ರಸ್ತೆ ಬದಿ ಕಾರು ನಿಲ್ಲಿಸಿ ಮೂತ್ರ ವಿಸರ್ಜಿಸುವ ಕಾರು ಮಾಲೀಕರೇ ಎಚ್ಚರ
ಭಾರತದಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ವಾಹನ ಮಾಲೀಕರು ಎಷ್ಟು ಜಾಗರೂಕರಾಗಿರಲಿ, ಕಳ್ಳರು ಹೊಸ ಹೊಸ ಟೆಕ್ನಾಲಜಿಗಳನ್ನು ಬಳಸಿ ಕೈಚಳಕ ತೋರಿಸುಟ್ಟಿದ್ದಾರೆ. ಪೊಲೀಸರು ಸಹ ವಾಹನಗಳ್ಳರನ್ನು ಪತ್ತೆ ಹಚ್ಚಲು ಹರ ಸಾಹಸ ಪಡುತ್ತಿದ್ದಾರೆ.

ವಾಹನ ಕಳ್ಳತನವನ್ನು ತಡೆಯಲು ಪೊಲೀಸರು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ ಉತ್ತರ ಪ್ರದೇಶದ ನೋಯ್ಡಾ ನಗರದಲ್ಲಿ ನಡೆದಿರುವ ಕಾರುಗಳ್ಳತನ ಪೊಲೀಸರಿಗೆ ಆಘಾತವನ್ನುಂಟು ಮಾಡಿದೆ. ಈ ಪ್ರಕರಣದಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯು ಐಷಾರಾಮಿ ಕಾರ್ ಅನ್ನೇ ಕದ್ದಿದ್ದಾರೆ.

ನೋಯ್ಡಾದ ಬೇಸ್ -2 ಪೊಲೀಸ್ ಠಾಣೆ ಬಳಿ ಸೆಕ್ಟರ್ 90ರಲ್ಲಿ ಈ ಘಟನೆ ನಡೆದಿದೆ. ಸ್ಟಾಕ್ ಬ್ರೋಕರ್ ಆಗಿ ಕೆಲಸ ಮಾಡುವ ರಿಷಭ್ ಅರೋರಾ ಎಂಬುವವರೇ ತಮ್ಮ ದುಬಾರಿ ಬೆಲೆಯಬಿಎಂಡಬ್ಲ್ಯು ಐಷಾರಾಮಿ ಕಾರನ್ನು ಕಳೆದುಕೊಂದವರು. ಕಳೆದ ಶನಿವಾರ ರಾತ್ರಿ ಈ ಘಟನೆ ನಡೆದಿದೆ.

ರಿಷಭ್ ಅರೋರಾ ತನ್ನ ಸೋದರಸಂಬಂಧಿಯ ಬಿಎಂಡಬ್ಲ್ಯು ಕಾರನ್ನು ಓಡಿಸುತ್ತಿದ್ದರು. ರಿಷಭ್ ಅರೋರಾ ಕಳೆದ ಒಂದು ವಾರದಿಂದ ಕಾರನ್ನು ಬಳಸುತ್ತಿದ್ದರು. ಈ ಕಾರನ್ನು ಸಾಲದಿಂದ ಖರೀದಿಸಲಾಗಿತ್ತು. 40 ಲಕ್ಷ ರೂಪಾಯಿಗಳ ಸಾಲವನ್ನು ಇನ್ನೂ ತೀರಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಶನಿವಾರ ರಾತ್ರಿ ನಡೆದ ಪಾರ್ಟಿಯಲ್ಲಿ ಭಾಗವಹಿಸಲು ರಿಷಭ್ ಅರೋರಾ ಬಿಎಂಡಬ್ಲ್ಯು ಕಾರಿನಲ್ಲಿ ತೆರಳಿದ್ದರು. ಅವರು ಕುಡಿದ ಮತ್ತಿನಲ್ಲಿದ್ದ ಸಾಧ್ಯತೆಗಳಿವೆ. ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮೂತ್ರ ವಿಸರ್ಜಿಸುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಅಪರಿಚಿತರು ಕಾರನ್ನು ಕದ್ದಿದ್ದಾರೆ.

ಈ ಕುರಿತು ರಿಷಭ್ ಅರೋರಾ ಪೊಲೀಸರಿಗೆ ದೂರು ನೀಡಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಕಳ್ಳರು ಬಂದೂಕಿನಿಂದ ಬೆದರಿಕೆ ಹಾಕಿ ಕಾರನ್ನು ದೋಚಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ರಿಷಭ್ ಅರೋರಾ ಕುಡಿದಿದ್ದರು ಎಂದು ಹೇಳಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕಾಗಿದೆ.

ಈ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿಗಳು, ಬಿಎಂಡಬ್ಲ್ಯು ಕಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ಮಾಡಲಿದ್ದು, ಶೀಘ್ರದಲ್ಲೇ ಕಾರನ್ನು ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ.

ಕಾರಿನ ಮಾಲೀಕರ ಬಗ್ಗೆ ತಿಳಿದಿರುವವರು ಈ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ. ಕಾರು ಕಳ್ಳತನವಾದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುಡಿದು ವಾಹನ ಚಲಾಯಿಸಿದ ರಿಷಭ್ ಅರೋರಾ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪೊಲೀಸರು, ಅಪರಾಧಿಗಳ ಬಂಧನಕ್ಕೆ ಹಾಗೂ ಕಳ್ಳತನವಾಗಿರುವ ಬಿಎಂಡಬ್ಲ್ಯು ಕಾರನ್ನು ವಶಕ್ಕೆ ಪಡೆಯುವುದಕ್ಕೆ ಸದ್ಯಕ್ಕೆ ಆದ್ಯತೆ ನೀಡಲಾಗುವುದು. ಇಂತಹ ಘಟನೆಗಳು ಮತ್ತೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಭಾರತದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಮಾಲೀಕರಲ್ಲಿ ಆತಂಕವನ್ನುಂಟು ಮಾಡಿವೆ. ನೀವೂ ಸಹ ನಿಮ್ಮ ವಾಹನಗಳನ್ನು ಆದಷ್ಟು ಜಾಗರೂಕತೆಯಿಂದ ನೋಡಿಕೊಳ್ಳುವುದು ಒಳ್ಳೆಯದು.
ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications