ಪೆಟ್ರೋಲ್ ಬೇಡ.. 900 ಕಿ.ಮೀ ಮೈಲೇಜ್, 1 ರೂಪಾಯಿ ಖರ್ಚಿಲ್ಲ.. ಈ ಕಾರು ನೀರಿನಿಂದ ಓಡುತ್ತೆ!
ಯಾವುದೇ ವಾಹನ ಓಡಲು ಇಂಧನ ತುಂಬಾ ಅವಶ್ಯಕ. ಅದರಲ್ಲೂ ಪೆಟ್ರೋಲ್, ಡೀಸೆಲ್ ಅಥವಾ ಸಿಎನ್‌ಜಿ ಗ್ಯಾಸ್ ಬೇಕೇ ಬೇಕು. ಸದ್ಯ, ಒಂದೆಡರು ವರ್ಷಗಳಿಂದ ವಿದ್ಯುತ್ (ಎಲೆಕ್ಟ್ರಿಕ್) ಚಾಲಿತ ವಾಹನಗಳು ಕೂಡ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಪೆಟ್ರೋಲ್/ ಡೀಸೆಲ್ (Petrol/ Diesel) ಬೆಲೆ ದುಬಾರಿಯಾಗಿದ್ದು, ಪರಿಸರಕ್ಕೂ ಮಾರಕವಾಗಿದೆ. ಹೀಗಾಗಿ, ಪರ್ಯಾಯ ಇಂಧನಗಳ ಬಳಕೆ ಕುರಿತಂತೆ ಹಲವು ಸಂಶೋಧನೆಗಳು ನಡೆಯುತ್ತಿವೆ. ಇವೆಲ್ಲದರ ನಡುವೆ ಇರಾನ್ ದೇಶದ ವಿಜ್ಞಾನಿಯೊಬ್ಬರು ನೀರಿನಿಂದ ಚಲಿಸಬಲ್ಲ ಕಾರನ್ನು ಆವಿಷ್ಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಮೊದಲಿಗೆ ಇರಾನಿ ವಿಜ್ಞಾನಿ ಅಲಾವುದ್ದೀನ್ ಖಾಸೆಮಿ ಪೈಪ್ವೊಂದನ್ನು ಹಿಡಿದಿದ್ದು, ಸ್ವಲ್ಪ ನೀರನ್ನು ಕುಡಿದಿದ್ದಾರೆ. ಆ ಬಳಿಕ ಕಾರಿನ ಫುಯೆಲ್ ಟ್ಯಾಂಕ್‌ಗೆ ನೀರನ್ನು (Water) ತುಂಬಿಸುತ್ತಿರುದನ್ನು ಕಾಣಬಹುದು. ಇದರಲ್ಲಿರುವ ಎಂಜಿನ್ ನೀರನ್ನು ಹೈಡ್ರೋಜನ್ & ಆಕ್ಸಿಜನ್ ಆಗಿ ಬೇರ್ಪಡಿಸುತ್ತದೆ. ನಂತರದಲ್ಲಿ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶಕ್ತಿ (ಪವರ್) ಉತ್ಪಾದನೆಯಾಗುತ್ತದೆ. ಇದು ಕಾರು ಓಡಲು ನೆರವಾಗಬಲ್ಲದು ಎಂಬುದು ಅವರ ವಾದವಾಗಿದೆ.

ಅಲಾವುದ್ದೀನ್ ಖಾಸೆಮಿ ಪ್ರಕಾರ, ಈ ಕಾರು ಬೃಹದಾಕಾರದ 60 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ. ನೀರನ್ನು ಇಂಧನದಂತೆ ಸಂಪೂರ್ಣವಾಗಿ ಭರ್ತಿ ಮಾಡಿದರೆ, 900 ಕಿ.ಮೀವರೆಗೆ ಮೈಲೇಜ್ ನೀಡಬಲ್ಲದು. ಅದೇ ರೀತಿಯಲ್ಲಿ ಕೊಂಚವು ಇತರೆ ಇಂಧನ ಉಪಯೋಗಿಸದೇ 10 ಗಂಟೆಗಳ ನಿರಂತರವಾಗಿ ಡ್ರೈವಿಂಗ್ ಮಾಡಬಹುದಂತೆ.
ಇದೊಂದು ಪರಿಸರ ಸ್ನೇಹಿ ಕಾರಾಗಿದೆ. ನೀರಿನ ನೆರವಿನಿಂದ ಓಡುವುದರಿಂದ ಯಾವುದೇ ರೀತಿಯಲ್ಲಿ ಇಂಗಾಲ (ಕಾರ್ಬನ್ ಡೈ ಅಕ್ಸೆಡ್) ಹೊರಸೂಸುವುದಿಲ್ಲ. ಕೇವಲ ಆವಿಯನ್ನು ಹೊರಹಾಕುತ್ತದೆ. ಈ ಹಿನ್ನೆಲೆ, ವಾಯುಮಾಲಿನ್ಯವು ಆಗುವುದಿಲ್ಲ ಎಂದು ವಿಜ್ಞಾನಿ ಅಲಾವುದ್ದೀನ್ ಖಾಸೆಮಿ ಅವರು ಅಭಿಪ್ರಾಯಪಡುತ್ತಾರೆ.
