ಗಾಯಾಳುಗಳನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಕರೆದೊಯ್ದ ಶಾಸಕ..!
ಭಾರತದ ರಸ್ತೆಗಳಲ್ಲಿ ಅದರಲ್ಲೂ ಹೆದ್ದಾರಿಗಳಲ್ಲಿ ಅಪಘಾತಗಳಾಗುವುದು ಸಾಮಾನ್ಯ ಸಂಗತಿಯಾಗಿದೆ. ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವವರಿಗೆ ನೆರವಾಗಲು ಯಾರೂ ಮುಂದೆ ಬರುವುದಿಲ್ಲ. ಮುಂದೆ ಕೋರ್ಟ್ ಕಚೇರಿ ಎಂದು ಅಲೆದಾಡಬೇಕಾಗುತ್ತದೆ ಎಂಬುದು ಇದಕ್ಕೆ ಮುಖ್ಯ ಕಾರಣ.

ಆದರೆ ಇದಕ್ಕೆ ಕ್ಯಾರೇ ಎನ್ನದ ಕೆಲವರು ಗಾಯಾಳುಗಳಿಗೆ ನೆರವಾಗುತ್ತಾರೆ. ಇದೇ ರೀತಿ ಈ ಹಿಂದೆ ಹಲವು ರಾಜಕಾರಣಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ. ಈಗ ಶಾಸಕರೊಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ತಮ್ಮ ಕಾರ್ ಅನ್ನು ನೀಡಿ ನೆರವಾಗಿದ್ದಾರೆ.

ಈ ಘಟನೆ ನಡೆದಿರುವುದು ಒಡಿಶಾದ ಮಾಲ್ಕನ್‍ಗಿರಿಯ ಬಳಿಯಿರುವ ನಾಯಕ್‍ಗುಡಾದಲ್ಲಿ. ಚಿತ್ರಕೊಂಡಾದ ಶಾಸಕರಾದ ಪೂರ್ಣ ಚಂದ್ರಾ ಬಕಾರವರು ರಸ್ತೆಯಲ್ಲಿ ಚಲಿಸುತ್ತಿದ್ದಾಗ ರಸ್ತೆ ಬದಿಯಲ್ಲಿ ಅಪಘಾತವಾಗಿ ಒದ್ದಾಡುತ್ತಿದ್ದ ಮೂವರು ಗಾಯಾಳುಗಳು ಅವರ ಕಣ್ಣಿಗೆ ಬಿದ್ದಿದ್ದಾರೆ.

ಗಾಯಾಳುಗಳನ್ನು ನೋಡಿದ ತಕ್ಷಣ ತಮ್ಮ ಕಾರಿನಿಂದ ಕೆಳಗಿಳಿದು ಗಾಯಾಳುಗಳಿಗೆ ನೆರವಾಗಿದ್ದಾರೆ. ಗಾಯಾಳುಗಳನ್ನು ತಮ್ಮ ಕಾರಿನಲ್ಲಿಯೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದ ಬಕಾರವರು ಹತ್ತಿರದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಅವರು ಗಾಯಾಳುಗಳ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದಾರೆ. ಎಲ್ಲಾ ಗಾಯಾಳುಗಳು ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಇಬ್ಬರು ಮಹಿಳೆಯರು ಹಾಗೂ ಒಬ್ಬ ಯುವಕ ಬೈಕಿನಲ್ಲಿ ಹೋಗುತ್ತಿರುವ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ.

ಈ ಅಪಘಾತ ಹೇಗಾಯಿತು ಎಂಬ ಬಗ್ಗೆ ಖಚಿತ ಮಾಹಿತಿಯಿಲ್ಲ. ಶಾಸಕರು ಗಾಯಾಳುಗಳನ್ನು ರಕ್ಷಿಸುತ್ತಿರುವ ವೀಡಿಯೊದಲ್ಲಿರುವ ಗಾಯಾಳುಗಳ ಪೈಕಿ ಯಾರೊಬ್ಬರೂ ಹೆಲ್ಮೆಟ್ ಧರಿಸದೇ ಇರುವುದನ್ನು ಕಾಣಬಹುದು. ಇದು ಸಂಚಾರಿ ನಿಯಮಗಳ ಉಲ್ಲಂಘನೆಯ ಜೊತೆಗೆ ಜೀವವನ್ನು ತೆಗೆಯಲೂ ಬಹುದು.

