ಪೊಲೀಸ್ ಹುದ್ದೆ ಆಕಾಂಕ್ಷಿ ಎಂಎ ಪದವೀಧರೆ ಬಸ್ ಡ್ರೈವರ್, ಆಕೆಯ ಗಂಡನೇ ಕಂಡಕ್ಟರ್: ರೈಟ್, ರೈಟ್...!
ಜೀವನದಲ್ಲಿ ಪತಿ - ಪತ್ನಿ ಅನೋನ್ಯವಾಗಿದ್ದರೆ ಎಂತಹ ಕಷ್ಟವನ್ನು ಬೇಕಾದರೂ ಎದುರಿಸಲು ಸಾಧ್ಯ. ಅದಕ್ಕೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಈ ದಂಪತಿ ಉತ್ತಮ ಉದಾಹರಣೆಯಾಗಿದ್ದಾರೆ. ಅತಿ ಕಠಿಣವಾಗಿರುವ ಘಾಜಿಯಾಬಾದ್ - ಬದೌನ್ ಮಾರ್ಗದಲ್ಲಿ ಹೆಂಡತಿ ಬಸ್ ಓಡಿಸಿದರೆ, ಆಕೆಯ ಗಂಡ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದಾರೆ.
ಪೊಲೀಸ್ ಇಲಾಖೆಗೆ ಸೇರಬೇಕೆಂದು ಕನಸು ಕಂಡಿರುವ ದಿಟ್ಟ ಮಹಿಳೆ ವೇದಾ ಕುಮಾರಿ (Ved Kumari) ಜೀವನೋಪಾಯಕ್ಕೆ ಬಸ್ ಚಲಾಯಿಸುತ್ತಿದ್ದಾರೆ. ಅದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಕ್ಕೂ ಸಿದ್ಧತೆ ನಡೆಸುತ್ತಿದ್ದಾರೆ. ಆಕೆ, ಲೋನಿ ಡಿಪೋಗೆ ಸೇರಿದ ಬಸ್‌ನ್ನು ಕೌಶಂಬಿ - ಘಾಜಿಯಾಬಾದ್ - ಬದೌನ್ (Kaushambi - Ghaziabad - Badaun) ಮಾರ್ಗದಲ್ಲಿ ಓಡಿಸುತ್ತಿದ್ದಾರೆ.

ಅವರ ಪತಿ ಮುಖೇಶ್ ಪ್ರಜಾಪತಿ ಅದೇ ಬಸ್‌ನಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಕೃತದಲ್ಲಿ ಎಂಎ ಪದವೀಧರೆಯಾಗಿರುವ ವೇದಾ ಕುಮಾರಿ ಅವರು, ಪೊಲೀಸ್ ಕೆಲಸಕ್ಕೆ ತಯಾರಿ ಮಾಡುತ್ತಿರವಾಗಲೇ ಡ್ರೈವರ್ ಹುದ್ದೆಯ ಜಾಹೀರಾತನ್ನು ಪತ್ರಿಕೆಯಲ್ಲಿ ನೋಡಿದ್ದು, ಬದುಕಿನ ಬಂಡಿ ಎಳೆಯಲು ಇದು ಉತ್ತಮ ಅವಕಾಶವೆಂದು ಭಾವಿಸಿ, ಚಾಲಕಿಯಾಗಲು ತೀರ್ಮಾನ ಮಾಡಿದ್ದಾರೆ.
ಕೌಶಲ ಅಭಿವೃದ್ಧಿ ಮಿಷನ್ ಯೋಜನೆಯಡಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (UPSRTC) ನೆರವಿನೊಂದಿಗೆ ವೇದಾ ಕುಮಾರಿ ಅವರು, 2021 ರಲ್ಲಿ ಕಾನ್ಪುರದ ಮಾದರಿ ಚಾಲನಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (Model Driving Training and Research Institute)ಯಿಂದ ಭಾರೀ ವಾಹನ ಚಾಲನಾ ತರಬೇತಿಯನ್ನು ಪಡೆದುಕೊಂಡಿದ್ದಾರೆ.

ಆ ಬಳಿಕ, ಏಪ್ರಿಲ್ 2023 ರಲ್ಲಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಕೌಶಂಬಿ ಡಿಪೋದಲ್ಲಿ 10 ತಿಂಗಳ ಕಾಲ ತರಬೇತಿ ಶಿಬಿರದಲ್ಲಿ ಭಾಗವಹಿಸಿ, ಅದನ್ನು ಯಶಸ್ವಿಯಾಗಿ ಮುಗಿಸಿದರು. ನಿಗಮವು ವೇದಾ ಕುಮಾರಿ ಅವರನ್ನು ಕೌಶಂಬಿ - ಘಾಜಿಯಾಬಾದ್ - ಬದೌನ್ ಮಾರ್ಗಕ್ಕೆ ಬಸ್ ಚಾಲಕಿಯಾಗಿ ನಿಯೋಜಿಸಿತು.
ಇದರೊಂದಿಗೆ ವೇದಾ ಕುಮಾರಿ, ಆ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ನಿಗಮದ ಬಸ್‌ನ ಮೊದಲ ಮಹಿಳಾ ಡ್ರೈವರ್ ಎಂಬ ಹಿರಿಯೆಗೂ ಪಾತ್ರರಾದರು. ಅವರಿಗೆ 10ನೇ ತರಗತಿಯಲ್ಲಿ ಓದುತ್ತಿರುವ ಮಗ ಹಾಗೂ ಶಿಶುವಿಹಾರಕ್ಕೆ ಹೋಗುತ್ತಿರುವ ಮಗಳಿದ್ದಾಳೆ. ದಂಪತಿಗಳಿಬ್ಬರು ಚಾಲಕ - ನಿರ್ವಾಹಕರಾಗಿರುವುದರಿಂದ ಪುಟ್ಟ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವರ ಪುತ್ರ ಹೊತ್ತಿದ್ದಾನೆ.

ಈ ಕಾರಣಕ್ಕೆ ಪತಿ - ಪತ್ನಿ ತಮ್ಮ ಕಾಯಕವನ್ನು ಸುಲಭವಾಗಿ ಮಾಡಲು ಸಾಧ್ಯವಾಗಿದೆ. ವೇದಾ ಕುಮಾರಿ ಹೇಳುವಂತೆ 'ಯಾವುದೇ ಕೆಲಸವು ತುಂಬಾ ಕಷ್ಟಕರವಲ್ಲ. ಮಹಿಳೆಯರೂ ಮನಸ್ಸು ಮಾಡಿದರೆ ಎಂತಹ ಕೆಲಸವನ್ನು ಬೇಕಾದರೂ ಸುಲಭವಾಗಿ ಮಾಡಬಹುದು' ಎನ್ನುತ್ತಾರೆ. ಸದ್ಯ, ಅವರು ಉತ್ತರ ಪದೇಶದ ಸಾರಿಗೆ ನಿಗಮದಲ್ಲಿ ಗುತ್ತಿಗೆ ನೌಕರರಾಗಿದ್ದಾರೆ.
ಇನ್ನು, ವೇದಾ ಕುಮಾರಿ ನಿಜಕ್ಕೂ ದಿಟ್ಟ, ಮಾದರಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಒಂದು ಕಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಲೇ ಬದುಕಿನ ಬಂಡಿ ಎಳೆಯಲು ಬಸ್ ಚಾಲಕಿಯಾಗಿ ದುಡಿಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ಇವರಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications