ಸ್ಕೂಟರ್‌ಗೆ ಹಾಕಿದ್ದ ಪೆಟ್ರೋಲ್ ವಾಪಸ್ ಪಡೆದ ಬಂಕ್ ಸಿಬ್ಬಂದಿ: ಕಾರಣ ಕೇಳಿದ್ರೆ ಕೋಪ ಬರುತ್ತೆ!
ದೇಶದಲ್ಲಿ ಸದ್ಯ 2000 ರೂಪಾಯಿ ನೋಟು ಸಖತ್ ಸದ್ದು ಮಾಡುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI), ಈ ಕರೆನ್ಸಿ ಮುಖ ಬೆಲೆಯ ನೋಟುಗಳನ್ನು ಹಿಂಪಡೆಯುವ ನಿರ್ಧಾರವನ್ನು ಪ್ರಕಟಿಸಿದ ಕೊಡಲೇ ಪೆಟ್ರೋಲ್ ಬಂಕ್, ಚಿನ್ನದ ವ್ಯಾಪಾರ, ಆನ್ ಲೈನ್ ಆರ್ಡರ್ ವ್ಯವಹಾರಗಳಲ್ಲಿ 2000 ನೋಟು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಇದೇ ಕರೆನ್ಸಿ ಚಲಾವಣೆಗೆ ಸಂಬಂಧಿಸಿದ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಂಕ್ ಸಿಬ್ಬಂದಿ, ಗ್ರಾಹಕನ ಸ್ಕೂಟರ್ ಗೆ ಪೆಟ್ರೋಲ್ ಹಾಕಿದ್ದಾರೆ. ಆತ, 2000 ರೂಪಾಯಿ ನೋಟನ್ನು ನೀಡಿದ್ದಾನೆ. ಇದನ್ನು ಸ್ವೀಕರಿಸಲು ಒಪ್ಪದ ಅವರು, ಮತ್ತೆ ಪೆಟ್ರೋಲ್ ಅನ್ನು ವಾಪಸ್ ತೆಗೆದುಕೊಳ್ಳುತ್ತಿರುವ ದೃಶ್ಯಗಳಿರುವ ವಿಡಿಯೋ ಸಖತ್ ಹಲ್ ಚಲ್ ಸೃಷ್ಟಿಸುತ್ತಿದೆ.

ವೈರಲ್ ಆಗಿರುವ ಪೋಸ್ಟ್ ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಬಳಕೆದಾರನೊಬ್ಬ 'ಈ ಪೆಟ್ರೋಲ್ ಬಂಕ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು, ಸರ್ಕಾರದ ಕಾರಣ ನೀಡಿ, ಪೆಟ್ರೋಲ್ ಹಾಕುತ್ತಿಲ್ಲ. 3 ತಿಂಗಳ ಸಮಯವಿದೆ. ಈಗಿನಿಂದ ನೋಟುಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ' ಎಂದು ಹೇಳಿದ್ದಾರೆ. ಇನ್ನೊಬ್ಬ, 'ಅಂಧ ಭಕ್ತರ ಫಲ..' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ರೂ.100 ಪೆಟ್ರೋಲ್ ಗೆ ರೂ.2000 ನಾ' ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಪೆಟೋಲ್ ಬಂಕ್ ಮಾಲೀಕರು ಕೂಡ ಹೆಚ್ಚು ಕಮ್ಮಿ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಗ್ರಾಹಕರ ವಾಹನಗಳಿಗೆ ಪೆಟ್ರೋಲ್ ಹಾಕಲು 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಸ್ವೀಕರಿಸಿದ್ರೆ ಆದಾಯ ತೆರಿಗೆ ಇಲಾಖೆಯಿಂದ ಸಮಸ್ಯೆ ಉಂಟಾಗಬಹುದು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ 'ಪೆಟ್ರೋಲ್ ಬಂಕ್ ಮಾಲೀಕರ ಸಂಘ' ಪತ್ರ ಬರೆದಿದೆ.