ಇದು ಮಾತ್ರವಲ್ಲದೇ ಕಾನೂನುಬಾಹಿರವಾಗಿ ಒಂದೇ ಬೈಕಿನಲ್ಲಿ ಮೂವರು ಪ್ರಯಾಣಿಸುತ್ತಿದ್ದಾರೆ. ಅದೇನೇ ಇದ್ದರೂ, ಶಾಸಕರ ಗಾಯಾಳುಗಳಿಗೆ ನೆರವಾದ ಈ ವೀಡಿಯೊ ಇಂಟರ್‍ನೆಟ್‍ನಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನರು ಶಾಸಕರನ್ನು ಶ್ಲಾಘಿಸುತ್ತಿದ್ದಾರೆ.

ಅಪಘಾತಕ್ಕೊಳಗಾದವರಿಗೆ ತಕ್ಷಣಕ್ಕೆ ಸಹಾಯ ಮಾಡುವುದಕ್ಕೆ ಯಾರೇ ಆಗಲಿ ಆದ್ಯತೆ ನೀಡಬೇಕು. ಅಪಘಾತಕ್ಕೊಳಗಾದವರಿಗೆ ಪ್ರಥಮ ಚಿಕಿತ್ಸೆ/ಫಸ್ಟ್ ಏಡ್ ಅಗತ್ಯವಿರುತ್ತದೆ. ಪ್ರಥಮ ಚಿಕಿತ್ಸೆ ಬಹಳ ನಿರ್ಣಾಯಕವಾದ ಕಾರಣ, ಪ್ರತಿಯೊಬ್ಬರು ಕಾಳಜಿ ವಹಿಸಿ, ಗಾಯಾಳುಗಳು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪುವಂತೆ ನೋಡಿಕೊಳ್ಳಬೇಕು.

ಮೊದಲಿಗೆ ಹೋಲಿಸಿದರೆ ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವವರನ್ನು ಆಸ್ಪತ್ರೆಗೆ ಸೇರಿಸುವುದು ತುಂಬಾ ಸುಲಭವಾಗಿದೆ. ಗಾಯಾಳುಗಳಿಗೆ ಸಹಾಯ ಮಾಡುವ ಜನರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳದಂತೆ ಸರ್ಕಾರ ಸೂಚಿಸಿದೆ.
ಇದರಿಂದಾಗಿ ಅಪಘಾತ ಗಾಯಗೊಳ್ಳುವವರಿಗೆ ನೆರವಾಗಲು ಜನರು ಮುಂದೆ ಬರಲಿದ್ದಾರೆ. ಇದರ ಜೊತೆಗೆ ತುರ್ತು ಆಂಬ್ಯುಲೆನ್ಸ್ ಗಳು ದೇಶಾದ್ಯಂತ ಕಾರ್ಯ ನಿರತವಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದಿದ್ದರೆ 108ಗೆ ಕರೆ ಮಾಡುವುದರಿಂದಲೂ ಗಾಯಾಳುಗಳಿಗೆ ನೆರವಾಗಬಹುದು.

ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವವರ ಜೀವ ಉಳಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ಇದಕ್ಕಾಗಿ ಅನೇಕ ರಾಜ್ಯ ಸರ್ಕಾರಗಳು ಗಾಯಾಳುಗಳಿಗೆ ನೆರವಾಗುವವರಿಗೆ ನಗದು ಬಹುಮಾನಗಳನ್ನು ನೀಡುತ್ತಿವೆ.


Click it and Unblock the Notifications