ಆದರೆ, ಈ ಸಂಶೋಧನೆ ಬಗ್ಗೆ ಹಲವು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದು, ಪರ - ವಿರೋಧ ಚರ್ಚೆಗಳು ನಡೆಯುತ್ತಿವೆ. ವ್ಯಕ್ತಿಯೊಬ್ಬ, 'ಇದು ಅದ್ಭುತವಾಗಿದೆ.. ಅದರ ಹೊರತಾಗಿ ಸಾಧಾರಣ ಹವಾಮಾನ '0' ಡಿಗ್ರಿಗೆ ಕುಸಿದರೆ, ನೀರು ಎಲ್ಲವು ಹೆಪ್ಪುಗಟ್ಟುತ್ತದೆ, ಆಗ ಮುಂದೇನು' ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೊಬ್ಬ ವ್ಯಕ್ತಿ, 'ಇದು ಸಾಧ್ಯವಾಗಿದ್ದರೂ ಇಂಧನಕ್ಕಾಗಿ ಕುಡಿಯುವ ಸಿಹಿ ನೀರನ್ನು ಹಾಳು ಮಾಡುವುದು ಅತ್ಯಂತ ಮೂರ್ಖತನವಾಗಿದೆ' ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ನೀರನ್ನು ಹೈಡ್ರೋಜನ್ ಮತ್ತು ಆಕ್ಸಿಜನ್ ಆಗಿ ವಿಭಜಿಸಲು ಹೆಚ್ಚಿನ ಶಕ್ತಿ (ಪವರ್) ಅಗತ್ಯವಿದೆ. ಆತ ವಿಜ್ಞಾನದ ನಿಯಮಗಳನ್ನು ಅರ್ಥಮಾಡಿಕೊಳ್ಳಲು ವಿಫಲನಾಗಿದ್ದಾನೆ' ಎಂದು ಹೇಳಿದ್ದಾರೆ.
ಸುಣ್ಣದ ಕಲ್ಲು & ನೀರಿನಿಂದ ಓಡುವ ಕಾರನ್ನು ತಯಾರಿಸಿದ್ದ ಮಹಾರಾಷ್ಟ್ರ ವಿದ್ಯಾರ್ಥಿಗಳು:
2018ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿರುವ ಭಗವತಿ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬಹುದೊಡ್ಡ ಆವಿಷ್ಕಾರವೊಂದನ್ನು ಮಾಡಿದ್ದರು. ಸುಣ್ಣದ ಕಲ್ಲಿನೊಂದಿಗೆ (Limestone) ನೀರನ್ನು ಬೆರಸಿದಾಗ, ಅದರಿಂದ ಉತ್ಪಾದನೆಯಾಗುವ 'ಅಸಿಟಲೀನ್' ಎಂಬ ಅನಿಲದಿಂದ ಓಡುವಂತೆ 'ಮಾರುತಿ 800' ಕಾರನ್ನು ಪರಿವರ್ತನೆ ಮಾಡಿದ್ದರು. ಇದು 21 ರಿಂದ 22 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ ಎಂದು ಆ ವಿದ್ಯಾರ್ಥಿಗಳು ತಿಳಿಸಿದ್ದರು.
ಒಟ್ಟಾರೆಯಾಗಿ, ನೀರನ್ನು ಇಂಧನವಾಗಿ ಪರಿವರ್ತಿಸುವ ಹಲವು ಪ್ರಯೋಗಳು ವರ್ಷಗಳಿಂದ ನಡೆಯುತ್ತಿವೆ. ಆದರೆ, ಇಂತಹ ಸಾಹಸಕ್ಕೆ ಕೈ ಹಾಕಿ ಯಾರು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಿಲ್ಲ. ಈ ನಡುವೆ ಸೌರ ಚಾಲಿತ ವಾಹನಗಳ ಅಭಿವೃದ್ಧಿಪಡಿಸುವಲ್ಲಿ ಹಲವು ಸಂಶೋಧನೆಗಳು ನಡೆಯುತ್ತಿದ್ದು, ಒಂದಷ್ಟು ಮಂದಿ ಸಫಲತೆಯನ್ನು ಕಂಡಿದ್ದಾರೆ.


Click it and Unblock the Notifications








