ಸೀರೆ ಖರೀದಿಸಲು ಬಿಗಿ ಭದ್ರತೆ: ಟ್ರಾಫಿಕ್ ಜಾಮ್... ಯಾರೆಂದು ತಿಳಿದರು ಭಯವಿಲ್ಲದೆ ಪ್ರಶ್ನಿಸಿದ ಮಹಿಳೆ!
ಭಾರತದ ಅತ್ಯಂತ ಶ್ರೀಮಂತ ಕುಟುಂಬ, ದೇಶದಲ್ಲಿ ಇನ್ಯಾವುದೇ ಕುಟುಂಬಕ್ಕೆ ಸಿಗದಂತಹ ಭದ್ರತೆ, ಲೆಕ್ಕ ಸಿಗದಷ್ಟು ದುಬಾರಿ ಕಾರುಗಳು ಹಾಗೂ ವಿಮಾನಗಳು, ಏನೇ ಮಾಡಿದ್ರೂ ಸುದ್ದಿಯಾಗುತ್ತಾರೆ. ಯಾರು ಗೊತ್ತಾ? ಅದೇ ಅಂಬಾನಿ ಕುಟುಂಬ. ಇತ್ತೀಚೆಗೆ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿಯವರು ಸುದ್ದಿಯಾಗಿದ್ದಾರೆ. ಬೆಂಗಳೂರಿನಲ್ಲಿ ಸೀರೆಯೊಂದನ್ನು ಖರೀದಿಸಲು ಬಂದಿದ್ದಾಗ ಅವರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ಮಹಿಳೆಯೊಬ್ಬರು ಇದನ್ನು ಪ್ರಶ್ನಿಸಿರುವ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.
ನೀತಾ ಅಂಬಾನಿ ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು, ನಗರದ ಅಂಗಡಿಯೊಂದಕ್ಕೆ ಸೀರೆ ಖರೀದಿಸಲು ಹೋಗಿದ್ದರು. ಇವರು ಒಬ್ಬರೇ ಬಂದರು ಅವರ ಬೆಗಾವಲು ಪಡೆಯಿಂದ ರಸ್ತೆಯು ಕೆಲ ನಿಮಿಷಗಳ ಕಾಲ ಜಾಮ್ ಆಗಿತ್ತು. ದುಬಾರಿ ಕಾರಿನಲ್ಲಿ ಬಂದಿದ್ದ ಅವರಿಗೆ ಬೆಂಗಳೂರಿನಲ್ಲಿ ಸಾಮಾನ್ಯ ದಿನವೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.

ಅಲ್ಲದೇ ಅವರ 10 ಕೋಟಿ ರೂ.ಗಳ ಐಷಾರಾಮಿ ಬುಲೆಟ್ ಪ್ರೂಫ್ ಮರ್ಸಿಡಿಸ್ ಬೆಂಝ್ ಎಸ್600 ಕೂಡ ಗಮನ ಸೆಳೆದಿದೆ. ನೀತಾ ಅಂಬಾನಿ ಅವರಿಗೆ Z+ ಸೆಕ್ಯೂರಿಟಿ ನೀಡಲಾಗಿತ್ತು ಎಂದು ವರದಿಯಾಗಿದೆ. ಇದರಲ್ಲಿ CRPF, ಪೋಲೀಸ್, ರಾಷ್ಟ್ರೀಯ ಭದ್ರತಾ ಪಡೆಯ (ಎನ್ಎಸ್‌ಜಿ) ಕಮಾಂಡೋಗಳು ಸೇರಿದಂತೆ ಒಟ್ಟು 55 ಮಂದಿ ನೀತಾ ಅಂಬಾನಿಯವರಿಗೆ ರಕ್ಷಣೆ ನೀಡುತ್ತಾರೆ ಎನ್ನಲಾಗಿದೆ.
ಸಾಮಾನ್ಯವಾಗಿಯೇ ಬೆಂಗಳೂರಿನಂತಹ ಮಹಾನಗರದಲ್ಲಿ ಪ್ರಭಾವಿ ವ್ಯಕ್ತಿಗಳು ಬಂದಾಗ ಟ್ರಾಫಿಕ್ ಜಾಮ್ ಆಗುತ್ತದೆ. ಸರಿಯಾದ ಮುನ್ಸೂಚನೆಯಿಲ್ಲದೆ ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸಿ ಶಾಪಿಂಗ್ ಮಾಡುವುದರಿಂದ ಟ್ರಾಫಿಕ್ ವಿಪರೀತವಾಗಿ ಹೆಚ್ಚಾಗುತ್ತದೆ. ಇಲ್ಲೂ ಅಂತಹದ್ದೇ ಸನ್ನಿವೇಶ ಅಲ್ಲಿನ ವಾಹನ ಸವಾರರಿಗೆ ಎದುರಾಗಿತ್ತು. ಸಂಚಾರ ಅಸ್ತವ್ಯಸ್ತಗೊಂಡು ಜನರು ಪರದಾಡುವಂತಾಗಿತ್ತು.

ಪ್ರಶ್ನಿಸಿದ ಮಹಿಳೆ: ಅಲ್ಲಿನ ಅಂಗಡಿಯ ಮೂಲಕ ಹಾದುಹೋಗುತ್ತಿದ್ದ ಮಹಿಳೆಯೊಬ್ಬರು, ನೀತಾ ಅಂಬಾನಿಯವರ ಕಾರು ರಸ್ತೆಯನ್ನು ನಿರ್ಬಂಧಿಸಿದ ಬಗ್ಗೆ ಅಸಮಾಧಾನಗೊಂಡಿದ್ದರು. ಅಲ್ಲೇ ಇದ್ದ ಭದ್ರತಾ ಸಿಬ್ಬಂದಿಯೊಬ್ಬರನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಇತರರಿಗೆ ಉಂಟಾದ ಅನಾನುಕೂಲತೆಯಿಂದ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ನೋಡಿದ ಅನೇಕರು ಮಹಿಳೆಯ ಧೈರ್ಯವನ್ನು ಶ್ಲಾಘಿಸುತ್ತಿದ್ದಾರೆ. ನೀತಾ ಅಂಬಾನಿಯಂತಹ ಪ್ರಭಾವಿ ಮಹಿಳೆ ಇರುವಾಗ, ಅವರ ಭದ್ರತೆಗೆ ಹೋಗಿ ಸಂಚಾರ ಅಡಚಣೆಯ ಬಗ್ಗೆ ಪ್ರಶ್ನಿಸಲು ಧೈರ್ಯ ಬೇಕು. "ಭದ್ರತೆ ಮುಖ್ಯ, ಆದರೆ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸುವುದು ನ್ಯಾಯವಲ್ಲ. ಸರಿಯಾದದ್ದಕ್ಕಾಗಿ ನಿಂತಿದ್ದಕ್ಕಾಗಿ ಮಹಿಳೆಗೆ ಹ್ಯಾಟ್ಸ್ ಆಫ್ ಎಂದು ಕಮೆಂಟ್ ಮಾಡಿದ್ದಾರೆ.
ಫೆಬ್ರವರಿ 2021 ರಲ್ಲಿ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಹೊರಗೆ ಬಾಂಬ್ ಬೆದರಿಕೆ ಬಂದ ನಂತರ, ಅವರ 'ಆಂಟಿಲಿಯಾ' ಬಳಿ ಸ್ಫೋಟಕ ತುಂಬಿದ ಎಸ್‌ಯುವಿ ಪತ್ತೆಯಾಗಿತ್ತು. ಇದರಿಂದಾಗಿ ಅವರ ಭದ್ರತೆಯನ್ನು ಹೆಚ್ಚಿಸುವ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದ್ದವು. ಕಳೆದ ವರ್ಷದ ಕೊನೆಯಲ್ಲಿ, ಬೆದರಿಕೆಯ ಬಗ್ಗೆ ಗುಪ್ತಚರ ಮಾಹಿತಿಯ ನಂತರ ಗೃಹ ಸಚಿವಾಲಯವು ಮುಖೇಶ್ ಅಂಬಾನಿ ಅವರ ಭದ್ರತೆಯನ್ನು Z ಶ್ರೇಣಿಯಿಂದ Z+ ವರ್ಗಕ್ಕೆ ನವೀಕರಿಸಿತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications