ಮದುವೆ ದಿನವೇ ವರನಿಗೆ ಕಹಿ ಅನುಭವ: ಕಾರು ಸೀಜ್ ಮಾಡಿ ಠಾಣೆಗೆ ಕರೆದೊಯ್ದ ಪೊಲೀಸರು
ಮದುವೆಗೆ ಮುನ್ನ ಪ್ರಿ-ವೆಡ್ಡಿಂಗ್ ಶೂಟ್, ಮೆರವಣಿಗೆ, ಬುಲ್ಡೊಜರ್ ಏರಿ ಮದುವೆ ಮನೆಗೆ ಬರುವಂತಹ ವಿಚಿತ್ರ ವಿಧಾನಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇವೆಲ್ಲವು ಕಾನೂನು ನಿಯಮಗಳಿಗೆ ಒಳಪಟ್ಟಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದ್ರೆ ನಿಯಮಗಳನ್ನು ಉಲ್ಲಂಘಿಸಿದಾಗ ಮದುವೆಗೆ ಮರೆಯಲಾಗದ ಉಡುಗೊರೆಯನ್ನು ಪೊಲೀಸರು ಕೊಡುತ್ತಾರೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ.
ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ವರನು ತನ್ನ ಮದುವೆ ವಿಶೇಷವಾಗಿರಬೇಕು ಎಂದು ಮಾಡಿದ ಪ್ರಯತ್ನ ವಿಫಲವಾಗಿ ತನ್ನ ಮದುವೆ ಕಾರು ಪೊಲೀಸ್ ಠಾಣೆ ಸೇರಿದೆ. ಮದುವೆಗೆ ತೆರಳುವಾಗ ದಾರಿ ಮಧ್ಯದಲ್ಲಿ ಎಸ್‌ಯುವಿ ಮೇಲೆ ನಿಂತು ಫೋಟೋ ಶೂಟ್ ಮಾಡಿದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಡು ರಸ್ತೆಯಲ್ಲಿ ಇವರು ಮಾಡಿದ ಫೋಟೋ ಶೂಟ್ ಪರಿಣಾಮವನ್ನು ಊಹಿಸದ ಇವರಿಗೆ ಪೊಲೀಸರು ಸರಿಯಾಗಿ ಬುದ್ದಿ ಕಲಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್‌ಯುವಿ ಮೇಲೆ ಮದುವೆಗಾಗಿ ಸೊಗಸಾದ ಉಡುಪು ಧರಿಸಿ ನಿಂತು ಡ್ರೋನ್‌ಗಳನ್ನು ಹಾರಿಸಿ ಫೋಟೋ ಶೂಟ್ ಮಾಡಿದ್ದಾರೆ. ವರದಿಗಳ ಪ್ರಕಾರ ವರನ ಹೆಸರು ಅಂಕಿತ್ ಎಂದು ಗುರುತಿಸಲಾಗಿದೆ. ಈತ ಕಳೆದ ಮಂಗಳವಾರ ಸಹರಾನ್ಪುರದ ಭೈಲಾ ಗ್ರಾಮದಿಂದ ಮೀರತ್‌ನ ಕುಶಾವಲಿ ಗ್ರಾಮದಲ್ಲಿರುವ ತನ್ನ ವಧುವಿನ ಮನೆಗೆ ಮೆರವಣಿಗೆ ಮೂಲಕ ತೆರಳಿದ್ದ. ದಾರಿ ಮಧ್ಯೆ ಫೋಟೋ ಶೂಟ್‌ಗೆ ನಿಲ್ಲಿಸಿ ಈಗ ಸಮಸ್ಯೆಗೆ ಸಿಲುಕಿದ್ದಾನೆ.
ಅಂಕಿತ್ ವಾಹನದ ಮೇಲೆ ನಿಂತಿದ್ದ, ದೆಹಲಿ - ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು ಫೊಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಅನುಮತಿಯಿಲ್ಲದೇ ಡ್ರೋನ್ ಎಗರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ನಿಯಮಗಳ ಉಲ್ಲಂಘನೆಯಾಗಿದ್ದು, ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿರುತ್ತವೆ. ಇತರ ವಾಹನಗಳಿಗೆ ಅಡಚಣೆ ಹಾಗೂ ಅಪಘಾತಗಳು ಆಗುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಕಾರನ್ನು ಸೀಜ್ ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಖತೌಲಿ ಸರ್ಕಲ್ ಆಫೀಸರ್ ಯತೇಂದ್ರ ಸಿಂಗ್ ನಗರ್ ಮಾತನಾಡಿ, "ವರನೊಬ್ಬ ಕಾರಿನ ರೂಫ್ ಮೇಲೆ ಸ್ಟಂಟ್ ಮಾಡುತ್ತಿರುವ ವೀಡಿಯೊದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಮನ್ಸೂರ್ ಪುರ ಪೊಲೀಸರು ಎನ್ಎಚ್ - 58 ನಲ್ಲಿ ಮದುವೆ ಸಂಭ್ರಮವನ್ನು ನಿಲ್ಲಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅವರು ಹೇಳಿದ್ದಾರೆ.
ಅದೇ ದಿನ ವರನ ಮದುವೆ ಇದ್ದ ಕಾರಣ ವರನನ್ನು ಹಾಗೂ ಜೊತೆಗಿದ್ದ ಬಂಧು - ಮಿತ್ರರನ್ನು ಬಿಟ್ಟು ಕಳುಹಿಸಲಾಗಿದೆ. ವರನಿಗೆ ಮತ್ತೊಂದು ಕಾರಿನಲ್ಲಿ ತನ್ನ ಮದುವೆ ಸ್ಥಳಕ್ಕೆ ಹೋಗಲು ಅವಕಾಶ ನೀಡಲಾಯಿತು. ಮದುವೆಗೆ ತಡವಾಗಿ ವರನ ಕಡೆಯವರು ತಲುಪಿದ್ದು, ಮದುವೆ ಅಂದುಕೊಂಡ ಸಮಯಕ್ಕೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಮದುವೆ ಬಗ್ಗೆ ಭವಿಷ್ಯದಲ್ಲಿ ಹೇಳಿಕೊಳ್ಳಲು ಹಾಗೂ ತಮ್ಮ ಮದುವೆ ವಿಶೇಷವಾಗಿರಲು ಪ್ರಿ-ವೆಡ್ಡಿಂಗ್ ಶೂಟ್‌ಗಳಂತಹ ಸಂಸ್ಕೃತಿ ಹೆಚ್ಚಾಗಿಬಿಟ್ಟಿದೆ. ಇದು ತಪ್ಪಲ್ಲ, ಆದ್ರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡುವುದರಿಂದ ನೀವು ಸೇಫ್ ಆಗಿರಬಹುದು. ಏನೇ ಮಾಡದ್ರು ಕಾನೂನು ನಿಯಮಗಳಿಗೆ ಒಳಪಟ್ಟಿದ್ದರೆ ಪೊಲೀಸರು ಕೂಡ ನಿಮ್ಮನ್ನು ಪ್ರಶ್ನಿಸುವುದಿಲ್ಲ ಎಂಬುದನ್ನು ಮರೆಯಬೇಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications