ದಕ್ಷಿಣದ ಈ ರಾಜ್ಯಗಳಿಗೆ 2,200 ಕೋಟಿ ರೂ. ಯೋಜನೆಗಳನ್ನು ಘೋಷಿಸಿದ ನಿತಿನ್ ಗಡ್ಕರಿ
ಅಮೆರಿಕಾವನ್ನು ಮೀರಿಸುವಂತಹ ಹೆದ್ದಾರಿಗಳನ್ನು ಭಾರತದಲ್ಲಿ ನಿರ್ಮಾಣ ಮಾಡುವುದಾಗಿ ಪಣತೊಟ್ಟಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು, ಈಗ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಿಗೆ ಭಾರೀ ಮೊತ್ತವನ್ನು ಮಂಜೂರು ಮಾಡುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಅವರು ಕೈಗೆತ್ತಿಗೊಂಡಿರುವ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈಗ ದಕ್ಷಿಣ ಭಾರತದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅನೇಕ ಯೋಜನೆಗಳಿಗೆ 2,200 ಕೋಟಿ ರೂ. ಮಂಜೂರು ಮಾಡುವುದಾಗಿ ಸೋಮವಾರ ಘೋಷಿಸಿದ್ದಾರೆ.
ಗೋವಾದಲ್ಲಿ, ರಾಷ್ಟ್ರೀಯ ಹೆದ್ದಾರಿ 748 ರಲ್ಲಿ ಪೊಂಡಾದಿಂದ ಭೋಮಾವರೆಗಿನ 9.6 ಕಿ.ಮೀ ಉದ್ದದ ಚತುಷ್ಪಥ ನಿರ್ಮಾಣಕ್ಕೆ 557 ಕೋಟಿ ರೂ. ಮಂಜೂರು ಮಾಡಲಾಗುವುದು. ಇದು ಪಣಜಿ ಮತ್ತು ಪೊಂಡಾದ ಪ್ರಮುಖ ಪಟ್ಟಣಗಳ ನಡುವೆ ಸಂಪರ್ಕವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚುವರಿಯಾಗಿ, ಈ ಯೋಜನೆಯು ಕರ್ನಾಟಕದಿಂದ ಅಂತರರಾಜ್ಯ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.

ಅಲ್ಲದೆ ರಾಷ್ಟ್ರೀಯ ಹೆದ್ದಾರಿ 566 ಮತ್ತು ಎನ್ಎಚ್ 66ರ ಮೂಲಕ ದಾಬೋಲಿಮ್ ವಿಮಾನ ನಿಲ್ದಾಣ ಮತ್ತು ಮೊರ್ಮುಗಾವೊ ಬಂದರಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಉಳಿದಂತೆ ಈ ವಿಭಾಗವು ಖಂಡೇಪರ್‌ನ ಪಕ್ಕದ ನಾಲ್ಕು ಪಥದ ವಿಭಾಗಗಳಾದ ಪೊಂಡಾ ಮತ್ತು ರಿಬಂದರ್ ಬೈಪಾಸ್ ನಡುವಿನ ಕಾಣೆಯಾದ ನಾಲ್ಕು ಪಥದ ಸಂಪರ್ಕವನ್ನು ಪ್ರತಿನಿಧಿಸುತ್ತದೆ.
ಪ್ರಸ್ತುತ ವಿಸ್ತರಣೆಯು ಗಮನಾರ್ಹ ದಟ್ಟಣೆ ಮತ್ತು ಆಗಾಗ್ಗೆ ಅಪಘಾತಗಳಿಂದ ಬಳಲುತ್ತಿದೆಯಾದರೂ, ಹೊಸ ಚತುಷ್ಪಥವು ಸಂಚಾರವನ್ನು ಸರಾಗಗೊಳಿಸುವುದಲ್ಲದೇ, ಆ ಪ್ರದೇಶದಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲಿದೆ. ಇನ್ನು ಅಲ್ಲಿ ಪ್ರಮುಖವಾಗಿ ಗುರುತಿಸಲಾದ ನಾಲ್ಕು ಅಪಘಾತ ಬ್ಲಾಕ್ ಸ್ಪಾಟ್ ಗಳನ್ನು ಪರಿಹರಿಸುತ್ತದೆ ಎಂದು ವರದಿ ಹೇಳಿದೆ.

ಮಹಾರಾಷ್ಟ್ರದಲ್ಲಿ, ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಉದ್ಗೀರ್‌ನಿಂದ ದೇಗಲೂರು ಮತ್ತು ಆದಂಪುರ್ ಫಾಟಾದಿಂದ ಸಗ್ರೋಲಿ ಫಾಟಾ ವಿಭಾಗದವರೆಗೆ ಎರಡು ಪಥದ ಪುನರ್ವಸತಿ ಮತ್ತು ಮೇಲ್ದರ್ಜೆಗೇರಿಸಲು 809.77 ಕೋಟಿ ರೂ. ಮಂಜೂರು ಮಾಡಲಾಗುವುದು. ಈ ಹೆದ್ದಾರಿಯು ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಲಾತೂರ್, ನಾಂದೇಡ್ ಅನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯೊಂದಿಗೆ ಸಂಪರ್ಕಿಸುತ್ತದೆ.
ಈ ಸಂಪರ್ಕವು ಮರಾಠಾವಾಡಾ ಮತ್ತು ತೆಲಂಗಾಣದ ಕೆಲವು ಭಾಗಗಳ ನಡುವಿನ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ, ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿಯನ್ನು ಹೆಚ್ಚಿಸುವುದರ ಜೊತೆಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ. ಹಾಗೆಯೇ ಉದಗೀರ್, ಮುಕ್ರಮಾಬಾದ್ ಮತ್ತು ದೇಗಲೂರು ನಗರಗಳಲ್ಲಿ ಕೈಗಾರಿಕಾ ಕೃಷಿ-ವ್ಯವಹಾರ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ಹೇಳಲಾಗಿದೆ.

ಆಂಧ್ರಪ್ರದೇಶದಲ್ಲಿ, ಗುಂಟೂರು ಜಿಲ್ಲೆಯ ಗುಂಟೂರು-ನಲ್ಲಪಾಡು ರೈಲ್ವೆ ವಿಭಾಗದಲ್ಲಿ ನಾಲ್ಕು ಪಥದ ಶಂಕರ್ ವಿಲಾಸ್ ರಸ್ತೆ ಓವರ್ ಬ್ರಿಡ್ಜ್ (ಆರ್‌ಒಬಿ) ನಿರ್ಮಾಣಕ್ಕೆ 98 ಕೋಟಿ ರೂ. ಮಂಜೂರು ಮಾಡಲಾಗುವುದು. ಇಲ್ಲಿನ ಸಿಆರ್ಐಎಫ್ ಯೋಜನೆಯಡಿ ಒಟ್ಟು 200.06 ಕಿ.ಮೀ ಉದ್ದದ 13 ರಾಜ್ಯ ರಸ್ತೆಗಳ ಅಭಿವೃದ್ಧಿಗೆ 400 ಕೋಟಿ ರೂ. ಮಂಜೂರು ಮಾಡಲಾಗುವುದು.
ರಾಷ್ಟ್ರೀಯ ಹೆದ್ದಾರಿ 565 ರ ನಕ್ರೆಕಲ್‌ನಿಂದ ನಾಗಾರ್ಜುನ ಸಾಗರ ವಿಭಾಗದವರೆಗೆ ನಲ್ಗೊಂಡ ಪಟ್ಟಣಕ್ಕೆ 14 ಕಿ.ಮೀ ಉದ್ದದ, ಚತುಷ್ಪಥ ಬೈಪಾಸ್ ನಿರ್ಮಾಣಕ್ಕೆ ತೆಲಂಗಾಣದಲ್ಲಿ 516 ಕೋಟಿ ರೂ. ಮಂಜೂರು ಮಾಡಲಾಗುವುದು. ಈ ಯೋಜನೆಯು ನಲ್ಗೊಂಡದಲ್ಲಿನ ದಟ್ಟಣೆ ನಿವಾರಿಸುವುದಲ್ಲದೆ, ನಕ್ರೆಕಲ್ ಮತ್ತು ನಾಗಾರ್ಜುನ ಸಾಗರ್ ನಡುವಿನ ಸಂಪರ್ಕವನ್ನು ಸುಧಾರಿಸಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ.


Click it and Unblock the Notifications