Vande Bharat Sleeper: ವಿಮಾನಕ್ಕೆ ಕಮ್ಮಿಯಿಲ್ಲ.. ದೇಶದ ಮೊದಲ ವಂದೇ ಭಾರತ್ ಸ್ಲೀಪರ್‌ಗೆ ಪ್ರಧಾನಿ ಮೋದಿ ಚಾಲನೆ
ಭಾರತದಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸೆಮಿ ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಸಂಚಾರ ನಡೆಸುತ್ತಿದೆ. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2019ರ ಫೆಬ್ರವರಿ 15ರಂದು ನವದೆಹಲಿ ಹಾಗೂ ವಾರಣಾಸಿ ನಡುವೆ ಈ ರೈಲಿನ ಮೊದಲ ಸಂಚಾರ ಶುರುವಾಗಿತ್ತು. ಇಂದು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ದೇಶದ ಪ್ರಪ್ರಥಮ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಭವ್ (Ashwini Vaishnaw) ಕೂಡ ಹಾಜರಿದ್ದರು.
ನೂತನ 'ವಂದೇ ಭಾರತ್ ಸ್ಲೀಪರ್' ಹೌರಾ ಹಾಗೂ ಗುವಾಹಟಿ ಮಧ್ಯೆ ಸಂಚಾರ ಮಾಡಲಿದ್ದು, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳನ್ನು ಬೆಸೆಯಲಿದೆ. ಈ ರೈಲು ವಿಮಾನವನ್ನು ಮೀರಿಸುವಂತಹ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ. ರಾತ್ರಿ ಸಂಚಾರಕ್ಕೆ ಅನುಗುಣವಾಗಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ನಿದ್ರಿಸುತ್ತಾ ಪ್ರಯಾಣ ಮಾಡಬಹುದು.

'ವಂದೇ ಭಾರತ್ ಸ್ಲೀಪರ್' ರಾಜಧಾನಿ ಎಕ್ಸ್‌ಪ್ರೆಸ್‌ಗಳಿಗೆ ಪರ್ಯಾಯವಾಗಿದೆ. ಇದನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಉತ್ಪಾದನಾ ಘಟಕದಲ್ಲಿ ಸಿದ್ದಪಡಿಸಲಾಗಿದೆ. ಈ ರೈಲಿನ ಹೊರಭಾಗದ ವಿನ್ಯಾಸವು 'ವಂದೇ ಭಾರತ್ ಎಕ್ಸ್‌ಪ್ರೆಸ್'ಗೆ ಹೋಲಿಕೆಯಾಗುತ್ತದೆ.
ಇದು ಗಂಟೆಗೆ 180 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚಾರ ಮಾಡುವಂತೆ ಸಿದ್ದಪಡಿಸಲಾಗಿದೆ. ಆದರೆ, 120 ರಿಂದ 130 ಕಿ.ಮೀ ವೇಗದಲ್ಲಿ ಓಡಾಟ ನಡೆಸುವ ನಿರೀಕ್ಷೆಯಿದೆ. ಆದರೂ ಪ್ರಯಾಣಿಕರು ಬೇಗನೆ ನಿರ್ದಿಷ್ಟ ಗಮ್ಯ ಸ್ಥಾನ ತಲುಪಬಹುದಾಗಿದ್ದು, ಸಮಯಾವಕಾಶವು ಉಳಿತಾಯವಾಗಲಿದೆ. ಒಟ್ಟು 16 ಕೋಚ್‌ಗಳನ್ನು ಹೊಂದಿದೆ. ಎಲ್ಲವು ಹವಾನಿಯಂತ್ರಿತವಾಗಿದ್ದು, ಒಟ್ಟು 823 ಬರ್ತ್‌ಗಳನ್ನು ಒಳಗೊಂಡಿದೆ.

ಈ ರೈಲು ಸ್ವಯಂ ಚಾಲಿತ ಬಾಗಿಲುಗಳು ಮತ್ತು ವಾಸನೆ ಮುಕ್ತ ಶೌಚಾಲಯಗಳನ್ನು ಪಡೆದಿದೆ. ಆಸನಗಳು ಚೆನ್ನಾಗಿವೆ. ಶಬ್ದ ನಿರೋಧಕ ವ್ಯವಸ್ಥೆಯನ್ನು ಒಳಗೊಂಡಿದೆ. ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದಕ್ಕಾಗಿ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಕವಚ್ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ತುರ್ತು ಸಂದರ್ಭದಲ್ಲಿ ಸಿಬ್ಬಂದಿಗಳೊಂದಿಗೆ ಮಾತನಾಡಲು ಟಾಕ್-ಬ್ಯಾಕ್‌ನ್ನು ಪಡೆದಿದೆ. ಪ್ಯಾಂಟ್ರಿ ವ್ಯವಸ್ಥೆಯಿದ್ದು, ರಾತ್ರಿಯ ಊಟ ಹಾಗೂ ಬೆಳಿಗ್ಗೆ ಟೀ ಒದಗಿಸಲಾಗುತ್ತದೆ. ಜೊತೆಗೆ ಪ್ರಯಾಣಿಕರಿಗೆ ಟವೆಲ್‌ಗಳನ್ನು ನೀಡಲಾಗುತ್ತದೆ.
ಹೌರಾ ಮತ್ತು ಗುವಾಹಟಿ ನಡುವೆ 966 ಕಿಲೋಮೀಟರ್ ದೂರವಿದೆ. ಪ್ರಸ್ತುತ ಇವೆರೆಡು ನಗರಗಳ ಮಧ್ಯೆ ಓಡಾಟ ನಡೆಸುವ ವೇಗದ 'ಸರೈಘಾಟ್ ಎಕ್ಸ್‌ಪ್ರೆಸ್' ಈ ಅಂತರವನ್ನು ಕ್ರಮಿಸಲು 16 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಗೊಳ್ಳಲಿದೆ. ಹೊಸ 'ವಂದೇ ಭಾರತ್ ಸ್ಲೀಪರ್' ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದ್ದು, ಸುಮಾರು 14 ಗಂಟೆಗಳಲ್ಲಿಯೇ ಗಮ್ಯ ಸ್ಥಾನವನ್ನು ತಲುಪಲಿದೆ.

ಈ ರೈಲಿನ ಟಿಕೆಟ್ ದರವು ಕೈಗೆಟುಕುವಂತಿರಲಿದ್ದು, ಎಲ್ಲ ವರ್ಗದ ಜನರು ಸುಲಭವಾಗಿ ಪ್ರಯಾಣ ಮಾಡಲು ಸಾಧ್ಯವಾಗಲಿದೆ. 3 ಎಸಿ ಕೋಚ್ ಬರ್ತ್‌ಗಳಿಗೆ 2,300 ರೂಪಾಯಿ, 2 ಎಸಿ ಕೋಚ್ ಬರ್ತ್‌ಗಳಿಗೆ ರೂ.3,000 ಹಾಗೂ ಮೊದಲ ದರ್ಜೆ ಎಸಿ ಕೋಚ್ ಬರ್ತ್‌ಗಳಿಗೆ 3,600 ರೂಪಾಯಿ ಇರಲಿದೆ.
ಒಟ್ಟಾರೆಯಾಗಿ ಮೊದಲ 'ವಂದೇ ಭಾರತ್ ಸ್ಲೀಪರ್' ರೈಲು ಸಂಚಾರ ಆರಂಭಿಸಿರುವುದು ದೇಶದ ಜನರಿಗೆ ಹೆಚ್ಚಿನ ಸಂತೋಷವನ್ನು ತಂದಿದೆ. ಮುಂಬರುವ ದಿನಗಳಲ್ಲಿ ಈ ರೈಲು ಕರ್ನಾಟಕದ ಬೆಂಗಳೂರು - ಬೆಳಗಾವಿ, ಬೆಂಗಳೂರು - ಮುಂಬೈ, ಬೆಂಗಳೂರು - ತಿರುವನಂತಪುರಂ ಮತ್ತು ಬೆಂಗಳೂರು - ಮಂಗಳೂರು ಮಾರ್ಗದಲ್ಲೂ ಸಂಚಾರಿಸಬಹುದು ಎನ್ನಲಾಗಿದೆ.


Click it and Unblock the Notifications








