ರಷ್ಯಾ ಅಧ್ಯಕ್ಷ ಪುಟಿನ್ Aurus Senat ಕಾರಲ್ಲಿ ಪ್ರಧಾನಿ ಮೋದಿ: ಬ್ರೋ.. ಇದು ಚಲಿಸುವ ಕೋಟೆ.. ಏನಿದರ ವಿಶೇಷತೆ?
ಚೀನಾದ ಟಿಯಾನ್‌ಜಿನ್‌ನಲ್ಲಿ ನಡೆದ ಶಾಂಫೈ ಶೃಂಗಸಭೆ ಬಳಿಕ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಸಭೆಯ ಸ್ಥಳಕ್ಕೆ 'ಔರಸ್ ಸೆನಾಟ್ ಲಿಮೋಸಿನ್' ಕಾರಿನಲ್ಲಿ ಪ್ರಯಾಣ ಮಾಡಿದರು. ಜೊತೆಗೆ ಕಾರಿನಲ್ಲಿಯೇ ಪರಸ್ಪರ ಮಾತುಕತೆಯನ್ನು ನಡೆಸಿದ್ದಾರೆ. ಈ ಫೋಟೋವನ್ನು ಸ್ವತಃ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ.. ಬಹುತೇಕರಿಗೆ ಇದು ಯಾವ ಕಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ರಷ್ಯಾ ನಿರ್ಮಿತ ಔರಸ್ ಸೆನಾಟ್ ಲಿಮೋಸಿನ್ (Aurus Senat Limousine), ಪ್ರಮುಖ ಸೆಡಾನ್ ಆಗಿದ್ದು, ವಿಶೇಷವಾಗಿ ಪುಟಿನ್‌ಗೆ ಗರಿಷ್ಠ ಭದ್ರತೆ ಒದಗಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ತಯಾರಿಕೆಯಲ್ಲಿ ಔರಸ್ ಮೋಟಾರ್ಸ್ ಹಾಗೂ ಎನ್ಎಎಂಐ ಸಂಸ್ಥೆಗಳು ಪ್ರಮುಖವಾದ ಪಾತ್ರವಹಿಸಿವೆ. ಇದನ್ನು ರಷ್ಯಾದ 'ರೋಲ್ಸ್ ರಾಯ್ಸ್' ಎಂದು ಕೂಡ ಕರೆಯಲಾಗುತ್ತದೆ.

ಈ ಔರಸ್ ಸೆನಾಟ್ ಲಿಮೋಸಿನ್ ಹೊರಭಾಗದಲ್ಲಿ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರನ್ನು ಸೆಳೆಯುವಂತಿದೆ. ಹಳೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಹಾಗೂ ಸೋವಿಯತ್ ಕಾಲಘಟ್ಟದ ಜಡ್ಐಎಸ್-110 ಲಿಮೋಸಿನ್ ಕಾರಿಗೆ ಹೋಲಿಕೆಯಾಗಲಿದೆ. ಅತ್ಯತ್ತಮವಾದ ಗ್ರಿಲ್ ಮತ್ತು ಬಂಪರ್‌ನ್ನು ಪಡೆದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಬೆಂಟ್ಲಿ ಕಾರಿನ ರೀತಿಯಲ್ಲಿರುವ ಟೈಲ್‌ಲ್ಯಾಂಪ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಪಡೆದಿದೆ.
ಔರಸ್ ಸೆನಾಟ್ ಸೆಡಾನ್ ಹೆಚ್ಚು ವಿಶಾಲ ಗಾತ್ರದಲ್ಲಿದೆ. 6,630 ಎಂಎಂ ಉದ್ದ, 2,020 ಎಂಎಂ ಅಗಲ ಹಾಗೂ 1,695 ಎಂಎಂ ಎತ್ತರವು ಇದೆ. 170 ಗ್ರೌಂಡ್ ಕ್ಲಿಯರೆನ್ಸ್ ಹಾಗೂ 4,300 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಜೊತೆಗೆ 6,300 ಕೆಜಿ ತೂಕವಿದೆ.

ಇದು 6/ 7 ಆಸನಗಳನ್ನು ಹೊಂದಿದ್ದು, ಆರಾಮದಾಯಕವಾದ ಪ್ರಯಾಣವನ್ನು ಒದಗಿಸಲು ನೆರವಾಗಬಲ್ಲದು. ಅಧ್ಯಕ್ಷರು ಹಾಗೂ ಚಾಲಕ/ಭದ್ರತಾ ಸಿಬ್ಬಂದಿಗಳ ಆಸನ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಿವೆ. ಈ ಕಾರು ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಒಟ್ಟು 4 ದೊಡ್ಡ ಗಾತ್ರದ ಬಾಗಿಲುಗಳನ್ನು (ಡೋರ್) ಹೊಂದಿದೆ.
ಬಹುಮುಖ್ಯವಾಗಿ ಔರಸ್ ಸೆನಾಟ್ ಲಿಮೋಸಿನ್ ಸೆಡಾನ್ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 4.4-ಲೀಟರ್ ಟ್ವಿನ್-ಟರ್ಬೊ ವಿ8 ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 600 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 880 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 9-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ಈ ಕಾರು 62 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ತನ್ನದಾಗಿಸಿಕೊಂಡಿದೆ. 22 ಕಿ.ಮೀ ಅಥವಾ 13.8 ಮೈಲಿ ಮೈಲೇಜ್ ನೀಡುತ್ತದೆ. 249 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 6 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಇದರ ಕ್ಯಾಬಿನ್ ವಿನ್ಯಾಸವು ಬಹಳ ಐಷಾರಾಮಿಯಾಗಿದ್ದು, ಭೂಲೋಕದ ಅರಮನೆ ಎಂದು ಕರೆದರೂ ತಪ್ಪಾಗುವುದಿಲ್ಲ. ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ & ಡಿಜಿಟಲ್ ಕ್ಲಸ್ಟರ್‌ಗಾಗಿ ಡುಯಲ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಗಳು, ಕ್ಲೇಮೇಟ್ ಕಂಟ್ರೋಲ್ ಸೆಟ್ಟಿಂಗ್, ಹೈ-ಎಂಡ್ ಆಡಿಯೋ ಸಿಸ್ಟಮ್ ಹಾಗೂ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಔರಸ್ ಸೆನಾಟ್ ಲಿಮೋಸಿನ್ ಸೆಡಾನ್ ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ನೀಡಬಲ್ಲದು. ಒಂದರ್ಥದಲ್ಲಿ ಚಲಿಸುವ ಕೋಟೆ ಎಂದು ಕರೆಯಬಹುದು. ಈ ಕಾರಿನ ಬಾಡಿಯು ಬುಲೆಟ್, ಗ್ರೆನೇಡ್ ಸ್ಫೋಟ ಹಾಗೂ ಇತರೆ ರಾಸಾಯನಿಕ ದಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದರ ಕಿಟಕಿ (ವಿಂಡೋ) 6 ಸೆಂ.ಮೀ ದಪ್ಪವಿದ್ದು, ಬುಲೆಟ್ ಪ್ರೊಫ್ ಆಗಿದೆ. ಜೊತೆಗೆ ಫ್ಯುಯೆಲ್ ಟ್ಯಾಂಕ್ ಬೆಂಕಿ/ಸ್ಫೋಟ ನಿರೋಧಕವಾಗಿದೆ.


Click it and Unblock the Notifications