ಇದು ಕೇವಲ ಪೆಟ್ರೋಲ್ ಬಂಕ್ ಮಾಲೀಕರ ಸಮಸ್ಯೆಯಾಗಿಯೇ ಉಳಿದಿಲ್ಲ. ಸ್ವಿಗ್ಗಿ, ಜೊಮ್ಯಾಟೋ ಸೇರಿದಂತೆ ವಿವಿಧ ಆನ್ಲೈನ್ ಫ್ಲಾಟ್ ಫಾರಂಗಳಲ್ಲಿ ಆರ್ಡರ್ ಮಾಡುವವರೂ ಯುಪಿಐ ಪೇಮೆಂಟ್ ಮಾಡದೇ, ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಆರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಶನಿವಾರ ದೇಶಾದ್ಯಂತ ಚಿನ್ನದ ಅಂಗಡಿಗಳಲ್ಲಿ ಭರ್ಜರಿ ವಹಿವಾಟು ನಡೆದಿದ್ದು, ಅಲ್ಲಿ ಬಹುತೇಕ 2000 ರೂಪಾಯಿ ನೋಟುಗಳೇ ಚಲಾವಣೆಗೊಂಡಿವೆ.
ಕೆಲವೆಡೆ 100 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಗ್ರಾಹಕರು 2000 ನೋಟುಗಳನ್ನು ನೀಡಿ, ಚಿಲ್ಲರೆ ಕೇಳುತ್ತಿದ್ದಾರೆ. ಅದರಲ್ಲೂ ಉತ್ತರದ ಭಾರತದ ರಾಜ್ಯಗಳಲ್ಲಿ ಇದು ಹೇರಳವಾಗಿ ಕಂಡುಬರುತ್ತಿದೆ. ಬೆಂಗಳೂರಿನ ವಿವಿಧೆಡೆ ಬಿಲ್ ಅನ್ನು 2000 ರೂಪಾಯಿ ನೋಟಿನ ಮೂಲಕ ಪಾವತಿಸುವುದಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕವೇ ಅಲ್ಲಿನ ಸಿಬ್ಬಂದಿ ಪೆಟ್ರೋಲ್, ಡಿಸೇಲ್ ಅನ್ನು ವಾಹನಗಳಿಗೆ ತುಂಬುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಪೆಟೋಲ್ ಬಂಕ್ ಮಾಲೀಕರು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆ ಬಂದ ಮೇಲೆಯೇ ಗೊಂದಲಗಳಿಗೆ ತೆರೆಬೀಳಲಿದೆ.
ಇನ್ನು, ನಿಮ್ಮ ಬಳಿ 2000 ರೂಪಾಯಿ ನೋಟು ಇದ್ರೆ, ಅದನ್ನು ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶವಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಸುತ್ತೋಲೆಯ ಪ್ರಕಾರ, ಯಾವುದೇ ಬ್ಯಾಂಕ್‌ಗಳಲ್ಲಿರುವ ನಿಮ್ಮ ಖಾತೆಗಳಿಗೆ 2000 ರೂಪಾಯಿ ನೋಟನ್ನು ಜಮೆ ಮಾಡಬಹುದಾಗಿದೆ. ಸಾಮಾನ್ಯ ದಿನಗಳಲ್ಲಿ ಯಾವ ರೀತಿಯಲ್ಲಿ ಜಮೆ ಕಾರ್ಯ ನಡೆಯುತ್ತದೆಯೋ ಈಗಲೂ ಹಾಗೆಯೇ ಇರುತ್ತದೆ.
ಹಣ ಬದಲಾವಣೆ ಪ್ರಕ್ರಿಯೆ ಹೇಗೆ: ದೇಶದ ಎಲ್ಲ ಬ್ಯಾಂಕ್‌ಗಳಲ್ಲಿ ಒಬ್ಬ ವ್ಯಕ್ತಿ ಒಂದು ಬಾರಿಗೆ 20,000 ರೂಪಾಯಿ ಮಿತಿಯವರೆಗೆ 2000 ರೂಪಾಯಿ ನೋಟನ್ನು ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಸಾರ್ವಜನಿಕರಿಗೆ ಆಗುವ ಅನಾನುಕೂಲತೆ ಕಡಿಮೆ ಮಾಡಲು ಹಾಗೂ ಇತರೆ ಬ್ಯಾಂಕ್ ಕಾರ್ಯಾಚರಣೆಗೆ ಅಡ್ಡಿಯಾಗದಿರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.


Click it and Unblock the Notifications