Dwarka Expressway: ಭಾರತದ ಮೊಟ್ಟ ಮೊದಲ 8 ಪಥದ ರಸ್ತೆ ಲೋಕಾರ್ಪಣೆಗೆ ಸಿದ್ದ!. ವಿಡಿಯೋ ನೋಡಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರಸ್ತೆ ನಿರ್ಮಾಣದ ವಿಚಾರದಲ್ಲಿ ಇಡೀ ಪ್ರಪಂಚವನ್ನು ಭಾರತದತ್ತ ತಿರುಗಿ ನೋಡುವಂತೆ ಮಾಡುತ್ತಿದೆ. ದೇಶದ ಮೊದಲ 8 ಪಥದ ರಸ್ತೆ ಎಂಬ ಹೆಗ್ಗಳಿಕೆಗೆ ಶೀಘ್ರ ಪಾತ್ರವಾಗಲಿರುವ ದ್ವಾರಕಾ ಎಕ್ಸ್‌ಪ್ರೆಸ್‌ವೇ (Dwarka Expressway)ಯ ವಿಡಿಯೋ ಕ್ಲಿಪ್ ಬಿಡುಗಡೆ ಮಾಡಿದೆ.
ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಉತ್ತರ ಪೆರಿಫೆರಲ್ ರಸ್ತೆ/ ಎನ್‌ಹೆಚ್ 248-ಬಿಬಿ ಎಂದು ಕರೆಯಲಾಗುವ ದ್ವಾರಕಾ ಎಕ್ಸ್‌ಪ್ರೆಸ್‌ವೇಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 27.6 ಕಿಮೀ ಉದ್ದದ ರಸ್ತೆ ಇದಾಗಿದ್ದು, ಒಟ್ಟು 8 ಪಥಗಳನ್ನು ಒಳಗೊಂಡಿರಲಿದೆ. ಈ ಹೆದ್ದಾರಿ, ದೆಹಲಿಯ ದ್ವಾರಕಾ, ಹರಿಯಾಣದ ಗುರುಗ್ರಾಮದ ಖೇರ್ಕಿ ದೌಲಾ ಟೋಲ್ ಪ್ಲಾಜಾಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಈ ಬಗ್ಗೆ ಮಾತನಾಡಿರುವ ನಿತಿನ್ ಗಡ್ಕರಿ ಅವರು, 'ದ್ವಾರಕಾ ಎಕ್ಸ್‌ಪ್ರೆಸ್‌ವೇ ಎಂಜಿನಿಯರಿಂಗ್ ಅದ್ಭುತಗಳಲ್ಲಿ ಒಂದಾಗಿದೆ. ಮುಂದಿನ 3 - 4 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಸಾರ್ವಜನಿಕ ಸಂಚಾರಕ್ಕೆ ಮುಕ್ತಾಯವಾಗಲಿದೆ. ಈ ಹೆದ್ದಾರಿಯಲ್ಲಿ ಪ್ರಯಾಣಿಸಿದ ಜನರು, ಅದರ ಅನುಭವವನ್ನು 100 ವರ್ಷಗಳವರೆಗೆ ಮರೆಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ದೇಶದಲ್ಲಿ ಇದೇ ಪ್ರಥಮ ಬಾರಿಗೆ, ಈ ಹೆದ್ದಾರಿ ನಿರ್ಮಾಣದ ವೇಳೆ ಸುಮಾರು 1,200 ಮರಗಳನ್ನು ಒಂದು ಕಡೆಯಿಂದ ,ಮತ್ತೊಂದು ಕಡೆಗೆ ಸ್ಥಳಾಂತರ ಮಾಡಲಾಗಿದೆ. ಎಕ್ಸ್‌ಪ್ರೆಸ್‌ವೇ ದೆಹಲಿಯ ಮಹಿಪಾಲಪುರದ ಶಿವ ಮೂರ್ತಿಯಲ್ಲಿ ಎನ್‌ಹೆಚ್ 48ನ 20 ಕಿಮೀ ಮಾರ್ಕ್ ನಲ್ಲಿ ಶುರುವಾಗಿ, ಹರಿಯಾಣದ ಗುರುಗ್ರಾಮದ ಖೇರ್ಕಿ ದೌಲಾ ಟೋಲ್ ಪ್ಲಾಜಾ ಸಮೀಪದ 40 ಕಿಮೀ ಮಾರ್ಕ್ ನಲ್ಲಿ ಮುಕ್ತಾಯವಾಗಲಿದೆ.

ದೆಹಲಿ -ಗುರುಗ್ರಾಮ ರಸ್ತೆಯಲ್ಲಿ ಸಂಚಾರಿ ದಟ್ಟಣೆ ಸಮಸ್ಯೆಯನ್ನು ಬಗೆಹರಿಸಲು, ದ್ವಾರಕಾ ಎಕ್ಸ್‌ಪ್ರೆಸ್‌ವೇ ಪರ್ಯಾಯ ರಸ್ತೆಯಾಗಲಿದೆ. ಈ ಹೆದ್ದಾರಿ ನಿರ್ಮಾಣಕ್ಕೆ ಒಟ್ಟು 2 ಲಕ್ಷ ಮೆಟ್ರಿಕ್ ಟನ್ ಉಕ್ಕನ್ನು ಬಳಸಲಾಗಿದೆ. ಇದು, ಐಫೆಲ್ ಟವರ್ ನಿರ್ಮಾಣಕ್ಕೆ ಬಳಸಿರುವ ಉಕ್ಕಿಗಿಂತ 30 ಪಟ್ಟು ಅಧಿಕವಾಗಿದೆ. ನೂತನ ಎಕ್ಸ್‌ಪ್ರೆಸ್‌ವೇ ಮೂಲಕ ದ್ವಾರಕಾದಿಂದ ಮನೇಸರ್‌ಗೆ ಕೇವಲ 15 ನಿಮಿಷಗಳಲ್ಲಿ ತೆರಳಬಹುದು.
ಅಲ್ಲದೆ, ಮನೇಸರ್‌ನಿಂದ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣದ ಅವಧಿಯನ್ನು 20 ನಿಮಿಷ ಕಡಿಮೆಯಾಗಲಿದೆ. ಜೊತೆಗೆ ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿರುವ ಇಂಡಿಯಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್‌ಗೂ ಸುಲಭ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ಇನ್ನು, ರಸ್ತೆ ಜಾಲದ ವಿಸ್ತರಣೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ, ಎರಡನೇ ಸ್ಥಾನಕ್ಕೆ ತಲುಪಿದೆ. ಪ್ರಸ್ತುತ, ದೇಶದಲ್ಲಿ 1.45 ಲಕ್ಷ ಕಿಲೋಮೀಟರ್ ಉದ್ದದ ರೋಡ್‌ಯಿದೆ.
ದೇಶದಲ್ಲಿ 9 ವರ್ಷಗಳ ಹಿಂದೆ, 91,287 ಕಿಲೋಮೀಟರ್ ರಸ್ತೆ ಇತ್ತು. ಅದು ಕೆಲವೇ ವರ್ಷಗಳಲ್ಲಿ ಈ ಮಟ್ಟದಲ್ಲಿ ಪ್ರಗತಿಯಾಗಿದೆ. 2019ರ ಈಚೆಗೆ ಬರೋಬ್ಬರಿ 30,000 ಕಿಮೀ ಹೆದ್ದಾರಿ ನಿರ್ಮಿಸಲಾಗಿದ್ದು, ಇದರಲ್ಲಿ ಬೆಂಗಳೂರು - ಮೈಸೂರು, ಮೀರತ್ - ದೆಹಲಿ ಸೇರಿದಂತೆ ವಿವಿಧ ಎಕ್ಸ್‌ಪ್ರೆಸ್‌ವೇಗಳು ಸೇರಿವೆ. ಹೆದ್ದಾರಿ ನಿರ್ಮಾಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, 7 ವಿಶ್ವ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.
ಇವೆಲ್ಲ ಒಂದೆಡೆ ಆದ್ರೆ, ಕರ್ನಾಟಕದಲ್ಲೂ ಎರಡು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಭರದಿಂದ ಸಾಗುತ್ತಿದೆ. ಬೆಂಗಳೂರು - ಚೆನ್ನೈ ಕೈಗಾರಿಕಾ ಕಾರಿಡಾರ್ ಭಾಗವಾಗಿ ಭಾರತಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇವೆರೆಡು ನಗರಗಳ ನಡುವೆ 262 ಕಿಮೀ ಉದ್ದದ ರಸ್ತೆಯನ್ನು ನಿರ್ಮಾಣ ಮಾಡುತ್ತಿದೆ. ಮತ್ತೊಂದು, ಬೆಂಗಳೂರು - ಪುಣೆ ನಡುವೆ ಸಿದ್ದವಾಗುತ್ತಿದೆ. 719.26 ಕಿಲೋಮೀಟರ್ ರೋಡ್ ಇದಾಗಿರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications