಯ ಜಿಟಿಎಕ್ಸ್ ಪ್ಲಸ್ ರೂಪಾಂತರವೆಂಬಂತೆ ತೋರುತ್ತಿದೆ. ಹಳೆಯ ಸೆಲ್ಟೋಸ್ ಗ್ಲೋಬಲ್ ಎನ್‌ಸಿಎಪಿ ಸೇಫ್ಟಿ ಪರೀಕ್ಷೆಯಲ್ಲಿ 3 ಸ್ಟಾರ್ ರೇಟಿಂಗ್ ಗಳಿಸಿತ್ತು ಎಂಬುದು ಗಮನಿಸಬೇಕಾದ ಅಂಶವಾಗಿದೆ. ಇತ್ತೀಚೆಗೆ, ಬಿಡುಗಡೆಯಾಗಿರುವ ಫೇಸ್‌ಲಿಫ್ಟ್ ಕಿಯಾ ಸೆಲ್ಟೋಸ್ ಸುರಕ್ಷತೆಯ ದೃಷ್ಟಿಯಿಂದ ಸಾಕಷ್ಟು ಅತ್ಯಾಧುನಿಕವಾಗಿದೆ.

ಫೇಸ್‌ಲಿಫ್ಟ್ ಕಿಯಾ ಸೆಲ್ಟೋಸ್ ಎಸ್‌ಯುವಿಯನ್ನು ಸುರಕ್ಷತೆಯ ವಿಚಾರದಲ್ಲಿ ಬೇರೆ ಯಾವುದೇ ಕಂಪನಿಗಳು ಹಿಂದಿಕ್ಕಲು ಸಾಧ್ಯವೇ ಇಲ್ಲ ಎಂದು ಹೇಳಬಹುದು. ಈ ಕಾರು, ಸುಧಾರಿತ ADAS (ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ತನ್ಸ್ ಸಿಸ್ಟಮ್), 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), VSM (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಒಳಗೊಂಡಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ದೇಶೀಯ ಮಾರುಕಟ್ಟೆಯಲ್ಲಿ ಈ ಕಾರು, ರೂ10.90 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಎಚ್‌ಟಿಇ, ಎಚ್‌ಟಿಕೆ ಸೇರಿದಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ದೊರೆಯುತ್ತದೆ. ಇದು, ಮೂರು ಎಂಜಿನ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, 1.5-ಲೀಟರ್ ಪೆಟ್ರೋಲ್ ಎಂಜಿನ್, 1.5-ಲೀಟರ್ GDi ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್. ಜೊತೆಗೆ ಮ್ಯಾನುವಲ್, ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.
ಫೇಸ್‌ಲಿಫ್ಟ್ ಕಿಯಾ ಸೆಲ್ಟೋಸ್ ಎಸ್‌ಯುವಿ, ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಪೇನ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ಆಕರ್ಷಕ ಫೀಚರ್ಸ್ ಇವೆ.
ಈ ಕಾರಿನ ಮೈಲೇಜ್ ವಿಷಯವಾಗಿ ಹೇಳುವುದಾದರೆ, ರೂಪಾಂತರಗಳಿಗೆ ಅನುಗುಣವಾಗಿ 17.7 kmpl ರಿಂದ 20.7 kmpl ಇಂಧನ ದಕ್ಷತೆ ಹೊಂದಿದೆ. ಹುಂಡೈ ಕ್ರೆಟಾ ಹಾಗೂ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಇನ್ನು, ಫೇಸ್‌ಲಿಫ್ಟ್ ಕಿಯಾ ಸೆಲ್ಟೋಸ್ ಅಪಘಾತಕ್ಕೆ ಒಳಗಾಗಿ, ಮುಂಭಾಗ ಸಂಪೂರ್ಣ ಜಖಂಗೊಂಡರೂ ಪ್ರಯಾಣಿಕರು ಸೇಫ್ ಆಗಿರುವುದು ಅದರ ನಿರ್ಮಾಣ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications